ಇದ ನನ್ನ ಜೀವನದಾಗ ಅವಳು ಜಮಾ ಆಗಾಕ ಕಾರಣ ಆತು. ನಾನು ಭಾಳ ಖುಷಿನೂ ಆಗಿತ್ತು. ಕಮ್ಮಿತ್ ಕಮ್ಮಿ ಇಲ್ಲ ಅಂದ್ರೂ ಇಬ್ಬರದೂ ಕೂಡಿದರ 25 ಸಾವಿರ ರೂಪಾಯಿ ಪಗಾರ.. ಏನ್ ಮಜಾ... ಆರಾಮಾಗಿ ಇರಬೋದು ಅಂದ್ಕೊಂಡಿದ್ದೆ. ಮತ್ ಖರೇ ಹೇಳಬೇಕು ಅಂದ್ರ ಹಂಗ ಜೀವನಾನೂ ನಡೀತ ಬಿಡು. ಒಂದ್ವರ್ಸಾಗ ಏಕದಮ್ ಪಸ್ಟಕ್ಲಾಸ್ ಏರಿಯಾದಾಗ ಮನಿನೂ ತಗೊಂಡ್ವಿ. ಡಕೋಟಾ ಎಕ್ಸಪ್ರೆಸ್ ಸೈಕಲ್ ಬಿಟ್ಟ ಬೈಕ್ ಬಂತು. ಅಲ್ಲಿಗೆ ನಿಲ್ಲಲಿಲ್ಲ ದೇವರ.. ಇಪ್ಪತ್ತಾರನೇ ವಯಸ್ಸಿನಾಗ ನೋಕರಿ ಇಪ್ಪತ್ತೇಳಕ್ ಮದುವಿ. ಮಜಾನ ಮಜಾ...
ಅಲ್ಲೊ ಮಾರಾಯ, ಇನ್ನ ವಯಸ್ಸಿಗೆ ಇರುವಾಗ ಮದುವಿ ಮಾಡ್ಕೊಂಡ್ ಬಿಟ್ಯಲ್ಲ... ಬ್ಯಾರೇ ಜಗತ್ತು ನೋಡಾದು ನಿನಗ ಬ್ಯಾಡ ಏನೂ ? ಅನ್ತಿದ್ದ ಪರಮೇಶಿ. ಅಮ್ಯಾಲ ಆಮ್ಯಾಲ ಒಂಥರಾ ಅನ್ಸಾಕ ಸುರು ಮಾಡ್ತು. ಛೆ... ಇವನ್ನವ್ವನ.. ಹ್ಯಾಂಗಿದ್ರೂ ಮ್ಯಾಲಿಂದ್ ಮ್ಯಾಲ ಗೋವಾಕ್ ಹೋಗಿ ಬರೋದು ಇರ್ತಿತ್ತು. ಸ್ವಲ್ಪ ಕುಡದು.. ಬಾಯನಾ ಬೀಚ್‌ನಾಗ. ಎಲ್ಲಾ ಫಾರಿನ್ನೋ ಮರಿ ಅನ್ತಿದ್ದ. ಇಯರ್ ಎಂಡಿಂಗ್ ಮುಗ್ಸಕೊಂಡು ನಾಳಿ ಹೋಗೂನ, ರಾತ್ರಿ ಹತ್ತಕ್ಕ ಇಲ್ಲಿಂದ ಹೊಂಟರೂ ಮೂರು ತಾಸಿನ ಹಾದಿ. ಎರಡ್ ದಿನ ಇದ್ದ ಬರೂನು ಬಾ ಅಂದು ನನ್ನೂ ಕರ್ಕೊಂಡು ಹೋಗಿದ್ದ. ಯಾಕೋ ಗೋವಾ ಹಾದಿ ನನಗೂ ಭಾಳ ಮಜಾ ತರಾಕ ಹತ್ತಿತು. ವಿಶಿ ಅಂತೂ ನನ್ನ ಕಡಿ ರೊಕ್ಕಾ ಕೇಳ್ತಿರಲಿಲ್ಲ. ಅವಳದ ಪಗಾರ ಸಾಕಷ್ಟ ಇತ್ತು, ಅಲ್ಲದ ಮಕ್ಕಳಾ ಮರಿ ವಿಚಾರ ಇರಲಿಲ್ಲ ಅಂದ ಮ್ಯಾಲ ಇದ್ದ ಇಬ್ಬರು ಗಂಡ ಹೆಂಡಿರು, ಒಬ್ಬಾಕಿ ಅವ್ವ ಎಷ್ಟ ಖರ್ಚ ಆದೀತು.. ದಿನ ಖರ್ಚ್ ಅಂತೂ ಹಾಂಗೂ ಹಿಂಗೂ ಅಲಾವನ್ಸ್‌ದಾಗ ದಾಟತಿತ್ತು.
ನನಗೂ ಗೋವಾ ರುಚಿ ಭಾಳನ ತಂಗೋಡ್ತು. "ಹತ್ಕೊಂಡ್ ಬೆಂಕಿ, ಹಚ್ಕೊಂಡ ಹಾ.. ಎಂದೂ ಮುಚ್ಚಾಕ್ ಸಾಧ್ಯ ಇಲ್ಲ". ಇಂದಲ್ಲ ನಾಳಿ ಹೋಗಿ ಹೊರಗ ಬರಬೇಕ.. ನಂದೂ ಹಾಂಗ ಆತು. ಅಲ್ಲಿಗೆ ನಿಂತಿದ್ದರ ಭಾಳ ಛಲೊ ಇತ್ತು. ನನ್ನ ದೋಸ್ತ ಒಬ್ಬ ಇದ್ದ- ನಾರಾಯಣ ಅಂತ. ಭಾಳ ಗರೀಬ್ ಮನಸ್ಯಾ. ಅವನ ಆಯಿ ಒಂದ್ ಖಾರಾ ಕುಟ್ಟೋ ಗಿರನ್ಯಾಗ ಕೆಲಸ ಮಾಡ್ತಿದ್ದಳು. ಆದ್ರೂ ಸಂಸಾರದ ಗಾಡಿ ಮುಂದಕ ಹೋಗ್ತ ಇರಲಿಲ್ಲ. ನಾಲ್ಕ ಹೆಣ್ಣು ಮೂರು ಗಂಡುಗಳಿಗೆ ನಾಲ್ಕ ಕೈ ಉಣ್ಣಾಕ್ ಹೆಂಗ ಹಾಕ್ಯಾವ ವಿಚಾರ ಮಾಡ್ರಿ.. ಖರೇ ಹೇಳಬೇಕು ಅಂದ್ರ ಅವನ ತಂಗ್ಯಾರ ಸಾಲಿಗೆ ದುಡ್ಡು ಕೊಡ್ಹತಿದ್ದೆ... ಮ್ಯಾಲಿಂದ್ ಮ್ಯಾಲ ಮನೀಗೂ ಹೋಗ್ತಿದ್ದೆ. ಹುಡಿಗ್ಯಾರೂ ಇನ್ನು ಸಣ್ಣಾವರ ಇದ್ದುದರಿಂದ ದಾದಾ ಅಂತ ಕರೀತಿದ್ದರೂ ನಾನು ಹಂಗ ಬರ್ತಾವ್ ಮಾಡ್ತಿದ್ದೆ.
ಖರೇ ಹೇಳಬೇಕು ಅಂದ್ರ ನಾಲ್ಕ ವರ್ಷದಾಗ ಲೆಕ್ಕ ತಪ್ಪಿತು. ಒಂದ್ಹ ಹುಡುಗಿ ಇನ್ನೂ ಲಂಗ ಹಾಕ್ಕೊಂಡು ಅಡ್ಡಾಡು ವಯಸ್ಸಿನವಳ ಮ್ಯಾಲ ನನ್ನ ಗೂಗಿ ಕಣ್ಣ ಬಿತ್ತು. ಅಲ್ಲಿಗ ಅವಳ ನನ್ನ ಜೀವನದಾಗ ಜಮಾ ಮಾಡ್ಕೊಂಡಿದ್ದೆ. ಅದ ಖಬರಗೇಡಿ ವ್ಯಾಳ್ಯಾದಾಗ ವಿಶಿನೂ ಕಳ್ಕೊಳ್ಳಾಕ ಹತ್ತಿದ್ದೆ.
ನೀವ್ ಹೇಳ್ರಿ, ಯಾವುದರ ಹೆಂಗ್ಸ್ ತನ್ನ ಗಂಡನ್ನ ಬ್ಯಾರೇದಾಕಿ ಜೋಡಿ ನೋಡಿದರ ತಡಕೊಳ್ಳತಾಳೇನು? ಹಂಗ ವಿಶಿನೂ ತಡಿಲಿಲ್ಲ. ಮೊದಲಾ ಕಲಿತ್ಯಾಕಿ, ಕೈ ತುಂಬ ಪಗಾರ ಬರ್ತದ... ಅಂದ ಮ್ಯಾಲ ನೀ ಏನೊ ಹೋಗ್ಹ ಹೋಗ್ ಅಂದಳು. ಬರೀ ಒಂದ್ ಒಂದು ಘಟನಾ ಮಾಡಿದ ಆ ತಪ್ಪಿಗೆ ಇಂದು ಶಿಕ್ಷಾ ಅನುಭವಿಸಾಕ ಹತ್ತೇನಿ. ಇಂದ ವಿಶಿ ಅನ್ನೊ ನನ್ನ ಹೆಂಡತಿ ನನ್ನ ಜೀವನದಾಗ ಇಲ್ಲ... ಆದರ ಅವಳ ಬಂದು ಹೋಗಿದ್ದಳು ಅನ್ನೋದು ಒಂದ್ ಖೂನ್ ಉಳಿದೈತಿ. ಅದ ಖೂನ್ ನೋಡ್ಕೊತಾ ಇನ್ನೂ ಇದಿನಿ. ಯಾಕಂದ್ರ ಕಳದದ್ದನ್ನ ಮತ್ತ ಕೂಡಸಬೇಕಾದರ ಭಾಳ ಮುಷ್ಕಿಲ್ ಐತಿ..
|