ವೆಸ್ಟ್ ಇಂಡೀಸ್‌ನಲ್ಲಿ ನಡೆದ ವಿಶ್ವ ಕಪ್ ಕ್ರಿಕೆಟ್ ಕೂಟದಲ್ಲಿ ಹೀನಾಯ ಪ್ರದರ್ಶನದ ಬಳಿಕ ಕ್ರಿಕೆಟ್ ಪ್ರೇಮಿಗಳಿಂದ ಛೀ ಥೂ ಎಂದೆಲ್ಲಾ ಹೀಗಳೆಸಿಕೊಂಡಿದ್ದ ಟೀಮ್ ಇಂಡಿಯಾ ಕ್ರಿಕೆಟ್ ತಂಡವು ದಕ್ಷಿಣ ಆಫ್ರಿಕಾದಲ್ಲಿ ಟ್ವೆಂಟಿ-20 ವಿಶ್ವಕಪ್ ಎತ್ತುವ ತನಕ 2007ರಲ್ಲಿ ಸವೆಸಿದ ಹಾದಿ ಹಲವು ಏಳು ಬೀಳುಗಳನ್ನು ಹೊಂದಿತ್ತು.
ಸಂದು ಹೋದ ವರ್ಷ ಭಾರತೀಯ ಕ್ರಿಕೆಟಿನಲ್ಲಿ ಯಾವ ಪರಿಯ ಬದಲಾವಣೆಗಳು ಕಂಡು ಬಂದವೆಂದರೆ, ಭವಿಷ್ಯದಲ್ಲೂ ಅವುಗಳು ತಮ್ಮ ಪ್ರಭಾವ ಬೀರುತ್ತವೆ. ಈ ಎಲ್ಲಾ ಘಟನಾವಳಿಗಳನ್ನು ಬದಿಗಿಟ್ಟು ಭಾರತೀಯ ಕ್ರಿಕೆಟ್ ತಂಡದ ಪ್ರದರ್ಶನವನ್ನು ಮಾತ್ರವೇ ನೋಡಿದರೆ, ಕ್ರಿಕೆಟ್ ಪ್ರೇಮಿಗಳನ್ನು ಈ ತಂಡವು ಎಷ್ಟು ಅಳಿಸಿತೋ, ವರ್ಷಾಂತ್ಯ ಸಮೀಪಿಸುತ್ತಿರುವಾಗ ಅದೇ ಮಾದರಿಯಲ್ಲಿ ಸಂತಸದ ಹೊನಲನ್ನೂ ಹರಿಸಿತು.
ಭಾರತೀಯ ಕ್ರಿಕೆಟ್ ಮಂಡಳಿಯಂತೂ ತನ್ನ ಚಿತ್ರ ವಿಚಿತ್ರ ನಿಲುವುಗಳಿಂದ ವರ್ಷವಿಡೀ ಸುದ್ದಿಯಲ್ಲಿತ್ತು. ಅವುಗಳಲ್ಲಿ ಭವಿಷ್ಯದಲ್ಲೂ ಪರಿಣಾಮ ಬೀರಬಲ್ಲ ಅದರ ತುಘಲಕ್ ಆದೇಶಗಳೂ ಸೇರಿಕೊಂಡಿವೆ. ಬಂಡಾಯ ರೂಪದಲ್ಲಿ ರಚನೆಗೊಂಡಿರುವ ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಸೇರುವ ಕ್ರಿಕೆಟಿಗರ ಮೇಲೆ ನಿರ್ಬಂಧಗಳು, ಆಟಗಾರರು ಬಾಯಿ ಮುಚ್ಚಿಕೊಂಡಿರಬೇಕು ಮತ್ತು ಆಯ್ಕೆದಾರರು ಪತ್ರಿಕೆಗಳಲ್ಲಿ ಅಂಕಣ ಬರೆಯಬಾರದು ಎಂಬುದು ಬಹು ಚರ್ಚಿತ ಸಂಗತಿಗಳು.
ಮಂಡಳಿಗೆ ಕೆಲವು ಸಂದರ್ಭಗಳಲ್ಲಿ ಬ್ಯಾಕ್‌ಫುಟ್‌ನಲ್ಲಿ ಆಡಬೇಕಾಗಿಬಂತು. ಅದರಲ್ಲಿ ಪ್ರಮುಖವಾದದ್ದೆಂದರೆ ತಂಡಕ್ಕೆ ಒಬ್ಬ ಸೂಕ್ತ ಕೋಚ್ ಆಯ್ಕೆ. ಯಾಕೆಂದರೆ ಗ್ರೆಗ್ ಚಾಪೆಲ್ ರಾಜೀನಾಮೆ ನೀಡಿದ ಬಳಿಕ ಈ ಹುದ್ದೆಗೆ ಆಯ್ಕೆಯಾದ ದಕ್ಷಿಣ ಆಫ್ರಿಕಾದ ಗ್ರಹಾಂ ಫೋರ್ಡ್ ಕೊನೆ ಕ್ಷಣದಲ್ಲಿ ಬಿಸಿಸಿಐನ ರಾಜಕೀಯಕ್ಕೆ ಹೆದರಿಯೋ ಅಥವಾ ಬೇರಾವುದೇ ಕಾರಣಕ್ಕೋ... ಹುದ್ದೆ ತಿರಸ್ಕರಿಸಿದರು. ಇದೀಗ ಮತ್ತೊಬ್ಬ ದಕ್ಷಿಣ ಆಫ್ರಿಕನ್ ಗ್ಯಾರಿ ಕರ್ಸ್ಟನ್ ಈ ಕೋಚ್ ಹುದ್ದೆಗೆ ನೇಮಕಗೊಂಡಿದ್ದಾರೆ.
ಇದಕ್ಕೆ ಮೊದಲು, ಭಾರತವು ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಲೆಂಡ್ಸ್‌ನಲ್ಲಿ ನಡೆದ ಮೂರನೇ ತಥಾ ಅಂತಿಮ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಬೇಕಾಯಿತು. ಆದರೆ ಆ ಬಳಿಕ ಬಾಂಗ್ಲಾ ದೇಶ ಮತ್ತು ಇಂಗ್ಲೆಂಡ್‌ಗಳನ್ನು ಅವರದೇ ನೆಲದಲ್ಲಿ 1-0 ಅಂತರದಿಂದ ಟೆಸ್ಟ್ ಸರಣಿಗಳನ್ನು ಜಯಿಸಿತು, ವರ್ಷಾಂತ್ಯದಲ್ಲಿ ಭಾರತಕ್ಕೆ ಬಂದ ಪಾಕಿಸ್ತಾನವನ್ನು 27 ವರ್ಷಗಳ ಬಳಿಕ ಟೆಸ್ಟ್ ಸರಣಿಯಲ್ಲಿ ಸೋಲಿಸಿತು.
ಏಕದಿನ ಕೂಟಕ್ಕೆ ಸಂಬಂಧಿಸಿ ವಿಶ್ವಕಪ್, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸೋಲುಗಳನ್ನು ಬಿಟ್ಟರೆ ಒಟ್ಟಾರೆಯಾಗಿ ಭಾರತದ ಪ್ರದರ್ಶನ ಉತ್ತಮವಾಗಿಯೇ ಇತ್ತು. ಬಾಂಗ್ಲಾ ದೇಶ, ಐರ್ಲೆಂಡ್, ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನಗಳ ವಿರುದ್ಧ ಸರಣಿ ಗೆದ್ದುಕೊಂಡಿತು. ಇಂಗ್ಲೆಂಡ್ ವಿರುದ್ಧ ಅದು 3-4 ಅಂತರದಿಂದಲಷ್ಟೇ ಸೋಲನ್ನಪ್ಪಿತಾದರೂ, ಆಸ್ಟ್ರೇಲಿಯಾ ವಿರುದ್ಧ 4-2ರಿಂದ ಸೋತು, ಆಸ್ಟ್ರೇಲಿಯಾದ ಪಾರಮ್ಯವನ್ನು ಒಪ್ಪಿಕೊಂಡಿತು.
ವೆಸ್ಟ್ ಇಂಡೀಸಿನಲ್ಲಿ ಭಾರತೀಯ ಕ್ರಿಕೆಟ್ ಕಂಡ ಅಧಃಪತನವನ್ನು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಟ್ವೆಂಟಿ-20 ತಂಡವು ಮರೆ ಮಾಚಿತು. ಸೌರವ್ ಗಂಗೂಲಿ, ಸಚಿನ್ ತೆಂಡುಲ್ಕರ್ ಮತ್ತು ರಾಹುಲ್ ದ್ರಾವಿಡ್ ಅವರಂತಹ ದಿಗ್ಗಜರು ಈ ಟೂರ್ನಿಯಲ್ಲಿ ಆಡದಿದ್ದರೂ, ಟೀಂ ಇಂಡಿಯಾವು ವಿಶ್ವ ಚಾಂಪಿಯನ್ ಆಯಿತು. ಈ ಮೂಲಕ ಭಾರತೀಯ ಕ್ರಿಕೆಟ್ ಭವಿಷ್ಯವು ಯುವ ಆಟಗಾರರ ಕೈಯಲ್ಲಿ ಭಧ್ರವಾಗಿದೆ ಮತ್ತು ತಂಡಕ್ಕೆ ಯಾರೂ ಅನಿವಾರ್ಯರಲ್ಲ ಎಂಬ ಸಂದೇಶವನ್ನೂ ನೀಡಿತು.
ಧೋನಿ ತಂಡವು ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ಮತ್ತು ಫೈನಲಿನಲ್ಲಿ ಬದ್ಧ ಪ್ರತಿಸ್ಪರ್ಧಿ ಪಾಕಿಸ್ತಾನದಂತಹ ಮಹಾನ್ ತಂಡಗಳನ್ನು ಸೋಲಿಸಿ ವಿಶ್ವ ಕಪ್ ಜಯಿಸುವ ಮೂಲಕ 1983ರ ಬಳಿಕದ ಅತ್ಯಂತ ಶ್ರೇಷ್ಠ ಪ್ರಶಸ್ತಿಯನ್ನು ಭಾರತದ ಮಡಿಲಲ್ಲಿರಿಸಿತು. ಭಾರತೀಯ ತಂಡವು ಸ್ವದೇಶಕ್ಕೆ ಆಗಮಿಸಿದಾಗ ಅದಕ್ಕೆ ಮುಂಬಯಿಯಲ್ಲಿ ನೀಡಿದ ಭವ್ಯ ಸ್ವಾಗತವು ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಹುಚ್ಚೆಬ್ಬಿಸಿತು.
ಈ ಒಂದು ವರ್ಷದಲ್ಲಿ ಭಾರತೀಯ ತಂಡವು ಮೂವರು ನಾಯಕರನ್ನು ನೋಡಿತು. ರಾಹುಲ್ ದ್ರಾವಿಡ್ ಅವರು ಇಂಗ್ಲೆಂಡ್ ಸರಣಿಯ ಬಳಿಕ ಅಚಾನಕ್ ಆಗಿ ಕಪ್ತಾನಗಿರಿ ತ್ಯಾಗ ಮಾಡಿದರು. ಅವರ ಈ ನಿರ್ಧಾರವು ಬಿಸಿಸಿಐನ ಹಲವು ಹುಳುಕುಗಳನ್ನು ಬಯಲಿಗೆಳೆಯುವಲ್ಲಿ ಮಾಧ್ಯಮಗಳಿಗೆ ಆಹಾರವಾಯಿತಾದರೂ, ಹಲವಾರು ರಹಸ್ಯಗಳು ಇನ್ನೂ ಹೊರಗೆ ಬಂದಿಲ್ಲ.
|