ಮುಖ್ಯ ಪುಟ » ವಿವಿಧ » ವೆಬ್ ದುನಿಯಾ ವಿಶೇಷ 07 » ಗೆಳೆಯರ ದಿನ » ಗೆಳೆತನ ವೃಕ್ಷದಡಿ ಒಂದಿಷ್ಟು ನೆಳಲು... (Friendship Day | Pals | Friends)
 
ಗೆಳೆಯರೆಂದರೆ ಆತ್ಮಕ್ಕೆ ಹತ್ತಿರವಾದವರು
WDWD
ನನ್ನ ಮುಂದೆ ನಡೆಯಬೇಡ,
ನನಗೆ ಹಿಂಬಾಲಿಸಲೆನಗೆ ಅಸಾಧ್ಯವಾಗಬಹುದು
ನನ್ನ ಹಿಂದೆ ನಡೆಯಬೇಡ,
ಮುನ್ನಡೆಯಲೆನಗೆ ಅಸಾಧ್ಯವಾಗಬಹುದು,
ನನ್ನ ಭುಜಕ್ಕೆ ಭುಜ ಸಾಗಿಸಿ ಮುನ್ನಡೆ...
ಎಂದೆಂದಿಗೂ ನನ್ನೊಡನಿದ್ದು ನನ್ನ ಗೆಳೆಯನಾಗಿರು...

ಈ ಸುಂದರ ಅಕ್ಷರಗಳು 1957ರ ನೊಬೆಲ್ ಸಾಹಿತ್ಯ ಪ್ರಶಸ್ತಿ ವಿಜೇತ ಅಲ್ಬರ್ಟ್ ಕ್ಯಾಮಸ್ ಪೋಣಿಸಿದವುಗಳು.

ಮನುಷ್ಯನು ಮಾತ್ರವೇ ಗೆಳೆತನದ ಅರ್ಥವನ್ನು ಅರಿತುಕೊಳ್ಳುತ್ತಾನೆ ಮತ್ತು ವರ್ಷದಲ್ಲಿ ಒಂದಿಡೀ ದಿನವನ್ನು ಗೆಳೆತನಕ್ಕೆ, ಗೆಳೆಯರಿಗಾಗಿ ಮೀಸಲಿಡುತ್ತಾನೆ. ಪ್ರತಿ ವರ್ಷದ ಆಗಸ್ಟ್ ಮೊದಲ ಭಾನುವಾರವನ್ನು ಗೆಳೆತನ ದಿನಾಚರಣೆ ಎಂದು ವಿಶ್ವಾದ್ಯಂತ ಆಚರಿಸಲಾಗುತ್ತದೆ. ಈ ಕಾರಣಕ್ಕೆ ಎಲ್ಲರಿಗೂ ಗೆಳೆತನ ದಿನಾಚರಣೆಯ ಶುಭಾಶಯಗಳು!

ಭೌತಿಕ ಜಗತ್ತಿನಲ್ಲಿರುವ ಪ್ರಾಣಿಸಂಕುಲದಲ್ಲಿ ಮಾನವನಿಗೆ ಮಾತ್ರವೇ ಇರಬಹುದಾದ ಅನನ್ಯ ತುಡಿತವಿದು. ಗೆಳೆತನವೆಂಬುದು ಮಧುರ ಅನುಭೂತಿಯ ಅನುಬಂಧ. ಪ್ರಾಥಮಿಕ ಶಾಲೆಯಲ್ಲಿ ಕಲಿತ ಕವಿವಾಣಿ ಈಗಲೂ ನೆನಪಿದೆ. "ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ ತಣ್ಣೆಳಲ ತಂಪಿನಲಿ ತಂಗಿರುವೆನು". ಆ ಕಾಲದಲ್ಲಿ ಈ ಸಾಲುಗಳು ಕೇವಲ ಬಾಯಿಪಾಠಕ್ಕಷ್ಟೇ ಸೀಮಿತವಾಗಿತ್ತು. ಇಂದು ಅದನ್ನು ಓದಿದರೆ ಅದರ ಅರ್ಥ ವೇದ್ಯವಾಗುತ್ತದೆ. ಗೆಳೆತನವೆಂಬ ಸುವಿಶಾಲ ವೃಕ್ಷ. ದಣಿದು ಬಂದ ತನುವಿಗೆ, ಮನಕ್ಕೆ ಮುದ ನೀಡುವ ಅದರ ಪ್ರೀತಿಯ ನೆಳಲು... ಎಷ್ಟೊಂದು ಆಪ್ಯಾಯಮಾನ.

ಗೆಳೆತನಕ್ಕೆ ಲಿಂಗಭೇದವಿಲ್ಲ, ಜಾತಿಯ ಅಡ್ಡಗೋಡೆಯಿಲ್ಲ, ಆಸ್ತಿ-ಅಂತಸ್ತುಗಳ ಬೇಲಿಯೂ ಇಲ್ಲ. ಮೇಲಿರುವ ವಾಕ್ಯವನ್ನೇ ಗಮನಿಸಿದರೆ, ಗೆಳೆತನವು ಒಬ್ಬನಿಗಿಂತ ಒಬ್ಬ ಮುಂದೋಡುವುದು ಅಲ್ಲ, ಅಥವಾ ಹಿಂಬಾಲಿಸುವುದು ಕೂಡ ಅಲ್ಲ. ಜತೆ ಜತೆಯಾಗಿ ಸಾಗುವ ಜೀವನ ಪಯಣದ ಪ್ರಾತಿನಿಧ್ಯವಿದು.

ಅದಿರಲಿ, ಹಲವಾರು ವರ್ಷಗಳಿಂದಲೇ ಪಾಶ್ಚಾತ್ಯ ದೇಶಗಳಲ್ಲಿ ಆಚರಣೆಯಲ್ಲಿದ್ದ ಗೆಳೆತನ ದಿನಾಚರಣೆಯು ಇತ್ತೀಚೆಗಿನ ದಿನಗಳಲ್ಲಿ ಭಾರತದಲ್ಲೂ ವೈಭವವನ್ನು ಪಡೆಯುತ್ತಿದೆ. ಆದರೆ, ವ್ಯಾಲೆಂಟೈನ್ ಡೇಗೆ ಇರುವಂತೆ ಈ ಗೆಳೆತನ ದಿನಕ್ಕೂ ಒಂದು ಇತಿಹಾಸ ಇರಬಹುದಲ್ಲವೇ? ಈ ಬಗ್ಗೆ ಕೆದಕಿದರೆ ಅಂಥದ್ದೇನೂ ಸಿಗುವುದಿಲ್ಲ. ನಾಗರಿಕ ಜಗತ್ತು ರೂಪುಗೊಂಡಂದಿನಿಂದಲೂ ಗೆಳೆತನಕ್ಕೆ ಒಂದು ಆತ್ಮೀಯ ಸಂಬಂಧ ಎಂಬ ಮೌಲ್ಯವನ್ನು ನೀಡಲಾಗಿರುವುದು ಇತಿಹಾಸ ಅಥವಾ ಪುರಾಣ ಕಥೆಗಳನ್ನು ನೋಡಿದರೆ ತಿಳಿಯುತ್ತದೆ. ಮಹಾಭಾರತದಲ್ಲಿ ಕರ್ಣ-ದುರ್ಯೋಧನರ ಮಿತ್ರತ್ವ, ಶ್ರೀಕೃಷ್ಣ-ಸುದಾಮರ ಅನ್ಯೋನ್ಯತೆ, ರಾಮಾಯಣದ ಶ್ರೀರಾಮ-ವಿಭೀಷಣರ ಸಖ್ಯ, ಶ್ರೀರಾಮ-ಸುಗ್ರೀವರ ತುಲ್ಯಾರಿ ಮಿತ್ರತ್ವ... ಇತ್ಯಾದಿಗಳು ಕಣ್ಮುಂದೆ ಸುಳಿಯುತ್ತದೆ.

ಗೆಳೆತನದ ನೆನಪು ಅತಿ ಮಧುರ
WDWD
ಆದರೆ ಗೆಳೆತನ ದಿನಾಚರಣೆಯ ಇತಿಹಾಸ ಎಲ್ಲಿ ಎಂದು ಹುಡುಕಿದರೆ, ಆಗಸ್ಟ್ ತಿಂಗಳ ಮೊದಲ ಭಾನುವಾರವನ್ನು ಗೆಳೆತನ ದಿನ ಎಂದು ಆಚರಿಸುವ ಪದ್ಧತಿಯು 1935ರಲ್ಲಿ ಚಾಲ್ತಿಗೆ ಬಂತು ಎಂಬ ಮಾಹಿತಿಯೊಂದು ದೊರೆಯುತ್ತದೆ. ಅಂದಿನಿಂದ ಅಮೆರಿಕದಲ್ಲಿ ಇದೊಂದು ವಾರ್ಷಿಕ ಉತ್ಸವದ ರೂಪದಲ್ಲಿ ಆಚರಿಸಲಾಗುತ್ತಿತ್ತು. ನಿಧಾನವಾಗಿ ಇದರ ಆಕರ್ಷಣೆಯು ದೇಶ-ವಿದೇಶಗಳಿಗೆ ಹರಡತೊಡಗಿತು, ಮತ್ತೀಗ ಭಾರತದಲ್ಲೂ ಅತ್ಯಂತ ಉತ್ಸಾಹದಿಂದ ಇದನ್ನು ಆಚರಿಸಲಾಗುತ್ತದೆ. (ಮುಂದಿನ ಪುಟಕ್ಕೆ)

ಗೆಳೆತನ ದಿನಕ್ಕೆ ಫೋಟೋ ಗ್ಯಾಲರಿಗಾಗಿ ಇಲ್ಲಿ ಕ್ಲಿಕ್ ಮಾಡಿ...