ಶಶಿ ಕುಮಾರ್
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಮಹಾನ್ ಕ್ರಾಂತಿಕಾರಿಗಳಲ್ಲಿಯೇ ಅತ್ಯಂತ ಖ್ಯಾತನಾಮರಾದ ಭಗತ್ ಸಿಂಗ್‌ರನ್ನು 'ಶಹೀದ್ ಭಗತ್ ಸಿಂಗ್' ಎಂದೇ ಕರೆಯಲಾಗುತ್ತದೆ. ಶಹೀದ್ ಎಂದರೆ, ಹುತಾತ್ಮ ಎಂದರ್ಥ. ಭಗತ್ ಸಿಂಗ್ ಈಗಲೂ ಕೂಡ ಪ್ರಸ್ತುತ, ಜನಪ್ರಿಯ ಎನ್ನುವುದಕ್ಕೆ ಭಗತ್ ಸಿಂಗ್ ಜೀವನ ಚರಿತ್ರೆಯನ್ನು ಆಧರಿಸಿ ಕಳೆದ ಕೆಲ ವರ್ಷಗಳ ಹಿಂದೆ ತೆರೆ ಕಂಡ ಮೂರು ಹಿಂದಿ ಚಿತ್ರಗಳು ಸಾಕ್ಷಿಯಾಗಿವೆ.
ಹಾಗೆಯೇ, ದೇಶ ಕಂಡ ಮಾರ್ಕ್ಸ್‌ವಾದಿಗಳಲ್ಲಿ ಅಗ್ರಗಣ್ಯರು ಎಂದೇ ಗುರುತಿಸಲಾಗುವ ಭಗತ್ ಸಿಂಗ್ ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ (ಎಚ್ಎಸ್ಆರ್ಎ)ಯ ನಾಯಕರು ಹಾಗೂ ಸ್ಥಾಪಕರಲ್ಲಿ ಒಬ್ಬರಾಗಿದ್ದಾರೆ.
1907ರ ಸೆಪ್ಟಂಬರ್ 17ರಂದು ಸಂಧು ಕುಟುಂಬದ ಸರ್ದಾರ್ ಕಿಶನ್ ಸಿಂಗ್ ಸಂಧು ಹಾಗೂ ವಿದ್ಯಾವತಿ ದಂಪತಿಗಳು ಪಂಜಾಬ್‌ನ ಲಯಲಪುರ್ ಜಿಲ್ಲೆಯ ಬಂಗ ಬಳಿಯ ಖಾಟ್ಕರ್ ಕಲನ್ ಗ್ರಾಮದಲ್ಲಿ ಭಗತ್ ಸಿಂಗ್‌ಗೆ ಜನ್ಮವಿತ್ತರು.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಹಲವಾರು ಚಳುವಳಿಗಳಲ್ಲಿ ಭಾಗವಹಿಸಿದ್ದ ಕುಟುಂಬದ ಹಿನ್ನೆಲೆ ಹೊಂದಿದ ಭಗತ್ ಸಿಂಗ್ ತಂದೆ ಹಿಂದು ಸುಧಾರಣಾವಾದಿ ಆರ್ಯ ಸಮಾಜದಿಂದ ಗಾಢವಾಗಿ ಪ್ರಭಾವಿತರಾಗಿದ್ದರೆ, ಚಿಕ್ಕಪ್ಪಂದಿರಾದ ಅಜಿತ್ ಸಿಂಗ್ ಮತ್ತು ಸ್ವರಣ್ ಸಿಂಗ್ ಹಾಗೆಯೇ ಆತನ ತಂದೆ ಕೂಡ ಕರ್ತಾರ್ ಸಿಂಗ್ ಸರಬ್ಜಾ ನೇತೃತ್ವದ ಗದರ್ ಪಾರ್ಟಿಯ ಭಾಗವಾಗಿದ್ದರು.
ಬಾಲ್ಯದಲ್ಲಿ ಮಹಾತ್ಮ ಗಾಂಧಿ ಹಾಗೂ ಅವರ ಅಸಹಕಾರ ಚಳುವಳಿಯಿಂದ ಪ್ರಭಾವಿತರಾಗಿದ್ದ ಭಗತ್ ಸಿಂಗ್, 1922ರ ಚೌರಿ ಚೌರ ಘಟನೆಯ ನಂತರ ಗಾಂಧಿ ಅಸಹಕಾರ ಚಳುವಳಿಯನ್ನು ಹಿಂತೆಗೆದುಕೊಂಡಿದ್ದರಿಂದ ನಿರಾಶರಾದರು.
ತಾರುಣ್ಯದ ದಿನಗಳಲ್ಲಿ, ಲಾಹೋರ್‌ನ ನ್ಯಾಶನಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಭಗತ್ ಸಿಂಗ್, ಬಾಲ್ಯ ವಿವಾಹವನ್ನು ಧಿಕ್ಕರಿಸಿ ಮನೆಯಿಂದ ಓಡಿ ಹೋಗಿ 'ನೌಜವಾನ್ ಭಾರತ್ ಸಭಾ' (ಭಾರತ ಯುವ ಸಮಾಜ)ದ ಸದಸ್ಯರಾದರು.
ಆದರೆ, ಭಗತ್ ಸಿಂಗ್‌ರ ಕ್ರಾಂತಿಕಾರಿ ಚಟುವಟಿಕೆಗಳಿಗೆ ಒಂದು ವೇದಿಕೆ ದೊರೆತದ್ದು 1928ರಲ್ಲಿ. ಆ ವರ್ಷ ಸೆಪ್ಟಂಬರ್‌ನಲ್ಲಿ ಕೀರ್ತಿ ಕಿಸಾನ್ ಪಾರ್ಟಿಯಡಿಯಲ್ಲಿ ಭಾರತದೆಲ್ಲೆಡೆಯಿಂದ ಕ್ರಾಂತಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಭಗತ್ ಸಿಂಗ್ ಆ ಸಭೆಯ ಕಾರ್ಯದರ್ಶಿಯಾಗಿದ್ದರು. ಅವರ ಆನಂತರದ ತಮ್ಮ ಕ್ರಾಂತಿಕಾರಿ ಚಟುವಟಿಕೆಗಳನ್ನು ನಡೆಸಿದ್ದು ಈ ಸಂಘದ ನಾಯಕನಾಗಿಯೇ.
ಭಗತ್ ಸಿಂಗ್ ಜೀವನದ ಮೇಲೆ ಗಾಢ ಪರಿಣಾಮ ಬೀರಿದ ಪ್ರಮುಖ ಘಟ್ಟವೆಂದರೆ ಪಂಜಾಬ್ ಹುಲಿಯೆಂದೇ ಖ್ಯಾತರಾಗಿದ್ದ ಮಹಾನ್ ದೇಶಭಕ್ತ ಲಾಲಾ ಲಜಪತ್‌ರಾಯ್‌ರ ಮರಣ.
ಭಾರತದಲ್ಲಿನ ರಾಜಕೀಯ ಪರಿಸ್ಥಿತಿಯ ಕುರಿತು ವರದಿ ತಯಾರಿಸುವಂತೆ ಹೇಳಿ ಬ್ರಿಟಿಶ್ ಸರಕಾರ ನಿಯೋಜಿಸಿದ್ದ ಸೈಮನ್ ಆಯೋಗದಲ್ಲಿ ಒಬ್ಬ ಭಾರತೀಯ ಸದಸ್ಯನೂ ಇಲ್ಲವೆಂದು ಹೇಳಿ ದೇಶದೆಲ್ಲೆಡೆ ಪ್ರತಿಭಟನೆಗಳು ನಡೆಯಲಾರಂಭಿಸಿದವು. ಆಗ 1928ರ ಅಕ್ಟೋಬರ್ 30ರಂದು ಸೈಮನ್ ಆಯೋಗ ಲಾಹೋರ್‌ಗೆ ಭೇಟಿ ನೀಡಿದಾಗ ಪ್ರತಿಭಟನೆಯ ಮುಂದಾಳತ್ವ ವಹಿಸಿದ್ದವರು ಲಾಲಾ ಲಜಪಾತ್ ರಾಯ್.
ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಎರಡು ಪ್ರಮುಖ ಬಣಗಳಾದ ಸೌಮ್ಯವಾದಿಗಳು ಹಾಗೂ ತೀವ್ರಗಾಮಿಗಳಲ್ಲಿ, ಎರಡನೆ ಬಣದ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದ ಲಜಪತ್ ರಾಯ್, ಮೌನ ಅಹಿಂಸಾ ಪ್ರತಿಭಟನೆ ಕೈಗೊಂಡಿದ್ದರು. ಆದರೆ. ಪೊಲೀಸ್ ಅಧಿಕಾರಿಯೊಬ್ಬಾತ ಲಾಲಾ ಲಜಪತ್ ರಾಯ್‌ರಿಗೆ ಮಾರಕ ಹೊಡೆತವನ್ನು ಹೊಡೆದಿದ್ದರಿಂದಾಗಿ ಈ ಘಟನೆಗೆ ಪ್ರತ್ಯಕ್ಷದರ್ಶಿಯಾಗಿದ್ದ ಭಗತ್, ಪ್ರತೀಕಾರವನ್ನು ತೀರಿಸುವುದಾಗಿ ಪ್ರತಿಜ್ಞೆ ಮಾಡಿದರು.
ಅದರಂತೆಯೇ, ಇತರ ಕ್ರಾಂತಿಕಾರಿಗಳಾದ ಶಿವರಾಮ್ ರಾಜ್‌ಗುರು, ಜೈ ಗೋಪಾಲ್, ಮತ್ತು ಸುಖ್‌ದೇವ್ ಥಾಪರ್ ಒಡಗೂಡಿ ಪೊಲೀಸ್ ಅಧಿಕಾರಿಯನ್ನು ಕೊಲ್ಲುವ ಸಂಚು ಹೂಡಿ ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಇದರಿಂದ ತಪ್ಪಿಸಿಕೊಳ್ಳುವ ಹಂತದಲ್ಲಿ ಸಿಖ್ ಧರ್ಮಕ್ಕೆ ವಿರುದ್ಧವಾದ ಗಡ್ಡವನ್ನು ತೆಗೆಯುವುದು ಹಾಗೂ ಕೂದಲನ್ನು ಕತ್ತರಿಸುವುದನ್ನು ಮಾಡುವುದಕ್ಕೂ ಅವರು ಹಿಂಜರಿಯುವುದಿಲ್ಲ ಎನ್ನುವುದು ಅವರ 'ಲಿಬರಲ್' ಮನೋಧೋರಣೆಗೆ ಸಾಕ್ಷಿಯಾಗಿದೆ.
ಭಾರತೆದೆಲ್ಲೆಡೆ ಚಳುವಳಿಗಳು ತೀವ್ರಗೊಂಡ ಹಿನ್ನೆಲೆಯಲ್ಲಿ ಬ್ರಿಟೀಶ್ ಸರಕಾರ ಇದನ್ನು ಹತ್ತಿಕ್ಕಲು ಹೊಸ ಕಾಯ್ದೆಯೊಂದನ್ನು ರೂಪಿಸುತ್ತದೆ. ಈ ಕಾಯ್ದೆಗೆ ಪ್ರತಿಯಾಗಿ ಭಗತ್ ಸಿಂಗ್ ಅಸೆಂಬ್ಲಿಯಲ್ಲಿ ಬಾಂಬ್ ಹಾಕಲು ಮುಂದಾಗುತ್ತಾರೆ.
ಅದರಂತೆ ಏಪ್ರಿಲ್ 8, 1929ರಂದು ಭಗತ್ ಸಿಂಗ್ ಮತ್ತು ಅವರ ಒಡನಾಡಿ ಬಟುಕೇಶ್ವರ್ ದತ್ ಅಸೆಂಬ್ಲಿಗೆ ಬಾಂಬ್ ಹಾಕಿ "ಇಂಕ್ವಿಲಾಬ್ ಜಿಂದಾಬಾದ್!" (ಕ್ರಾಂತಿ ಚಿರಾಯುವಾಗಲಿ) ಎಂದು ಕೂಗಿದರು. ಇದಕ್ಕಾಗಿ ಅವರಿಗೆ ಜೂನ್12,1929ರಂದು 'ಜೀವಾವಧಿ ಗಡೀಪಾರು ಶಿಕ್ಷೆ ' ವಿಧಿಸಲಾಯಿತು.
|