ಏನೂ ಇಲ್ಲ ಎಂದು ಆಗಾಗ ಅನಿಸುತ್ತದೆ. ಯಾಕೆ ಹೀಗೆ ಜೀವನ ಅಂದರೆ ಗಳಿಸಲೇ ಬೇಕಾ... ಕಳೆಯಲೇ ಬೇಕಾ? ಹೌದೆಂದವಳು ಮಾಯಿ. ತುಲಾ ಕಳತ ನಾಹಿ ಕಾರೇ... ಬಾಳಾ ಪೈ ಮಹಾರಾಜಾನಿ ಸಾಂಗಿತಲೇ, ತ್ಹುಜಿ ಜೀವನಾಚ್ ಶಿಲ್ಪಕಾರ್ ತುಚ್ ಆಹೆಸ್. (ನಿಂಗೊತ್ತಾಗೊದಿಲ್ಲೇನು ಮಗಾ... ಪೈ ಮಹಾರಾಜ ಹೇಳಿದ್ದು - ನೀನೇ ನಿನ್ ಜೀವನದ ಶಿಲ್ಪಕಾರ) ಇದರ ಮ್ಯಾಲ ಎಲ್ಲ ನಡಿಯೋದು. ಒಂದ ಕಡಿ ಕಳಿಯೂದು, ಇನ್ನೊಂದ್ ಕಡಿ ಗಳಸೋದು. ಅದೇನೊ ಬ್ಯಾಂಕಿನಾಗ ಐತಿಲ್ಲ ಜಮಾ ಖರ್ಚು ಪದ್ದತ್. ಹಾಂಗನೋ ಜೀವನಾ ನೀ ಏನಾರ ಗಳಸಾಕ ಹೋಗಿದ್ದರ ಏನಾರ ಕಳ್ಕೊಂಡಿರ್ತಿ.
ಎಲ್ಲಾ ಸರಿಯಾಗೈತಿ ಅಂದಕೊಂಡು ಇದ್ದಂವನ ಜೀವನಕ ಅವಳ ಹೆಸರಿನ ರೂಪದಾಗ ಮತ್ತ ಜಮಾ ಅನ್ನೋದು ಆಗಿತ್ತಲ್ಲ. ಹಾಂಗಿದ್ದರ ಯಾವ ಖಾತೆಕ ಖರ್ಚು ಬಿತ್ತು. ತಲಿ ಕೆಡಿಸಿಕೊಳ್ಳುದು ಬ್ಯಾಡ ಬ್ಯಾಡ್ ಅಂದರೂ ವಿಶಿ ಬಂದಿದ್ದಳು. ಬರೋದು ಹ್ಯಾಂಗ್ ಬಂದಿದ್ದಳು. ಒಂದಿನಾ ಬ್ಯಾಂಕಿನಾಗ ಕ್ಯಾಷಿಯರ್ ಡ್ಯೂಟಿ ಮ್ಯಾಲೆ ಇದ್ದ. ಪರಮೇಶಿ ಗೋವಾಕ ಸಿಐಬಿ ಎಕ್ಸಾಮ್ ಬರೀಬೇಕು ಅಂದ ಹೇಳಿ ಹೋದ್ಹಾಂವ ಎರಡ ದಿನ ರಜಾನೂ ಹಾಕಿದ್ದ. ಹಿಂಗಾಗಿ ಕ್ಲಿಯರಿಂಗೂ ಮತ್ ಡೇ ಬುಕ್ ನನ್ನ ಮ್ಯಾಗ ಬಿದ್ದಿತ್ತು. ಆಗಿನ್ನೂ ಕಂಪ್ಯೂಟರು ಬ್ಯಾಂಕಿಗೆ ಹೊಸಾದು ಅನ್ನೋದಕ್ಕಿಂತ ನಾನ ಕಂಪ್ಯೂಟರಿಗೆ ಹೊಸಾ ಮನಷ್ಯಾ ಅಂದ್ರೂ ಬರೋಬ್ಬರಿ ಆದಿತು. ಲಗೂನ ಮನಿಗೆ ಹೋಗಬೇ,ಕು ಸಾಯಿಮಂದಿರದ ಮುಂದ ಕುಂತರ ಆಹಾ ಏನ ಹುಡಿಗ್ಯಾರ ಬರ್ತಾರೋ... ಇದರವ್ವನ ಡೆ ಬುಕ್ ಟ್ಯಾಲಿ ಆಗೂದಿಲ್ಲ. ನಾ ಹೋಗುದಿಲ್ಲ... ಅಂತಾ ಪರಿಸ್ಥಿತಿ.
ಅಂದ ಲಗೂನ ಹೋಗೂನ ಅಂತ ಹೇಳಿ, ಲೇ ಕಾಂಬಳೆ ಸ್ವಲ್ಪ ಎಸ್‌ಬಿ, ಕರೆಂಟ್, ಸಿಸಿ ಸಪ್ಲಿಮೆಂಟರಿ ಲಗೂನ ಕೊಡೋ... ಇಂದ ಲಗೂನ ಹೋಗಬೇಕು. ಪರಮೇಶಿ ಡೆ ಬುಕ್ ನನ್ನ ಮ್ಯಾಗ ಐತಿ. ಅಂದಿದ್ದೆ.
"ಏ ನಂದೇನೊ... ಇರೋ ಗಮ್ಮತ್ ಎಲ್ಲಾ ಕಾಮತ್‌ನ ಕಡಿ ಐತಿ. ಅಂವ ಇನ್ನ ವೋಚರ್ ಚೆಕ್ ಮಾಡಿಲ್ಲ. ಮತ್ ನಾ ಹ್ಯಾಂಗ್ ಸಪ್ಲಿಮಂಟರಿ ಕೊಡಲೋ. ಬೇಕಾರ ಫಿಗರ್ ತಗೋ ಅಂದಿದ್ದ. ಕಾಮತ್ ಅನ್ನೂ ಮನಷ್ಯಾನ ಬಗ್ಗಿ ಒಂದೆರಡ ಮಾತ್ ಹೇಳಬೇಕು ಅನ್ನಿಸ್ತದ ಇಲ್ಲಿ. ಸತತವಾಗಿ ಎರಡು ವರ್ಷ ಒಂದೇ ಒಂದು ಸಿಎಲ್, ಪಿಎಲ್ ತಗೊಳ್ಳದ ಒಂದ.. ಸಮ ಕತ್ತಿ ದ್ಹುಡದ್ಹಾಂಗ ದುಡಿದ ಏಕೈಕ ಕ್ಲಾರ್ಕ್. ಇವನ ಸಮಂಧ್ ಮ್ಯಾನೇಜರ್ ತೂಗಡಿಸ್ಕೋತ ಕೂಂಡ್ರಬೇಕು. ಯಾಕ ಗೊತ್ತೇನು? ಕಾಮತ್ ಕೆಲಸಾ ಮುಗಿವಲ್ತು. ಬ್ಯಾಂಕಿನ ಬಾಗಿಲಕ್ ಲಾಕ್ ಬೀಳವಲ್ತು.
ಇಂತಾ ಮನಸ್ಯಾ ಎಸ್‌ಬಿ ವೋಚರ್ ಚೆಕ್ಕಿಂಗ್ ಮಾಡ್ತಾನ ಅಂದ್ರ ಸತ್ತೀನಪ್ಪೊ ಅಂತ ಬಾಯಿಗೆ ಖಾರ ಹಾಕ್ಕೊಂಡು ಬಡ್ಕೊಂಡ್ರು... ಸಪ್ಲಿಮೆಂಟರಿ ಫಿಗರ್ ಸಿಗೂದಿಲ್ಲ. ತ್ಹುಲಾ ಕಾಯ್ ಕಳತ್ ಎಕ್ ವೋಚರ್ ಮಿಸ್ ಝಾಲಕಿ ನೋಕರಿ ಗೇಲ... ಅನ್ನತ್ತಿದ್ದ. ಅದಾ ವರ್ಷ ಬಿಎಸ್ಆರ್‌ಬಿ ಎಕ್ಸಾಮ್ ಬರದ ಇನ್ನೂ ಪ್ರೊಬಷನರಿ ಮುಗಿದಾಂವನ ಮುಂದ ಹಿಂಗ ಅಂದ ಬಿಟ್ಟರ ಏನಾಗಬೇಕು... 12 ಸಾವಿರ ರೂಪಾಯಿ ಪಗಾರ.... ಬ್ಯಾಡ್ ಶಿವನ... ರಾತ್ರಿ ಹತ್ತ ಹೋಡಿಲಿ ಆರಾಮಶಿರಿ ಚೆಕ್ ಮಾಡು... ಅಂದ್ಕೊಂಡು ಇದ್ದದ ಕೆಲಸ ಮುಗಿಸೋದು ನನ್ನ ಹಣಿಬರಾ ಅಂದ ನನ್ನ ಪಾಲಿಗೆ ಬಂದಿತ್ತು.
ಕ್ಲಿಯರಿಂಗ್‌ಕ ಹೋಗುದು ಅಂದ್ರ ಭಾಳ ಮಜಾ.. ಯಾಕ ಗೊತ್ತೇನು... ದಿನಾ ನೂರು ರೂ ಅಲಾವನ್ಸ್. ಮತ್ತ ಅದ ವರ್ಷ ನನ್ನ ಜೋಡಿ ಬಿಎಸ್ಅರ್‌ಬಿ ಪಾಸ್ ಆಗಿ ಎಸ್‌ಬಿಐದಾಗ ಇದ್ದಳಲ್ಲ ವಿಶಿ. ಸರ್ವಿಸ್ ಬ್ರ್ಯಾಂಚ್‌ನ್ಹಾಗ ಇದ್ದಳು. ಕ್ಲಿಯರಿಂಗ್‌ನ್ಯಾಗ ಎಸ್‌ಬಿಐ ನಿಮ್ಮ ಫಿಗರ್ ಏನ್ರಿ ಅಂದರ ನಾಚಿಕೊತಿದ್ದಳು. ಆಕಿಗ ಏನಾ ಅರ್ಥಾ ಆಕ್ತಿತ್ತು ಏನೋ ಗೊತ್ತಿಲ್ಲ. ಹಂಗ ಆರ ತಿಂಗಳ ದಿನಾ ಕ್ಲಿಯರಿಂಗ್ ಹೋಗಿ ಬರೋದರ ನಡುವೆ ದೋಸ್ತಿ ಏನೂ ಅತು. ಹಂಗ ಸ್ವಲ್ಪ ದಿನದಾಗ ಅಂದ್ರ ಬಾ ಹೋಗು ಅಲ್ಲಿತನಕಾ ಬಂತು..
|