ಗುಣವರ್ಧನ ಶೆಟ್ಟಿ ಇರಾಕ್‌ನಲ್ಲಿ ಸರ್ವಾಧಿಕಾರಿಯಂತೆ ಮೆರೆದ ಮಾಜಿ ಅಧ್ಯಕ್ಷ ಸದ್ದಾಂ ಹುಸೇನ್ ಅವರನ್ನು ಗಲ್ಲಿಗೇರಿಸಿದ ಬಳಿಕ ಭುಗಿಲೆದ್ದಿರುವ ಹಿಂಸಾಚಾರ, ಭಾರತೀಯ ಸಂಜಾತೆ ಅಮೆರಿಕದ ಬಾಹ್ಯಾಕಾಶ ಯಾನಿ ಸುನೀತಾ ವಿಲಿಯಮ್ಸ್ ಅಭೂತಪೂರ್ವ ಸಾಧನೆ, ಶ್ರೀಲಂಕಾ ವಾಯುಪಡೆಯ ಬಾಂಬ್ ದಾಳಿಯಿಂದ ಎಲ್‌ಟಿಟಿಇಯ ನಾಯಕ ತಮಿಳು ಸೆಲ್ವನ್ ನಿಧನದ ಬಳಿಕ ಎಲ್‌ಟಿಟಿಇಗೆ ತೀವ್ರ ಹಿನ್ನಡೆ, ಜಾಗತಿಕ ತಾಪಮಾನದ ಬದಲಾವಣೆ ಕುರಿತು ಇಂಡೋನೇಶಿಯ ಬಾಲಿಯ ಹವಾಮಾನ ಸಮಾವೇಶದಲ್ಲಿ ವ್ಯಕ್ತವಾದ ಕಳವಳ, ವಿಶ್ವದ ದೊಡ್ಡಣ್ಣ ಅಮೆರಿಕಕ್ಕೆ ಅಲ್‌ಕೈದಾ ನಾಯಕ ಒಸಾಮಾ ಬಿನ್ ಲಾಡೆನ್ ಎಚ್ಚರಿಕೆ, ಹೀಗೆ ಹತ್ತುಹಲವು ಘಟನೆಗಳೊಂದಿಗೆ ಇತಿಹಾಸದ ಕಾಲಗರ್ಭಕ್ಕೆ ಸೇರಿಹೋದ 2007 ನೇ ವರ್ಷ ಸಿಹಿನೆನಪುಗಳಿಗಿಂತ ಹೆಚ್ಚಾಗಿ ಕಹಿನೆನಪುಗಳನ್ನು ಉಳಿಸಿಹೋಗಿದೆ.
ಹೊಸ ವರ್ಷವನ್ನು ಸಂಭ್ರಮ, ಸಡಗರದಿಂದ ಸ್ವಾಗತಿಸುವ ನಡುವೆ ಸರಿದು ಹೋದ ವರ್ಷದ ಘಟನಾವಳಿಗಳ ಬಗ್ಗೆ ಹಿನ್ನೋಟ ಹರಿಸಿದಾಗ, ನಿರುದ್ಯೋಗ, ಬಡತನ ವಿಶ್ವವ್ಯಾಪಿ ಕರಾಳಹಸ್ತವನ್ನು ವಿಸ್ತರಿಸಿರುವುದು ನಿಚ್ಚಳವಾಗಿದೆ. ಜತೆಗೆ ಏಡ್ಸ್ ಮುಂತಾದ ಮಾರಕ ಕಾಯಿಲೆಗಳು ಜಗತ್ತಿನ ಸಾವಿರಾರು ಜನರನ್ನು ಅಪೋಷನ ತೆಗೆದುಕೊಳ್ಳುತ್ತಾ, ನನ್ನ ನಾಮಾವಶೇಷ ನಿಮಗೆ ಸಾಧ್ಯವೇ ಎಂದು ಮಾನವಪೀಳಿಗೆಯನ್ನು ಅಣಕಿಸುತ್ತಿದೆ. 2008 ಹೊಸ ವರ್ಷವನ್ನು ಸಂಭ್ರಮ, ಉಲ್ಲಾಸದಿಂದ ಸ್ವಾಗತಿಸುವ ನಡುವೆ 2007ರಲ್ಲಿ ಸಂಭವಿಸಿದ ಘಟನಾವಳಿಗಳ ಒಂದು ಸಿಂಹಾವಲೋಕನ.
ಜನವರಿ 7: ಲಂಡನ್ ಸಂಡೇ ಟೈಮ್ಸ್ ಇರಾನಿನ ಯುರೇನಿಯಂ ಸಂಸ್ಕರಣೆ ಸೌಲಭ್ಯಗಳ ಮೇಲೆ ಇಸ್ರೇಲ್ ಸರ್ಕಾರ ದಾಳಿ ಮಾಡಲು ಯೋಜಿಸುತ್ತಿದೆ ಎಂಬ ವರದಿಯನ್ನು ಪ್ರಕಟಿಸಿತು. ಇಸ್ರೇಲನ್ನು ಭೂಪಟದಿಂದ ಅಳಿಸಿಹಾಕಬೇಕು ಎಂದು ಇರಾನ್ ಅಧ್ಯಕ್ಷ ಮಹ್ಮದ್ ಅಹ್ಮದಿ ನೆಜಾದ್ ಹೇಳಿಕೆ ನೀಡಿದ್ದರು. ಇಸ್ರೇಲ್‌ಗೆ ಬಹಿರಂಗ ಬೆದರಿಕೆ ಹಾಕುವ ಮೂಲಕ ಅಹ್ಮದಿ ನೆಜಾದ್ ಇರಾನ್ ಮೇಲೆ ಪೂರ್ವನಿಯೋಜಿತ ದಾಳಿಗೆ ಪ್ರೇರೇಪಣೆ ನೀಡಿದೆಯೆಂದು ಪತ್ರಿಕೆಗಳು ಬರೆದವು.
ಟೈಮ್ಸ್ ಪತ್ರಿಕೆ ಇಸ್ರೇಲ್ ದಾಳಿಯ ಬಗ್ಗೆ ವರ್ಣರಂಜಿತವಾಗಿ ಬಣ್ಣಿಸಿತು. ದಾಳಿಯಲ್ಲಿ ಸಾಂಪ್ರದಾಯಿಕ ಲೇಸರ್ ನಿರ್ದೇಶಿತ ಬಾಂಬ್‌ಗಳು, ಒಂದು ಕಿಲೊಟನ್ ಅಣ್ವಸ್ತ್ರ ಬಂಕರ್ ಬಸ್ಟರ್‌ಗಳನ್ನು ಬಳಸಲಾಗುವುದೆಂದು ಬರೆಯಿತು. ಹಸಿರು ದೀಪ ಹೊತ್ತಿಕೊಂಡ ಕೂಡಲೇ ಒಂದೇ ಒಂದು ಕಾರ್ಯಾಚರಣೆ, ಒಂದೇ ದಾಳಿ ಇರಾನಿನ ಅಣ್ವಸ್ತ್ರ ಯೋಜನೆ ನೆಲಸಮ ಎಂದೆಲ್ಲಾ ಬರೆಯಿತು.
ಇಷ್ಟೆಲ್ಲಾ ಊಹಾಪೋಹಗಳ ನಡುವೆ ವಿಶ್ವಸಂಸ್ಥೆಯ ಶಸ್ತ್ರಾಸ್ತ್ರ ತಪಾಸಕರು 1994ರ ಬಳಿಕ ಇರಾಕ್‌ನಲ್ಲಿ ಅಂತಹ ಮಹತ್ವದ ಸಮೂಹ ವಿನಾಶಕಾರಿ, ರಾಸಾಯನಿಕ ಅಸ್ತ್ರಗಳು ಇಲ್ಲವೆಂದು ಬಿಡುಗಡೆ ಮಾಡಿದ ವರದಿಯಿಂದ ಇರಾನ್ ಮೇಲೆ ಕಣ್ಣಿರಿಸಿದ್ದ ಅಮೆರಿಕದ ಎಲ್ಲ ಪ್ರಯತ್ನಗಳು ಠುಸ್ಸೆಂದಿತು.
ಜನವರಿ 22: ಇರಾಕ್‌ನಲ್ಲಿ ಸದ್ದಾಹುಸೇನ್ ಅವರನ್ನು ಗಲ್ಲಿಗೇರಿಸಿದ ಬಳಿಕ ಉಗ್ರಗಾಮಿಗಳ ಅಟ್ಟಹಾಸ ಮೇರೆ ಮೀರಿತು. ಉಗ್ರರ ಅಟಾಟೋಪಕ್ಕೆ ನೂರಾರು ನಾಗರಿಕರು, ಸೈನಿಕರು ಬಲಿಯಾದರು. ಬಾಗ್ದಾದ್‌ನಲ್ಲಿ ಶಿಯಾ ಮುಸ್ಲಿಮ್ ಪಂಗಡದವರೇ ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ಶಕ್ತಿಶಾಲಿ ಎರಡು ಬಾಂಬ್‌ಗಳು ಸ್ಫೋಟಿಸಿ ಕನಿಷ್ಠ ಪಕ್ಷ 72 ಮಂದಿ ಬಲಿಯಾದರು. ಸುಮಾರು 160 ಮಂದಿ ಗಾಯಗೊಂಡರು. ಬಾಗ್ದಾದ್ ಮಾರುಕಟ್ಟೆಯ ಸ್ಫೋಟವು ಶಿಯಾ ಪಂಗಡದವರನ್ನು ಗುರಿಯಾಗಿಸಿತ್ತು. ಇರಾಕ್ ರಕ್ತಲೇಪಿತ ಇತಿಹಾಸಕ್ಕೆ ಸಾಕ್ಷಿಯಾಯಿತು.
ಜನವರಿ 29:ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಬ್ರಿಟನ್ ಸೆಲಿಬ್ರಿಟಿ ಬಿಗ್ ಬ್ರದರ್ ಶೋನಲ್ಲಿ ವಿಜೇತರಾಗುವ ಮೂಲಕ ದೇಶ, ವಿದೇಶಗಳಲ್ಲಿ ಮನೆಮಾತಾದರು. ಬಿಗ್ ಬ್ರದರ್ ಷೋನಲ್ಲಿ ಸಹಸ್ಪರ್ಧಿಗಳು ಶಿಲ್ಪಾಳ ಆಹಾರ ಸೇವಿಸುವ ಧಾಟಿ ಮತ್ತು ಭಾರತೀಯ ಹಿನ್ನೆಲೆಯನ್ನು ಕುರಿತು ಅಪಹಾಸ್ಯ ಮಾಡಿದ ಘಟನೆ ವಿವಾದದ ಕಿಡಿಯನ್ನು ಸ್ಫೋಟಿಸಿತ್ತು. ನಾಯಿ ಮುಂತಾದ ಹೀನ ಪದಗಳನ್ನು ಸಹ ಸ್ಪರ್ಧಿಗಳು ಶಿಲ್ಪಾ ವಿರುದ್ಧ ಪ್ರಯೋಗಿಸಿದ್ದರು.
ಆದರೆ ಶಿಲ್ಪಾ ಜನಾಂಗೀಯ ನಿಂದನೆಗೆ ಒಳಗಾದ ಬಗ್ಗೆ ಚಾನಲ್ 4 ನಿರಾಕರಿಸುತ್ತಾ ಬಂದಿತು. ಅಂತಿಮವಾಗಿ ಬಿಗ್ ಬ್ರದರ್ ಶೋನಲ್ಲಿ ಶಿಲ್ಪಾ ಕಿರೀಟಧಾರಿಣಿಯಾಗಿ ಒಂದು ಲಕ್ಷ ಪೌಂಡ್ ಹಣವನ್ನು ಗೆದ್ದುಕೊಂಡರು. ಈ ಸ್ಪರ್ಧೆಯಲ್ಲಿ ಸಹಸ್ಪರ್ಧಿ ಜೇಡ್ ಗೂಡಿಯಿಂದ ಜನಾಂಗೀಯ ನಿಂದನೆಗೆ ಒಳಗಾದ ಶಿಲ್ಪಾ ಗೆಲ್ಲುವ ಫೇವರಿಟ್ ಎನಿಸಿದ್ದರು.
|