ಮುಖ್ಯ ಪುಟ  ವಿವಿಧ > ಸಾಹಿತ್ಯ > ಲೇಖನ
 
ಲಾಲೂ ತಂತ್ರ ರೈಲಿನೊಳಗೆ ಹಣದ ಯಂತ್ರ..!
ಮಂಜುನಾಥ ಬಂಡಿ

ಕೇವಲ ಒಂದು ದಶಕಗಳ ಹಿಂದೆ ತೀವ್ರ ಹಾನಿಯನ್ನನುಭವಿಸುತ್ತಾ ಅವಸಾನದ ಅಂಚಿಗೆ ತಳ್ಳಲ್ಪಡುತ್ತಿದ್ದ ಭಾರತೀಯ ರೈಲ್ವೆ ಇಲಾಖೆಗೆ ಕಾಯಕಲ್ಪ ನೀಡಿ ಹಾನಿಯನ್ನು ಹೊಡೆದೋಡಿಸಿ ಅಲ್ಪ ವರ್ಷಗಳಲ್ಲಿಯೇ ಅಪಾರ ಲಾಭದಲ್ಲಿ ಮುನ್ನಡೆಯುವಂತೆ ಮಾಡಿದ ನಮ್ಮ ರೈಲು ಸಚಿವ ಲಾಲೂ ಪ್ರಸಾದ್ ಯಾದವ್, ನಿತ್ಯವೂ ನೂತನ ಪ್ರಯೋಗಗಳಿಗೆ ಕೈಹಾಕುತ್ತಿರುವುದಲ್ಲದೇ ಅದರಲ್ಲಿ ಯಶಸ್ವಿಯೂ ಆಗುತ್ತಾ ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂತಹ ವಾತಾವರಣವನ್ನು ನಿರ್ಮಿಸುತ್ತಿದ್ದಾರೆ.

ಪ್ರಯಾಣಿಕರಿಗೆ ಅತ್ಯುತ್ತಮ ಸೌಕರ್ಯಗಳನ್ನು ಒದಗಿಸುವುದರೊಂದಿಗೆ, ದೇಶಿ ಉತ್ಪನ್ನಗಳಿಗೆ ಬೇಡಿಕೆ ಬರುವ ನಿಟ್ಟಿನಲ್ಲಿ ರೈಲು ನಿಲ್ದಾಣಗಳಲ್ಲಿ ಮಣ್ಣಿನ ಮಡಿಕೆಯಲ್ಲಿಯೇ ಚಹಾ ಕುಡಿಯಬೇಕೆನ್ನುವ ಯೋಜನೆ, ಕೃಷಿ ಪಾರ್ಕ್ ಸ್ಥಾಪನೆ ಮುಂತಾದ ತಂತ್ರದಿಂದ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವುದರೊಂದಿಗೆ ಆರಂಭವಾಗಿದ್ದವು ಲಾಲು ತಂತ್ರಗಳು. ಇವೆಲ್ಲವುಗಳಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಲಾಲೂ ರೈಲಿನಲ್ಲಿ ಎಟಿಎಂ ಯಂತ್ರಗಳನ್ನು ಸ್ಥಾಪಿಸಲು ಸನ್ನದ್ಧರಾಗಿದ್ದಾರೆ.

ಹೌದು ನೀವು ನಂಬಲೇಬೇಕು..! ಹೆಚ್ಚು ಹೆಚ್ಚು ಪ್ರಯಾಣಿಕರನ್ನು ತನ್ನತ್ತ ಸೆಳೆಯುವಲ್ಲಿ ಲಾಲು ಅನುಸರಿಸುತ್ತಿರುವ ನೂತನ ತಂತ್ರವೆಂದರೆ ಹಣದ ಯಂತ್ರವನ್ನೇ ಅಂದರೆ 'ಎಟಿಎಂ'ನ್ನು ರೈಲಿನೊಳಗಡೆ ಸ್ಥಾಪಿಸಲು ಉದ್ದೇಶಿಸಿದ್ದು, ಒಂದೊಮ್ಮೆ ಈ ಯೋಜನೆ ಸಫಲಗೊಂಡರೆ, ರೈಲುಗಳ್ಳರಿಗೆ ಕಡಿವಾಣ ಹಾಕಿದಂತಾಗುತ್ತಲ್ಲದೆ, ಪ್ರಯಾಣಿಕರಿಗೆ ಕೈಚಾಚಿದರೆ ಹಣ ಸಿಗುವಂತಾಗುತ್ತದೆ ಎನ್ನುತ್ತಾರೆ ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಗಳು.

ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಹಲವು ರೈಲು ನಿಲ್ದಾಣಗಳಲ್ಲಿ ಆಯ್ದ ಬ್ಯಾಂಕ್‌ಗಳ ಎಟಿಎಂ ಯಂತ್ರಗಳನ್ನು ಸ್ಥಾಪಿಸಿದ್ದು, ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಆಯ್ದ ಜನಪ್ರಿಯ ರೈಲುಗಳಲ್ಲಿಯೇ ಈ ಎಟಿಎಂ ಯಂತ್ರ ಸ್ಥಾಪನೆಗೆ ಇಲಾಖೆಗೆ ಮುಂದಾಗಿದ್ದು, ಇದಕ್ಕಾಗಿ ಅಧ್ಯಯನವನ್ನು ಸಹ ನಡೆಸುತ್ತಿದ್ದು, ಈ ಸಂಬಂಧ ಕೆಲವು ರಾಷ್ಟ್ರೀಕೃತ ಬ್ಯಾಂಕ್‌ಗಳೊಂದಿಗೆ ಮಹತ್ವದ ಮಾತುಕತೆಯನ್ನು ಸಹ ನಡೆಸಿದ್ದೇವೆ ಎನ್ನುತ್ತಾರೆ.

ರೈಲಿನಲ್ಲಿ ಎಟಿಎಂ ಅಳವಡಿಸುವುದರಿಂದ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಲೂಟಿ ನಡೆಯುವ ಅಪಾಯವನ್ನು ಇಲಾಖೆ ಮನಗಂಡಿದೆ. ಈ ಪ್ರದೇಶಗಳಲ್ಲಿ ಓಡಾಡುವ ರೈಲುಗಳಲ್ಲಿ ನಾವು ಎಟಿಎಂ ಸ್ಥಾಪನೆಯ ಯೋಜನೆಯನ್ನು ಕೈಬಿಟ್ಟಿದ್ದೇವೆ. ಕೇವಲ ಪ್ರಮುಖ ನಗರಗಳ ಮಧ್ಯೆ ಸಂಚರಿಸುವ ಆಯ್ದ ರೈಲುಗಳಲ್ಲಿ ಮಾತ್ರ ಈ ಯೋಜನೆಯನ್ನು ಆರಂಭಿಸಲು ನಿರ್ಧರಿಸಿದ್ದು, ಇದು ಯಶಸ್ವಿಯಾದರೆ ನಿಧಾನವಾಗಿ ಇನ್ನಿತರ ಪ್ರದೇಶಗಳಲ್ಲಿ ಈ ಯೋಜನೆ ಅಳವಡಿಕೆ ಕುರಿತು ರೈಲ್ವೆ ಇಲಾಖೆ ನಡೆಸುತ್ತದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.
ಮತ್ತಷ್ಟು
ವೆಬ್‌ದುನಿಯಾ ವಾರದ ಬ್ಲಾಗ್: ಅಂತರಂಗ
ವಾರದ ಕನ್ನಡ ಬ್ಲಾಗ್: ಮಜಾವಾಣಿ
ಇದು ರಾಜಕೀಯ ಕಣ್ರೀ
ವೆಬ್‌ದುನಿಯಾ ವಾರದ ಬ್ಲಾಗ್: ಋಜುವಾತು
ಶಹಿದ್ ಭಗತ್ ಸಿಂಗ್‌ರ ನೆನಪಿನಲ್ಲಿ ನೂರು ವರ್ಷ
ಭಾರತದಲ್ಲೀಗ ಡಿಟಿಎಚ್ ಸೇವೆ ನೀಡಲು ಪೈಪೋಟಿ