...ಇತ್ತ ಕಮಲತ್ತೆ ಸ್ನಾ ಮಾಡಿ ಬಂದರು. ಅವರಿಗೆ ಈ ಎಪ್ಪತ್ತು ವರುಷ ಬದುಕಿದ್ದ ತಮ್ಮ ಮನೆಯಲ್ಲೇ ಹಾದಿ ತಪ್ಪಿದ ಹಾಗೆ ಆಗುತ್ತಿತ್ತು. ಅವರ ಕಡೆ ಮಗಳ ಮದುವೆ ಆಗಿ ಆಗಲೇ ಹನ್ನೆರಡು ವರುಷಗಳೇ ಕಳೆದು, ಆಗ ಓಡಿ ಆಡಲು ಇಷ್ಟು ನಿತ್ರಾಣ ಎನ್ನಿಸದೇ ಸ್ವಲ್ಪವಾದರೂ ಶಕ್ತಿ ಇತ್ತು. ಆದರೆ, ಅವರ ಬಹುದಿನದ ಆಸೆಯ ಈ ಮೊಮ್ಮಗಳ ಮದುವೆ ಹತ್ತಿರವಾಗುತ್ತಿದ್ದಂತೆ ಅವರು ಒಳಗೊಳಗೇ ಕುಸಿಯುತ್ತಿದ್ದರು. ಹೊರಗೆ ಉತ್ಸಾಹದಿಂದಲೇ ಓಡಿಯಾಡುತ್ತಿದ್ದರೂ ಮನಸ್ಸು ರಾಡಿ ಎದ್ದು ಹೋಗಿತ್ತು. ಒಂದು ರೀತಿಯ ಅರೆಮರಳು... ಜ್ಞಾಪಕ.... ಗೊಂದಲಗಳ ನಡುವೆ ಕಸಿವಿಸಿಗೊಳ್ಳುತ್ತಾ ಅಸಂಖ್ಯ ಜನಗಳು ದಿಕ್ಕುಗೆಟ್ಟವರಂತೆ ಹಾದಿ ಹುಡುಕುತ್ತಿದ್ದರು....
ಎಂದಿನಿಂದಲೂ ತಿಳಿದಿದ್ದ ಆ ಮನೆಯನ್ನು, ಹಳೇಮನೆ ಎಂದು ಮಗ ತನ್ನ ಮಗಳ ಮದುವೆಗಾಗಿ ಕೆಡವಿ ಹೊಸ ರೂಪ ಕೊಟ್ಟಿದ್ದರಿಂದ ಹಾಗೆ ಆಗುತ್ತಿರಬಹುದೆಂದುಕೊಂಡರು. ಕೋಣೆಗೆ ಹೋಗಬೇಕಾದವರು ಹೆಬ್ಬಾಗಿಲಿಗೆ ಬರುತ್ತಿದ್ದರು. ಹೆಬ್ಬಾಗಿಲು ದಾಟಿ, ಅಡುಗೆ ಮನೆಗೆ ನುಗ್ಗುತ್ತಿದ್ದರು. ಅರೇ! ಇದೆಲ್ಲಿ ಬಂದೆ! ಎಂದು ತಿರುಗಿ ಹೋದವರು ಪಡಸಾಲೆಗೆ ಹೋಗುತ್ತಿದ್ದರು. ಕಡೆಗೆ ತಾವು ಬದುಕಿಬಂದ ತಮ್ಮ ಮನೆಯ ಹಾದಿಯೇ ತಿಳಿಯದಂತೆ, ಕಣ್ಣಿಗೆ ಕಂಡ ಮದುವೆಗೆ ಬಂದ ನೆಂಟರಲ್ಲಿ ಒಬ್ಬಳಿಗೆ "ಏ ಇವಳೇ, ನನ್ನೂಂಚೂರು ಒಳಗಿನ ಆ ಕನ್ನಡಿ ಕೋಣೆಗೆ ಕರೆದುಕೊಂಡು ಹೋಗುತ್ತೀಯಾ....?" ಎಂದು ಕೇಳಿದ್ದರು.
ಏಕೆಂದರೆ ಮದುಮಗಳನ್ನು ಸಿದ್ಧಗೊಳಿಸುತ್ತಿದ್ದದ್ದು ಅವರ ಎಪ್ಪತ್ತು ವರುಷದ ಜೀವನದಲ್ಲಿ ತೀರಾ ಚಿರಪರಿಚಿತವಾಗಿದ್ದ ಅದೇ ಕೋಣೆಯಲ್ಲಿ.
ಕೋಣೆಗೆ ಬರುತ್ತಿದ್ದ ಹಾಗೇ ಮತ್ತೆ ಕಮಲತ್ತೆಗೆ ಕಂಗೆಡುವಂತಾಗಿತ್ತು. ಅಲ್ಲಿ ಕಂಡ ಯಾರಿಗೋ, "ಮದುಮಗಳ ಸ್ನಾನ ಆಯಿತಾ?" ಕೇಳಿದರು.
"...ಎಂತಾ ಅತ್ತೇ, ಅವಳ ಸ್ನಾನ ಯಾವಾಗಲೋ ಆಯಿತು. ನೋಡಿ, ಹೇಗೆ ಅಲಂಕಾರಗೊಂಡು ಚಿನ್ನದ ಪುತ್ಥಳಿಯ ಹಾಗೆ ಕಾಣುತ್ತಿದ್ದಾಳೆ ನಿಮ್ಮ ಮೊಮ್ಮಗಳು...."ಎಂದು ಗಟ್ಟಿಯಾಗಿ ಹೇಳಿದ್ದಷ್ಟೇ ಕೇಳಿಸಿತು.
ಎಪ್ಪತ್ತು ವರುಷವಾದರೂ ಕಮಲತ್ತೆಗೆ ಕಿವಿ ಕಿವುಡಾಗಿರಲಿಲ್ಲ. ಆದರೆ, ಕಣ್ಣು ಯಾಕೋ ಇದ್ದಕ್ಕಿದ್ದಂತೆ ಮಸುಕು ಮಸುಕಾಗಿ, ವಿಶೇಷವಾಗಿ ಅಂದು ಯಾವುದೂ ಸ್ಪಷ್ಟವಾಗಿ ಕಾಣಿಸದಂತೆ ಅವರಿಗೆ ಅನ್ನಿಸುತ್ತಿತ್ತು.
"...ಎಲ್ಲಿದ್ದಾಳೆಯೇ ಅವಳು? ಅಷ್ಟು ಜನ ಮುತ್ತಾಕ್ಕೊಂಡ್ರೆ ನಂಗೆ ಹೇಂಗೆ ಕಾಣುತ್ತೇಳು....?"
"ಅಯ್ಯೋ ಅತ್ತೇ! ಇಂತಾ ಮೊಮ್ಮಗಳೇ ನಿಮ್ಮ ಕಣ್ಣಿಗೆ ಬೀಳಲಿಲ್ಲ ಅಂದ್ರೆ ಮತ್ತೆಂತಾ ಕಾಣುಸುತ್ತೇ..." ಅವರ ಸೊಸೆ ಅನುಕಂಪದಿಂದ ನುಡಿದಾಗ, ನೆರೆದವರ ಮುಖಗಳಲ್ಲಿ ನಗೆ ಆಡಿದ ಸದ್ದು ಕಿವಿಗೆ ಬಿದ್ದು, ಕಮಲತ್ತೆಗೆ ಎಲ್ಲೋ ಚುರ್ರ್ ಚುರ್ರ್ ಅಂದ ಹಾಗೆ ಆಯಿತು.
"...ಸರಿಬಿಡು....! ನಾ ಆಮೇಲೆ ಅವಳನ್ನ ನೋಡ್ತೀನಿ...." ಎಂದು ತಾವೂ ಸೀರೆಯುಟ್ಟು, ಸಿದ್ಧರಾಗಲು ತಿರುಗಿದವರು. ಅದಾಗಷ್ಟೇ ನೆನಪಿಗೆ ಬಂದವರಂತೆ, ಐದು ವರುಷದಿಂದ ಬ್ಯಾಂಕಿನಲ್ಲಿ ಗುಪ್ತನಿಧಿಯಂತೆ ಕಾಪಾಡಿ, ಕಡೆಗೂ ತಮ್ಮ ಅಭಿಲಾಷೆಯಂತೆ ಮೊಮ್ಮಗಳಿಗೆ ತಾವು ಮಾಡಿಸಿದ ತಮ್ಮ ಅಮೂಲ್ಯ ಇಪ್ಪತ್ತು ಸಾವಿರದ ನಾಗಮುರಿಗೆ ಪಕ್ಕನೇ ಜ್ಞಾಪಕಕ್ಕೆ ಬಂದು,
"...ಅಲ್ಲಾ ಹೆಣ್ಣೇ! ನಾ ಕೊಟ್ಟ ನಾಗಮುರಿಗೇ ಹಾಕ್ಕೊಂಡೆ ತಾನೇ?" ಎಂದು ಕೇಳಿದರು.
"ಇಲ್ಲಾ ದೊಡ್ಡಮ್ಮಾ! ಅದು ತುಂಬಾ ಭಾರ ನಾ ಕಡೀಗ್ ಹಾಕ್ಕೋಳತೀನಿ...." ಈಗ ಮೊಮ್ಮಗಳು ಉತ್ತರಿಸಿದಳು.
ಕಮಲತ್ತೆ ಸ್ವಲ್ಪ ಪೆಚ್ಚಾದರೂ, "ಹಾಂ! ಹಾಂ! ಕಡೀಗಾದರೂ ಮತ್ತೆ ಹಾಕ್ಕೋ! ಇಪ್ಪತ್ತು ಸಾವಿರ ಕೊಟ್ಟಿದೀನಿ ಅದಕ್ಕೇ..." ಎಂದು ನೆಗಾಡಿದರು; ಅಲ್ಲಿ ನೆರೆದ ಹೆಂಗಸರ ಪಾಳ್ಯಕ್ಕೆ ತಾವು ಮೊಮ್ಮಗಳ ಮದುವೆಗಾಗಿ ಇಪ್ಪತ್ತು ಸಾವಿರ ಖರ್ಚು ಮಾಡಿದ್ದನ್ನು ತಿಳಿಸುವ ಸಲುವಾಗಿಯೇ ಆಡಿದ್ದಂತೆ ಆಡಿ ತೋರಿಸಿ ಒಳಕೋಣೆ ಸೇರಿಕೊಂಡಿದ್ದರು.
ಬೀರುವಿನಲ್ಲಿ ತಾವು ತಾವು ಮೊಮ್ಮಗಳ ಮದುವೆಗಾಗಿ ಇಟ್ಟುಕೊಂಡಿದ್ದ ಸೀರೆ ಕಣ್ಣಿಗೆ ಬಿತ್ತು. ಆ ಸೀರೆ ಉಡುವುದೇ? ಒಮ್ಮೆ ಯೋಚಿಸಿದರು. ಸ್ವಲ್ಪ ಭಾರ ಆಗಿದೆ ಅದು. ಈ ವಯಸ್ಸಿನಲ್ಲಿ ಆ ಸೀರೆಯೇ? ಮರುಕ್ಷಣ. ಇದೊಂದು ಮೊಮ್ಮಗಳ ಮದುವೆ... ಮತ್ತೆ ಮೊಮ್ಮಕ್ಕಳ ಮದುವೆಯ ಹೊತ್ತಿಗೆ ನಾನೇ ಇರುತ್ತೇನೋ, ಇಲ್ಲವೋ, ಉಟ್ಟು ಬಿಡುವುದು... ಎಂದು ತೆಗೆದು ಅದನ್ನೇ ಉಟ್ಟರು. ಎಪ್ಪತ್ತಾದರೂ ಲಕ್ಷಣವಾಗೇ ಇದ್ದ ಕಮಲತ್ತೆಗೆ ಹಸಿರುಬಣ್ಣದ, ನವಿಲು ಬಾರ್ಡರ್‌ನ ಆ ಸೀರೆ ಲಕ್ಷಣವಾಗೇ ಕಾಣುಸುತ್ತಿತ್ತು. ಅವರದ್ದೇನಿದ್ದರೂ ಹತ್ತೇ ನಿಮಿಷಗಳಲ್ಲಿ ಮುಗಿದುಹೋಗುವ ಅಲಂಕಾರ.
ಕೋಣೆ ಬಾಗಿಲು ತೆರೆದು ಹೊರಬಂದರೆ, ಹುಡುಗಿಯ ಸುತ್ತ ಮತ್ತೆ ಏನೋ ಗೌಜು.... ಅವರು ಕುತೂಹಲದಿಂದ ನೆರೆದವರಿಗೆ ಸ್ವಲ್ಪ ದಾರಿ ಬಿಡಿ, ಸ್ವಲ್ಪ ದಾರಿ ಬಿಡಿ ಎನ್ನುತ್ತಾ ಮೊಮ್ಮಗಳ ಹತ್ತಿರ ಹೋದರು.
|