ಸಮಯ್ ತಾಮ್ರಕರ್
ಬಾಲಿವುಡ್ ಚಿತ್ರರಂಗದಲ್ಲಿ ನಾಯಕಿಯರತ್ತ 2007ರ ಹಿನ್ನೋಟ ಹರಿಸಿದರೆ, ಸಾಕಷ್ಟು ಹೊಸ ಮುಖಗಳು ಹೊಸ ಅಲೆ ಎಬ್ಬಿಸಿರುವುದು ಕಂಡುಬಂದಿದೆ. ರಾಣಿ ಮುಖರ್ಜಿ, ಪ್ರೀತಿ ಜಿಂಟಾ, ಬಿಪಾಶಾ ಬಸು, ಐಶ್ವರ್ಯಾ ರೈ ಮುಂತಾದ ಸ್ಥಾಪಿತ ನಾಯಕಿಯರನ್ನು ಹಿಂದಿಕ್ಕಿ ಕತ್ರಿನಾ ಕೈಫ್, ವಿದ್ಯಾ ಬಾಲನ್, ದೀಪಿಕಾ ಪಡುಕೋಣೆ ಮತ್ತು ಲಾರಾ ದತ್ತ ಅವರಂತಹ ಹೊಸ ಮುಖಗಳು ಹಿಟ್ ಚಿತ್ರಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ನಾಯಕಿಯರ ಸ್ಥಿತಿಗತಿಯತ್ತ ಅವಲೋಕನ ಇಲ್ಲಿದೆ:
ಕತ್ರಿನಾ ಕೈಫ್ (ನಮಸ್ತೇ ಲಂಡನ್, ಪಾರ್ಟ್‌ನರ್, ಅಪ್ನೇ, ವೆಲ್‌ಕಂ) ಕತ್ರಿನಾಳ ಇಡೀ ಚಿತ್ರರಂಗದ ಕೆರಿಯರ್ ಗಮನಿಸಿದರೆ, ಈ ವರ್ಷ ಎಲ್ಲ ಚಿತ್ರಗಳು ಹಿಟ್ ಆಗಿಬಿಟ್ಟವು. ಸಲ್ಮಾನ್ ಖಾನ್‌ನ ಪ್ರಿಯತಮೆ ಎಂಬ ಗುಸುಗುಸು ಹೊಂದಿರುವ ಕತ್ರಿನಾ, ತಮ್ಮದೇ ಛಾಪು ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈಗವರು ಸ್ವಯಂ ನಿರ್ಧಾರ ತೆಗೆದುಕೊಳ್ಳತೊಡಗಿದ್ದಾರೆ. ನಿರ್ಮಾಪಕರು ಆಕೆಯನ್ನು ಗಂಭೀರವಾಗಿ ಪರಿಗಣಿಸಲಾರಂಭಿಸಿದ್ದಾರೆ. ಕತ್ರಿನಾ ಕೂಡ ತಮ್ಮ ಅಭಿನಯದಲ್ಲಿ ಸಾಕಷ್ಟು ನಿಖರತೆ ಸಾಧಿಸತೊಡಗಿದ್ದಾರೆ. "ವೆಲ್‌ಕಂ" ಆಕೆಯ ಹಿಟ್ ಚಿತ್ರವಾಗಿ ಚಿರಕಾಲ ನೆನಪಿನಲ್ಲಿ ಉಳಿಯುವಂಥದ್ದು.
ವಿದ್ಯಾ ಬಾಲನ್ (ಸಲಾಂ ಎ ಇಶ್ಕ್, ಗುರು, ಏಕಲವ್ಯ, ಹೇ ಬೇಬಿ, ಭೂಲ್ ಭುಲೈಯಾ) ಮೂರು ಹಿಟ್ ಚಿತ್ರಗಳಲ್ಲಿ ಕೆಲಸ ಮಾಡುವ ಮೂಲಕ ವಿದ್ಯಾ ಬಾಲನ್ ತಮ್ಮ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ. "ಹೇ ಬೇಬಿ" ಚಿತ್ರದಲ್ಲಿ ಮಾಡರ್ನ್ ಲುಕ್ ಮೂಲಕ ಗ್ಲಾಮರಸ್ ನಟಿಯಾಗುವ ಪ್ರಯತ್ನವನ್ನೂ ಮಾಡಿದರು. ವಿದ್ಯಾ ಅಭಿನಯದಲ್ಲೂ ಸೈ ಅನಿಸಿಕೊಂಡಿದ್ದಾರೆ. ಅದಕ್ಕಾಗಿಯೇ ಅವರಿಗೆ ಮಣಿರತ್ನಂ, ನಿಖಿಲ್ ಆಡ್ವಾಣಿ, ವಿಧು ವಿನೋದ್ ಚೋಪ್ರಾ ಮತ್ತು ಪ್ರಿಯದರ್ಶನ್ ಅವರಂತಹ ನಿರ್ದೇಶಕರು ಅವಕಾಶ ನೀಡಿದರು. 2008ರಲ್ಲೂ ಉತ್ತಮ ಪ್ರದರ್ಶನ ನೀಡುವ ಸಿದ್ಧತೆಯಲ್ಲಿದ್ದಾರೆ ವಿದ್ಯಾ.
ದೀಪಿಕಾ ಪಡುಕೋಣೆ (ಓಂ ಶಾಂತಿ ಓಂ) ಈಗಷ್ಟೇ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿರುವ ದೀಪಿಕಾ, ಹಲವು ನಾಯಕಿಯರ ನಿದ್ದೆ ಕೆಡಿಸಿದ್ದಾರೆ. ಈ ಮಟ್ಟ ತಲುಪಲು ಬೇರೆ ನಾಯಕಿಯರಿಗೆ ಹಲವು ವರ್ಷಗಳೇ ಬೇಕಾದರೆ, ಈಕೆ ಒಂದೇ ಚಿತ್ರದಲ್ಲಿ ಈ ಅಲೆ ಸೃಷ್ಟಿಸಿದ್ದಾರೆ. ಬಾಲಿವುಡ್‌ನ ಎಲ್ಲಾ ಬ್ಯಾನರ್‌ಗಳು ಮತ್ತು ನಾಯಕ ನಟರು ದೀಪಿಕಾ ಜತೆ ಕೆಲಸ ಮಾಡಲು ತುದಿಗಾಲಲ್ಲಿ ನಿಂತಿದ್ದಾರೆ. ಯುವ ನಟಿಯರ ಸಾಲಿನಲ್ಲಿ ದೀಪಿಕಾ, ನಂ.1 ಸ್ಥಾನದ ಪ್ರಬಲ ಪ್ರತಿಸ್ಪರ್ಧಿಯಲ್ಲೊಬ್ಪರು.
ರಾಣಿ ಮುಖರ್ಜಿ (ತಾ ರಾ ರಂ ಪಂ, ಲಾಗಾ ಚುನರೀ ಮೇ ದಾಗ್, ಸಾಂವರಿಯಾ) ಅಭಿನಯದ ಮಹಾರಾಣಿ ಎಂದೇ ಕರೆಸಿಕೊಳ್ಳುತ್ತಿದ್ದ ರಾಣಿ ಈಗ ಕೇವಲ ಲೆಕ್ಕಾಚಾರದ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಸಫಲತೆ ಎಂಬುದು ಆಕೆಗೆ ದೂರವೇ ಉಳಿಯಿತು. ಲಾಗಾ ಚುನರೀ ಮೇ ದಾಗ್ ಎಂಬುದು ಪೂರ್ಣವಾಗಿ ರಾಣಿಯ ಚಿತ್ರವೇ ಆಗಿತ್ತಾದರೂ, ಬಾಕ್ಸಾಫೀಸಿನಲ್ಲಿ ಸೋತಿತು. ತಾರಾರಂಪಂ ಮತ್ತು ಸಾಂವರಿಯಾ ಚಿತ್ರಗಳಲ್ಲಿ ರಾಣಿ ಅಭಿನಯ ಉತ್ತಮವಾಗಿತ್ತಾದರೂ, ಚಿತ್ರದ ಗುಣಮಟ್ಟವು ರಾಣಿಯ ಮೇಲೆ ಕಾರ್ಮೋಡವಾಯಿತು. ಬಹುಶಃ ರಾಣಿ ಈಗ ಮದುವೆ ಯೋಚನೆಯಲ್ಲಿರುವಂತಿದೆ.
ಪ್ರೀತಿ ಜಿಂಟಾ (ಝೂಮ್ ಬರಾಬರ್ ಝೂಂ) ಪ್ರೀತಿಗೆ ಕೂಡ ಈಗ ಅಭಿನಯಕ್ಕಿಂತಲೂ ನೆಸ್ ವಾಡಿಯಾ ಪ್ರಿಯರಾಗುತ್ತಿದ್ದಾರೆ. ಈ ವರ್ಷ ಕೇವಲ ಒಂದು ಚಿತ್ರದಲ್ಲಿ ಅವರು ಕಾಣಿಸಿಕೊಂಡರಾದರೂ, ಅದು ಕೂಡ ಫ್ಲಾಪ್ ಆಯಿತು. ರಾಣಿಯಂತೆಯೇ ಪ್ರೀತಿ ಕೂಡ 2008ರಲ್ಲಿ ವಿವಾಹಬಂಧನದಲ್ಲಿ ಸಿಲುಕುವತ್ತ ಗಂಭೀರ ಚಿಂತನೆಯಲ್ಲಿರುವಂತೆ ತೋರುತ್ತಿದೆ.
ಐಶ್ವರ್ಯಾ ರೈ (ಗುರು, ಪ್ರೊವೋಕ್ಡ್) ಚಿತ್ರಕ್ಕಿಂತಲೂ ಐಶ್ವರ್ಯಾ ಅವರು ಮದುವೆ, ಕರ್‌ವಾ ಚೌಥ್ ಮತ್ತು ಧಾರ್ಮಿಕ ಸ್ಥಳಗಳಲ್ಲೇ ಹೆಚ್ಚು ಪ್ರಸಿದ್ಧಿ ಗಳಿಸಿದರು ಮತ್ತು ಚರ್ಚೆಯ ವಸ್ತುವೂ ಆದರು. ಬಾಲಿವುಡ್‌ನ ಬಹುತೇಕ ಚಾಪ್ ಹೀರೋಗಳ ಜತೆ ಅವರು ನಟಿಸಿಯಾಗಿದೆ. ಈ ವರ್ಷ ಬಾಲಿವುಡ್‌ನ ನಂ.1 ಕುಟುಂಬಕ್ಕೆ ಪಾದಾರ್ಪಣೆ ಮಾಡಿರುವುದರಿಂದ ಆಕೆಗೆ ಚಿತ್ರಗಳಿಗಿಂತಲೂ ಪರಿವಾರವೇ ಮಹತ್ವವಾಗಿತ್ತು. "ಗುರು" ಹಿಟ್ ಚಿತ್ರ ನೀಡಿರುವ ಅವರು "ಪ್ರೊವೋಕ್ಡ್"ನಲ್ಲೂ ಚರ್ಚೆಗೆ ಬಂದರು.
|