ಜಯಶ್ರೀ ಕಾಸರವಳ್ಳಿ ಕಮಲತ್ತೆಯ ಬಹುದಿನದ ಕನಸೊಂದು ಅಂದಿಗೆ ಸಜೀವಗೊಳ್ಳುವುದಿತ್ತು. ಅಂದು ತಾವು ಎಲ್ಲರಗಿಂತ ಬೇಗ ಏಳಬೇಕೆಂದು ಅನೇಕ ದಿನಗಳಿಂದ ಅವರು ಯೋಜಿಸಿದ್ದೇನೋ ಸರಿ. ಆದರೆ, ಮದುವೆಯ ಹಿಂದಿನ ಮೂರು ದಿನಗಳಿಂದ ನಿದ್ದೆ ಸರಿ ಬೀಳದೆ, ಮದುವೆಯ ದಿನ ಬೆಳಗಿನ ಜಾವ ಸಣ್ಣ ಜೋಂಪು ಹತ್ತಿಬಿಟ್ಟು, ಅವರ ಸಾಲು ಹಿಡಿದು ನಿಂತ ಸೊಸೆಗಳು ಪೈಕಿ ಒಬ್ಬಳು. "...ಅತ್ತೆ, ಇದೆಂಥ ಮದುವೆಯ ದಿನ ನಿಮಗೆ ನಿದ್ದೆಯಾ...?" ಎಂದು ಭುಜ ಅಲುಗಿಸಿ ಕೂಗಿದಾಗಲೇ ಅವರಿಗೆ ಎಚ್ಚರ.
"ಅರೇ, ಇಂತಹ ಒಂದು ಸುದಿನಕ್ಕಾಗಿ ಎಷ್ಟು ವರ್ಷದಿಂದ ನಾ ಕಾದವಳು... ಇವತ್ತೆ ಇಂತಹ ಹಾಳು ನಿದ್ದೆಯಾ..?" ಎಂದು ದಂಗುಬಡಿದು ಗಡಬಡಿಸಿ ಎದ್ದಿದ್ದರು.
ಮದುವೆಯ ಹುಡುಗಿಯ ಅಜ್ಜಿಯಾದರೇನು? ಬಚ್ಚಲು ಮನೆ ಎಂಬುವುದು ಖಾಲಿ ಇರಬೇಕಲ್ಲ? ಅದು ಯಾರ ಬೀಗರ ಕಡೆಯವರು, ಯಾರು ಹೆಣ್ಣಿನ ಕಡೆಯರು ಎಂದು ಗೊಂದಲ ಎಬ್ಬಿಸುವ ಹಾಗೆ ತುಂಬಿಕೊಂಡಿದ್ದ ಜನರು... ಆ ಆಗಾಧ ಮನೆಯಲ್ಲಿ ಎಷ್ಟು ಜನರು ಬಂದರೂ, ಹಿಡಿಸುತ್ತಾರೆ ಎಂದು ಅವರು ಒಂದು ಕಾಲದಲ್ಲಿ ಅಂದುಕೊಂಡಿದ್ದ ಅವರ ನಂಬಿಕೆಯನ್ನೇ ಸುಳ್ಳು ಮಾಡುವ ಹಾಗೆ ಕಾಲಿಗೆ, ಕೈಗೆ ಸಿಗುವ ಯಾವುದೋ ಗಂಡುಗಳು.... ಯಾವುದೋ ಹೆಣ್ಣುಗಳು....ಮಕ್ಕಳು ಮರಿಗಳು....ಚಿಳ್ಳೆ ಪಿಳ್ಳೆಗಳು.
ಗುರುತಿರುವವರು "ಅತ್ತೆ ಚೆನ್ನಾಗಿದ್ದೀರಾ?" ಎಂದು ಕೇಳುತ್ತಿದ್ದರು. ಎಪ್ಪತ್ತರ ತಮ್ಮ ಮಾಸಲು ಕಣ್ಣಿಗೆ ಕೈ ಅಡ್ಡ ಹಿಡಿದು ಕಮಲತ್ತೆ, "ಅರೇ, ನೀ ಶಂಕ್ರು ಅಲ್ವಾ? ಎಷ್ಟು ವರ್ಷ ಆತೋ ನಾ ಇವನೆಲ್ಲ ಕಂಡು... ಪಾರೋತಿ ಸತ್ತೇ ಹೋದ್ಲಲ್ಲಾ..." ಎಂದು ಅನುಕಂಪ ಮಿಶ್ರಿತ ಶೋಕ ವ್ಯಕ್ತಪಡಿಸುತ್ತಾ, ಬಚ್ಚಲಲ್ಲಿ ಅನಿವಾರ್ಯವಾಗಿ ಕಾಯಬೇಕಿದ್ದ ಕ್ಯೂಗಳಲ್ಲಿ ತಾವು ಒಬ್ಬರಾಗಿದ್ದರು. ಅವರ ಮನೆತನಕ್ಕೆ ಸದ್ಯಕ್ಕೆ ಹಿರಿಯರಾಗಿ ಉಳಿದಿರುವುದು ಅವರೊಬ್ಬರೆ. ಆ ಹೆಮ್ಮೆ ಕತ್ತಿನ ಪಟ್ಟ ಅವರ ಮಾತಿನಲ್ಲಿ ಆಗಾಗ ವ್ಯಕ್ತವಾಗುತ್ತಿತ್ತು.
ಈ ಎಪ್ಪತ್ತು ವರುಷದಲ್ಲಿ ಅವರ ಕಣ್ಣು ಮುಂದೆ ಸತ್ತ ಪಾರೋತಿ, ಕಮಲಾಕ್ಷಿ, ಸರೋಜಾ, ಶಕುಂತಲಾ ಒಂದು ಪಟ್ಟಿ ಬೆಳೆಸಿಕೊಳ್ಳುತ್ತಾ, ಸೀನ.... ಶಂಬು.... ನಾರಾಯಣ.... ಸುಬ್ಬ... ವೆಂಕಣ್ಣ ಕಳೆದುಕೊಂಡವರ ಜೀವಗಳ ಪಟ್ಟಿ ಹೆಚ್ಚುತ್ತಾ ಹೋದ ಹಾಗೆ ಕಮಲತ್ತೆ ನಿರಾಯಾಸವಾಗಿ ಅವರನ್ನೆಲ್ಲ ಮರೆಯುತ್ತಾ ಬಂದಿದ್ದರು. ಹಾಗಾಗಿ ಎಂದೋ ಸಂಭವಿಸುವ ಒಂದು ಮದುವೆ ಮುಂಜಿಗಳಲ್ಲಿ ಅಪರೂಪಕ್ಕೆ ಕಣ್ಣಿಗೆ ಬೀಳುವ ಅವರೆಲ್ಲರ ಮಕ್ಕಳ ಗುರುತು ಆಕೆಗೆ ಇರುತ್ತಿರಲಿಲ್ಲ.
ಯಾರಾದರೂ "ನಾ ಪಾರೋತಿಯ ಮಗ ಅಂದರೆ, ಯಾವ ಪಾರೋತಿ ಮಗನೋ? ತೀರ್ಥಹಳ್ಳಿದೋ, ಕನ್ನಡ ಜಿಲ್ಲೆದೋ?" ಎಂದು ವಿಚಾರಿಸಿಕೊಳ್ಳುತ್ತಿದ್ದಳು. ಅವನು ತಾನು ಯಾವ ಪಾರೋತಿ ಮಗನು ಎಂದು ಹೇಳಿ ಮುಗಿಸಿ ಅರ್ಧಗಂಟೆ ಕಳೆಯುವುದರೊಳಗೆ ಅವರು ಮರೆತು ಬಿಡುತ್ತಿದ್ದರು.
ಆದರೆ, ಇಂದು ಹಾಗಲ್ಲವಲ್ಲಾ.
|