ಮುಖ್ಯ ಪುಟ > ವಿವಿಧ > ಸಾಹಿತ್ಯ > ಲೇಖನ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾರದ ಕನ್ನಡ ಬ್ಲಾಗ್: ಮಜಾವಾಣಿ
ಹಾಸ್ಯ ಲೇಖನ ಬರೆಯುವುದು ತಮಾಷೆ ಸಂಗತಿಯಲ್ಲ. ಇದು ಸುಲಭವೆಂದುಕೊಂಡು ಬರೆಯುವ ಅನೇಕ ಮಂದಿಯ ಬರಹಗಳು ನಗು ಬರಿಸುವುದಿಲ್ಲ, ಬದಲಾಗಿ ಅವು ನಗೆಪಾಟಲಾಗುತ್ತವೆ. ಕನ್ನಡ ಸಾಹಿತ್ಯ ಲೋಕದಲ್ಲಿ ಹಾಸ್ಯ ಬರಹಗಾರರ ಸಂಖ್ಯೆ ತೀರಾ ಕಡಿಮೆ ಎಂದೇ ಹೇಳಬಹುದು. ಇದು ಬ್ಲಾಗಿಗರಿಗೂ ಅನ್ವಯವಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕನ್ನಡ ಬ್ಲಾಗ್ ಪ್ರಪಂಚದ ಆರಂಭದ ಹಂತದಿಂದ 'ಮಜಾವಾಣಿ' (majavani.blogspot.com) ಎಂಬ ಬ್ಲಾಗ್ ಹಾಸ್ಯದ ಮಳೆಯನ್ನೇ ಸುರಿಸುತ್ತಿದೆ.

2005 ರಲ್ಲಿ 'ಮಜಾವಾಣಿ' ಪ್ರಾರಂಭಿಸಿದ ಬ್ಲಾಗ್‌ನ ಸಂಸ್ಥಾಪಕರು ವಾರ್ತಾ ವಿದೂಷಕ ಎಂಬ ನಾಮಧೇಯದಲ್ಲಿ ಲೇಖನಗಳನ್ನು ಬರೆಯುತ್ತಾರೆ. ಇತ್ತೀಚಿನವರೆಗೂ ಅಮೆರಿಕದಲ್ಲಿದ್ದು ಇದೀಗ ಬೆಂಗಳೂರಿನಲ್ಲಿ ನೆಲೆ ಕಂಡುಕೊಂಡಿರುವ ಇವರು ತಮ್ಮ ಅನನ್ಯ ನಿರೂಪಣಾ ಶೈಲಿಯಿಂದ ಗಮನ ಸೆಳೆಯುತ್ತಾರೆ.

'ಮಜಾವಾಣಿ' ಯಲ್ಲಿ ಅಂತಹ ವಿಶೇಷತೆ ಏನಿದೆ? ದೇಶ ವಿದೇಶಗಳಲ್ಲಿ ನಡೆಯುವ ಸಾಮಾನ್ಯ ಸುದ್ದಿಗಳನ್ನು ಹೆಕ್ಕಿ ಅವುಗಳನ್ನು ಹಾಸ್ಯದ ವಿವಿಧ ಮಜಲುಗಳಲ್ಲಿ ಹಾಗೂ ಅನರ್ಥ ಪದಗಳಲ್ಲಿ ಸಿಕ್ಕಿಸಿ ಪ್ರಸ್ತುತಪಡಿಸುವುದೇ ಈ ಬ್ಲಾಗ್‌ನ ವಿಶೇಷತೆ.

ಇತ್ತೀಚೆಗೆ ಅವರು ಬರೆದ "ಹೇಮಮಾಲಿನಿ ಕೆನ್ನೆಯಿಂದ ಸರ್ಕಾರಕ್ಕೆ ಪೇಚು!" ಎಂಬ ಲೇಖನವನ್ನು ಗಮನಿಸಿ ನೋಡಿ. ಕೇಂದ್ರ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರದ ರಸ್ತೆಗಳನ್ನು ಹೇಮಾಮಾಲಿನಿಯವರ ಕೆನ್ನೆಯಂತೆ ನುಣುಪಾಗಿ ಮಾಡುತ್ತೇನೆಂದು ಹೇಳಿಕೊಂಡಿದ್ದ ಸುದ್ದಿಯನ್ನು ಹಿಡಿದು ಅದಕ್ಕೆ ವಿಭಿನ್ನ ರೂಪ ನೀಡಿದ್ದಾರೆ.

"ಕೇಂದ್ರ ರೈಲ್ವೇ ಸಚಿವ ಲಾಲೂ ಪ್ರಸಾದ್ ಯಾದವ್ ಬಿಹಾರದ ರಸ್ತೆಗಳನ್ನು ಹೇಮಮಾಲಿನಿಯವರ ಕೆನ್ನೆಗಳಿಗೆ ಹೋಲಿಸಿರುವ ಸಂಗತಿ ವರದಿಯಾದಂದಿನಿಂದ, ಕೇಂದ್ರ ಕಾಮಗಾರಿ ಇಲಾಖೆಯಲ್ಲದೆ, ಹಲವಾರು ರಾಜ್ಯಗಳ ಕಾಮಗಾರಿ ಇಲಾಖೆಗಳೂ ಸಹ ರಸ್ತೆ ಕಂಟ್ರಾಕ್ಟುದಾರರಿಂದ ತಮ್ಮ ರಸ್ತೆಗಳಲ್ಲಿ ಹೇಮಾರವರ ಕೆನ್ನೆಗಳ ಗುಣಮಟ್ಟವನ್ನೇ ನಿರೀಕ್ಷಿಸುತ್ತಿದ್ದು, ಹೇಮ ಮಾಲಿನಿಯವರ ಕೆನ್ನೆ ಸವರಿ ಪರೀಕ್ಷಿಸಲು ವಿಪರೀತ ಬೇಡಿಕೆ ಉಂಟಾಗಿದೆ."

ಅವರ ಈ ಮೇಲಿನ ಬರಹ ನೋಡಿದರೆ ನಮಗೆ ಅವರ ಒಂದು ಮಜಲು ಅರ್ಥವಾಗುತ್ತದೆ. ಇದಕ್ಕೂ ಮುಂಚೆ ಅವರು ಬರೆದ "ಮಜಾವಾಣಿ: ಪುಸ್ತಕ ಪರಿಚಯ" ಎಂಬ ಒಮ್ಮೆ ಓದಿ ನೋಡಿ. ಅದರಲ್ಲಿ ಅವರು ಸುಳ್ಳು ಸುಳ್ಳೇ ಎರಡು ಪುಸ್ತಕಗಳನ್ನು ಪರಿಚಯಿಸುತ್ತಾರೆ. ಒಂದು 'ಕಿರಿಯರಿಗಾಗಿ ಕಾಮಾ ಸೂತ್ರ', ಮತ್ತೊಂದು 'ಎ ಬ್ರೀಫ್ ಹಿಸ್ಟರಿ ಆಫ್ ಟೈಮ್ ಫಾರ್ ಕಿಡ್ಸ್'. ಮೊದಲನೆಯ ಪುಸ್ತಕದ ಬಗ್ಗೆ ಬರೆಯುತ್ತಾ ಅವರು, ಲಿಂಗ ಪ್ರಭೇಧ, ಕನ್ನಡದ ವಿವಿಧ ಸಂಧಿ, ಅವುಗಳೊಡ್ಡುವ ಸಮಸ್ಯೆ, ವ್ಯಾಕರಣದಿಂದ ಹರಡುವ ರೋಗಗಳು ಇತ್ಯಾದಿಗಳನ್ನು ಸೂಚ್ಯವಾಗಿ ಹೇಳುತ್ತಾರೆ. ಇವು ಖಂಡಿತವಾಗಿ ದ್ವಂದ್ವಾರ್ಥ ಕೊಡುತ್ತವೆ. ಇದು ವಾರ್ತಾ ವಿದೂಷಕರ ಉದ್ದೇಶವೂ ಹೌದು.

ಎರಡನೇ ಪುಸ್ತಕ ಪರಿಚಯವನ್ನು ಅವರು ಬೇರೊಂದು ವಿಶೇಷತೆಯಿಂದ ಮಾಡುತ್ತಾರೆ.

"....ತಮ್ಮ ಮೂಲ ಕೃತಿಯಲ್ಲಿ ಹಾಕಿಂಗ್ ಅಷ್ಟಾಗಿ ಗಣಿತವನ್ನು ಬಳಸಿರಲಿಲ್ಲ. ಆದರೆ, ಕಿರಿಯರ ಆತ್ಮ ಗೌರವವನ್ನು ಹೆಚ್ಚಿಸಲೆಂದೇ ಬರೆದಿರುವ ಈ ಪುಸ್ತಕದಲ್ಲಿ ಹಲವಾರು ಸಂಕೀರ್ಣ ಸಮೀಕರಣಗಳನ್ನು ಬಳಸಿದ್ದು ಓದುಗರಿಗೆ ಅರ್ಥವಾಗದಂತೆ ಬರೆಯುವಲ್ಲಿ ಮತ್ತಷ್ಟು ಯಶ ಕಂಡಿದ್ದಾರೆ. ನಿಮ್ಮ ಮಕ್ಕಳ ಬುದ್ಧಿವಂತಿಕೆಯನ್ನು ಸಾವಿರದ ಐನೂರು ರೂಪಾಯಿಗಳಿಗೆ subtle and sophisticated ಆಗಿ ಪ್ರದರ್ಶಿಸುವಲ್ಲಿ ಈ ಪುಸ್ತಕಕ್ಕಿಂತ ಉತ್ತಮ ವಿಧಾನ ಇನ್ನೊಂದಿಲ್ಲ."

ಇದರಲ್ಲಿ ಹಾಸ್ಯದೊಂದಿಗೆ ನಮ್ಮ ದೈನಂದಿನ ಸತ್ಯವನ್ನು ಮಾರ್ಮಿಕವಾಗಿ ಪ್ರಸ್ತುತಪಡಿಸುತ್ತಾರೆ. ಅರ್ಥವಾಗದ ಪುಸ್ತಕಗಳನ್ನು ಹೊಂದಿದರೆ ಘನತೆ ಹೆಚ್ಚು ಎಂದು ಜನರು ನಂಬುವುದನ್ನು ಇವರು ಸೂಚ್ಯವಾಗಿ ತಿಳಿಸುತ್ತಾರೆ.

ಅಂದಹಾಗೆ, ಕನ್ನಡದಲ್ಲಿ ಕೆಲವಾರು ಹಾಸ್ಯ ಬ್ಲಾಗ್‌ಗಳ ಸ್ಥಾಪನೆಗೆ ಸ್ಫೂರ್ತಿಯಾಗಿರುವ 'ಮಜಾವಾಣಿ' ಗೆ ಮೂಲ ಪ್ರೇರಣೆ ಯಾವುದು ಗೊತ್ತೆ? ಆಂಗ್ಲ ಭಾಷೆಯಲ್ಲಿ ಬಹುಜನಪ್ರಿಯವಾಗಿರುವ ದಿ ಆನಿಯನ್ ಡಾಟ್ ಕಾಂ.
ಮತ್ತಷ್ಟು
ಇದು ರಾಜಕೀಯ ಕಣ್ರೀ
ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು
ಶಹಿದ್ ಭಗತ್ ಸಿಂಗ್‌ರ ನೆನಪಿನಲ್ಲಿ ನೂರು ವರ್ಷ
ಭಾರತದಲ್ಲೀಗ ಡಿಟಿಎಚ್ ಸೇವೆ ನೀಡಲು ಪೈಪೋಟಿ
ವೆಬ್‌ದುನಿಯಾ ವಾರದ ಬ್ಲಾಗ್: ಅವಧಿ
ಮೂರ ಮಂದಿ ಶಾಣ್ಯಾರ ಕೂಡಿ...