ಕನ್ನಡ ಬ್ಲಾಗ್ ವಲಯದ ಆರಂಭಕಾಲದಿಂದಲೂ ನಿರಂತರವಾಗಿ ಬ್ಲಾಗ್‌ಗೆ ಪೂರ್ಣ ಮುಡಿಪು ಹಾಕಿ ಬರೆಯುತ್ತಿರುವ ಕೆಲವೇ ಮಂದಿಗಳಲ್ಲಿ ಸತೀಶ್ ಕುಮಾರ್ ಅವರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ. ಅಮೆರಿಕದ ನ್ಯೂಜೆರ್ಸಿಯಲ್ಲಿ ವಾಸವಾಗಿರುವ ಸತೀಶ್ ಕುಮಾರ್ ಅವರ ಬ್ಲಾಗ್ ಹೆಸರು "ಅಂತರಂಗ" (antaranga.blogspot.com). ಹೆಸರೇ ಹೇಳುವಂತೆ ಇದು ಸತೀಶ್ ಅವರ ಅಂತರಂಗ ಅನಾವರಣಗೊಳ್ಳುವ ತಾಣವಾಗಿದೆ.
ಅಮೆರಿಕದಲ್ಲಿದ್ದುಕೊಂಡು ಕನ್ನಡವನ್ನು ತುಂಬು ಸ್ಫೂರ್ತಿಯಿಂದ ಬರೆಯುವುದೆಂದರೆ ಅದು ದೊಡ್ಡ ವಿಚಾರವೇ. ಬಹುತೇಕ ಪ್ರತಿದಿನವೂ ಬ್ಲಾಗಿಗೆ ಬರೆಯುವ ಸತೀಶ್ ಅವರು ಅದರಲ್ಲಿ "ಮನಸಿಗೆ ಬಂದಂತೆ ಬರೆಯುತ್ತಾರೆ". ಅಂದರೆ ಇದರ ಅರ್ಥ ಅವರು "ಮನಸಿಗೆ ಬಂದಂತೆ ಗೀಚುತ್ತಾರೆ" ಎಂದಲ್ಲ ಎಂಬುದನ್ನು ಗಮನಿಸಿ. ತಮ್ಮ ಜೀವನದಲ್ಲಿ ಆದ ಸಣ್ಣ ದೊಡ್ಡ ಘಟನೆಗಳು, ತಮ್ಮ ಮನಸ್ಸಿನಲ್ಲಿ ಹೊಯ್ದಾಡುವ ಸಣ್ಣ ದೊಡ್ಡ ಭಾವನೆಗಳನ್ನು ಬಿಡಿಸಿ ಹೇಳುವ ಪರಿ ಮತ್ತು ವಿಷಯಗಳು ನಿಜಕ್ಕೂ ಅನನ್ಯವಾದುವಾಗಿವೆ. ಅವರ ಈ ತಮ್ಮದೇ ಸ್ವಂತ ಜೀವನದ ಅನುಭವ ಬರಹಗಳಲ್ಲಿ ಪ್ರತಿಯೊಬ್ಬ ಜನಸಾಮಾನ್ಯರ ಜೀವನದಲ್ಲಿ ಎದುರಾಗುವ ವಿಷಯಗಳೇ ಆಗಿರುತ್ತವಾದ್ದರಿಂದ ಯಾವುದೇ ಓದುಗರಿಗೆ ಈ ಬ್ಲಾಗ್ ಆಪ್ಯಾಯಮಾನವಾಗುತ್ತದೆ.
ಇತ್ತೀಚಿನ ಒಂದು ಲೇಖನದಲ್ಲಿ ಸತೀಶ್ ಅವರು ತಮ್ಮ ಕ್ಷೌರಿಕರೊಂದಿಗೆ ನಡೆದ ಘಟನೆಯನ್ನು ಪ್ರಸ್ತಾಪಿಸುತ್ತಾರೆ. 'Was your marriage arranged or you picked your wife?' ಎಂದು ಓರ್ವ ಕ್ಷೌರಿಕಳು ಇವರಿಗೆ ಪ್ರಶ್ನೆ ಎಸೆದದ್ದನ್ನು ಮೊದಲು ಪ್ರಸ್ತಾಪಿಸುವ ಅವರು ಆ ನಂತರ ಈ ಲೇಖನದಲ್ಲಿ ಮಹಿಳಾ ಕ್ಷೌರಿಕರು, ಅವರೊಂದಿಗಿನ ತಮ್ಮ ಅನುಭವಗಳು, ಭಾವನೆಗಳು, ಭಾರತದಲ್ಲಿರುವ ಕ್ಷೌರಿಕ ವೃತ್ತಾಂತಗಳು ಹೀಗೆ ನಾನಾ ಸ್ತರದಲ್ಲಿ ವಿಚಾರವನ್ನು ಪ್ರಸರಿಸತೊಡಗುತ್ತಾರೆ. ಇವೆಲ್ಲಾ ಆದ ನಂತರ ಮೊದಲು ಪ್ರಸ್ತಾಪವಾದ ಪ್ರಶ್ನೆಗೆ ಇವರದ್ದು ಉತ್ತರ 'No and yes. Was I free to pick anyone as my wife? No. Did I pick or chose my wife? Yes.' ಅವರ ಈ ಉತ್ತರದಲ್ಲಿ ನಮ್ಮ ಸಂಪ್ರದಾಯದಲ್ಲಿರುವ ಸಂದಿಗ್ಧತೆಗಳು ವ್ಯಕ್ತವಾಗುತ್ತವೆ. ಲೇಖನದ ಅಂತ್ಯದಲ್ಲಿ ಅವರೇ ಈ ಸಂದಿಗ್ಧತೆಗೆ ಕಿರು ಪರಿಹಾರ ನೀಡುತ್ತಾರೆ. 'It varies (in India)...there are one billion people over there and as many cultures!' (ಭಾರತದಲ್ಲಿ 100 ಕೋಟಿ ಜನರಿದ್ದಾರೆ ಹಾಗೂ ಅಷ್ಟೇ ಸಂಖ್ಯೆಯಲ್ಲಿ ಸಂಸ್ಕೃತಿಗಳಿವೆಯಾದ್ದರಿಂದ ಈ ಪ್ರಶ್ನೆಗೆ ಉತ್ತರಗಳೂ ಬೇರೆ ಬೇರೆಯಾಗಿರುತ್ತವೆ ಎಂಬುದು ಸತೀಶ್ ಅವರ ಮಾತಿನ ಅರ್ಥ).
ಓರ್ವ ವ್ಯಕ್ತಿಯು ಅಮೆರಿಕದಂಥ ದೂರ ದೇಶದ ದೂರ ಸಂಸ್ಕೃತಿಯ ನಾಡಿನಲ್ಲಿ ಹಲವಾರು ವರ್ಷಗಳು ನೆಲಸಿದನೆಂದರೆ ಆ ತಾಯಿನಾಡಿನ ಆಗುಹೋಗುಗಳ ಬಗ್ಗೆ ಯಾವುದೇ ಆಸಕ್ತಿ ತಳೆದಿರುವ ಸಾಧ್ಯತೆಗಳು ಬಹಳ ಕಡಿಮೆಯೇ. ಆದರೆ ಅಂತರಂಗದ ಸತೀಶ್ ಅವರಿಗೆ ನಾಡಿನ ಆಗುಹೋಗಿನ ಬಗ್ಗೆ ಅವಿರತ ತುಡಿತವಿದೆ. ಬೇರೆ ಬುದ್ಧಿಜೀವಿಯಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಡಿನ ಆಗುಹೋಗುಗಳನ್ನು ವ್ಯಾಖ್ಯಾನಿಸುವುದಿಲ್ಲ. ಕನ್ನಡನಾಡಿನ ಜನಸಾಮಾನ್ಯನೊಬ್ಬನಂತೆ ನಿಂತು ಯೋಚಿಸುವ ಅವರ ಅಂತರಂಗದಲ್ಲಿ ನಿಜವಾದ ಭಾರತೀಯನ, ಕನ್ನಡಿಗನ ಆಂತರ್ಯವಿದೆ.
'ಕನಸುಗಾರರು ಬೇಕಾಗಿದ್ದಾರೆ...' ಎಂಬ ಒಂದು ಲೇಖನದಲ್ಲಿ ಭಾರತೀಯ ರಾಜಕೀಯದ, ಅದರಲ್ಲೂ, ಕರ್ನಾಟಕ ರಾಜಕೀಯದ ಬಗ್ಗೆ ಸಣ್ಣ ವಿಶ್ಲೇಷಣೆ ನಡೆಸುತ್ತಾರೆ. ಕರ್ನಾಟಕದಲ್ಲಿ ನಡೆದಿರುವ ಹಾಳು ರಾಜಕೀಯ ದೊಂಬರಾಟದ ಹಿನ್ನೆಲೆಯಲ್ಲಿ ಇದನ್ನು ದಾಟಿ ಹೋಗುವ ಅವರು ನಿಜವಾದ ರಾಜಕೀಯ ಮುಖಂಡರ ಕೊರತೆಯಿದೆ ಎಂದು ಹೇಳುತ್ತಾರೆ. ಅವರ ಅನಿವಾಸಿ ಭಾರತೀಯ ಸ್ನೇಹಿತರೊಬ್ಬರು ರಾಜಕೀಯಕ್ಕೆ ಧುಮುಕಲು ಯೋಚಿಸುತ್ತಿದ್ದುದನ್ನು ಪ್ರಸ್ತಾಪಿಸುವ ಸತೀಶ್, ರಾಜಕೀಯ ಪಕ್ಷದಿಂದ ಚುನಾವಣಾ ಸೀಟಿಗಾಗಿ ಪಡಬೇಕಾದ ಪಾಡನ್ನು ತಮ್ಮ ಜೀವನದ ಅನುಭವವೊಂದರಿಂದ ಹೆಕ್ಕಿ ವಿವರಿಸುತ್ತಾರೆ.
ಒಂದೆಡೆ, ಭಾರತೀಯ ರಾಜಕಾರಣಕ್ಕೆ ಪ್ರಾಮಾಣಿಕ, ಉತ್ಸಾಹಿತ, ತಾಜಾ ವ್ಯಕ್ತಿಗಳ ಅವಶ್ಯಕತೆ ಇದೆ; ಮತ್ತೊಂದೆಡೆ, ಇಂತಹ ಪ್ರಾಮಾಣಿಕ ವ್ಯಕ್ತಿಗಳಿಗೆ ರಾಜಕಾರಣದಲ್ಲಿ ಹೋಗುವುದು ದುಸ್ತರ ಎಂಬ ದುರದೃಷ್ಟಕರ ಸಂಗತಿ ಇದೆ. ಈ ಗೊಂದಲ ಮತ್ತು ಅನಿಶ್ಚಿತತೆಯಲ್ಲಿ ಅವರು - "ಭಾರತ/ಕರ್ನಾಟಕದ ಚುನಾವಣೆಯಲ್ಲಿ ಆಸಕ್ತಿ ಇರುವ ನನ್ನ ಸ್ನೇಹಿತರಿಗೆ ನಾನು ಅವರ ಗುರಿಯನ್ನು ನೋಡಿ ಪ್ರಸಂಶಿಸಲೂ ಇಲ್ಲ, ಅವರ ಉತ್ಸಾಹಕ್ಕೆ ತಣ್ಣೀರೆರಚಲೂ ಇಲ್ಲ. ಆದರೆ, ಅವರ ಕನಸಿನ ಪ್ರಕಾರ ನಡೆದಿದ್ದೇ ಆದಲ್ಲಿ ಸಾಕಷ್ಟು ಕಷ್ಟ-ನಷ್ಟಗಳನ್ನು ಅನುಭವಿಸಬೇಕು ಎನ್ನುವುದಂತೂ ಖಚಿತ. ಅವರು ಮುಂದೆ ಏನಾಗುತ್ತಾರೋ ಬಿಡುತ್ತಾರೋ ನಮ್ಮ ಹಾರೈಕೆ ಸದಾ ಅವರ ಜೊತೆ ಇರಲಿ" ಎಂದು ಅಭಿಪ್ರಾಯಪಡುತ್ತಾರೆ.
'ಅಂತರಂಗ'ದ ಬ್ಲಾಗ್ ಸಂಪಾದಕರು ತಮ್ಮ ಲೇಖನಗಳು ನೀರಸವಾಗುತ್ತಿವೆ, ಇನ್ನಷ್ಟು ಉತ್ತಮವಾಗಿ ಬರೆಯಬೇಕೆಂದು ಒಂದೆಡೆ ಹೇಳುತ್ತಾರೆ. ಪ್ರತಿದಿನವೂ ಬ್ಲಾಗಿನಲ್ಲಿ ಲೇಖನ ಬರೆಯುವ ಅವರು ಬರಹಗಳನ್ನು ಮತ್ತೂ ಉತ್ತಮವಾಗಿ ಬರೆಯಲು ತಹತಹಿಸುವುದನ್ನು ನಾವೆಲ್ಲರೂ ಮೆಚ್ಚಲೇಬೇಕು. ಅವರಲ್ಲಿ ಈ ಸ್ಫೂರ್ತಿ ಹೀಗೆಯೇ ನೆಲೆಸಿರಲಿ.
|