ಸಂಸತ್ತಿನ ಜಂಟಿ ಸದನವನ್ನುದ್ದೇಶಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೋಮವಾರ ಮಾಡಿದ ಚೊಚ್ಚಲ ಬಜೆಟ್ ಭಾಷಣವು, ಯುಪಿಎ ಸರಕಾರ ಚುನಾವಣಾ ಹಾದಿ ಹಿಡಿದಿದೆ ಎಂಬ ಸ್ಪಷ್ಟ ಚಿತ್ರಣ ನೀಡಿದೆ.
ಈಗಾಗಲೇ ಆರಂಭಿಸಲಾಗಿರುವ, ಹೆಚ್ಚೂಕಮ್ಮಿ ಎಲ್ಲಾ ಅಭಿವೃದ್ಧಿ ಕಾರ್ಯಗಳನ್ನು ಭಾಷಣದಲ್ಲಿ ಎದ್ದು ಕಾಣಿಸಲಾಗಿದೆ. ಭಾರತ ನಿರ್ಮಾಣ, ಎನ್ಆರ್ಇಜಿಎ ಮತ್ತು ಸರಕಾರ ಕೈಗೆತ್ತಿಕೊಂಡಿರುವ ಎಲ್ಲಾ ಪ್ರಮುಖ ಕಾರ್ಯಕ್ರಮಗಳ ಮೇಲೆ ಭಾಷಣದಲ್ಲಿ ಗಮನ ಕೇಂದ್ರೀಕರಿಸಲಾಗಿದೆ.
ರಾಷ್ಟ್ರಪತಿ ಪಾಟೀಲರ ಭಾಷಣದಲ್ಲಿ 'ಆಮ್ ಆದ್ಮಿ'(ಜನಸಾಮಾನ್ಯ) ಹಾಗೂ ಕಳೆದ ನಾಲ್ಕು ವರ್ಷಗಳಿಂದ ಯುಪಿಎ ಸರಕಾರ ಬಳಸುತ್ತಿದ್ದ ಅಭಿವೃದ್ಧಿ ಘೋಷಣೆಗಳು ಸೇರಿದ್ದವು. ಆಡಳಿತಾರೂಢ ಕಾಂಗ್ರೆಸ್ ಮೈತ್ರಿಕೂಟದಿಂದ ಕೆಲವು ಪಕ್ಷಗಳು ದೂರಸರಿಯುವಂತೆ ಮಾಡಿದ ಭಾರತ-ಅಮೆರಿಕ ಒಪ್ಪಂದದ ಕುರಿತು ಭಾಷಣದಲ್ಲಿ ಯಾವುದೇ ಬಲವಾದ ಹೇಳಿಕೆಗಳು ಇರಲಿಲ್ಲ. ಅಮೆರಿಕ ಹಾಗೂ ಇತರ ಸ್ನೇಹಿ ರಾಷ್ಟ್ರಗಳೊಂದಿಗೆ ಅಣುನಿಗಮ ಸಾಧ್ಯ ಎಂಬುದು ನಮ್ಮ ಆಶಾವಾದ ಎಂದಷ್ಟೆ ಹೇಳಿದರು.
ಶುಕ್ರವಾರ ಕೇಂದ್ರ ಸರಕಾರ ಮಂಡಿಸಲಿರುವ ವಾರ್ಷಿಕ ಬಜೆಟ್ ಮುಂಚಿತವಾಗಿ ರಾಷ್ಟ್ರಪತಿಗಳು ಮಾಡಿರುವ ಭಾಷಣದಲ್ಲಿ ಉನ್ನತದ ಮಟ್ಟದ ಅಭಿವೃದ್ಧಿ ದರ ಹಾಗೂ ಬೆಲೆಏರಿಕೆಯ ಸ್ಥಿರತೆಯನ್ನು ಕಾಯ್ದುಕೊಳ್ಳಲು ಸರಕಾರವು ನಿರಂತರ ಪ್ರಯತ್ನ ಮಾಡುವುದಾಗಿ ನುಡಿದರು.
ಏಷ್ಯಾದ ತೃತೀಯ ಅತಿದೊಡ್ಡ ಆರ್ಥಿಕತೆಯಾಗಿರುವ ಭಾರತವು, ತನ್ನ ಅಭಿವೃದ್ಧಿದರವನ್ನು 8.7ಕ್ಕೆ ವಿಸ್ತರಿಸಲಿದೆ. ಹನ್ನೊಂದನೆ ಯೋಜನೆಯಲ್ಲಿ ಕೃಷಿ ಅಭಿವೃದ್ಧಿಯ ದರವನ್ನು ಶೇ 4ಕ್ಕೇರಿಸಲಾಗಿದೆ ಎಂದು ರಾಷ್ಟ್ರಪತಿಗಳ ಭಾಷಣದಲ್ಲಿ ಹೇಳಲಾಯಿತು.
ವಿದೇಶಾಂಗ ವ್ಯವಹಾರದ ಕುರಿತು ಪ್ರಸ್ತಾಪಿಸಿದ ಅವರು 'ಪರಿಸ್ಥಿತಿಗಳು ಅನುವು ಮಾಡಿದಾಗ' ಪಾಕಿಸ್ತಾನದೊಂದಿಗಿನ ಮಾತುಕತೆ ಪ್ರಕ್ರಿಯೆಯನ್ನು ಭಾರತವು ಮುಂದುವರಿಸಲಿದೆ. ಪಾಕಿಸ್ತಾನದೊಂದಿಗೆ ಶಾಂತಿಯುತ, ಸ್ನೇಹಮಯ ಮತ್ತು ಉತ್ತಮ ನೆರೆಹೊರೆಯ ಬಾಂಧವ್ಯಕ್ಕೆ ನಾವು ಬದ್ಧರಾಗಿದ್ದೇವೆ. ಸ್ಥಿರ ಮತ್ತು ಅಭ್ಯುದಯ ಪಾಕಿಸ್ತಾನ ಹಾಗೂ ಅದರೊಳಗಿನ ಶಾಂತಿ ನಮ್ಮ ಆಸಕ್ತಿಯಾಗಿದೆ ಎಂದು ಪ್ರತಿಭಾ ಪಾಟೀಲ್ ತನ್ನ ಪ್ರಥಮ ಬಜೆಟ್ ಭಾಷಣದಲ್ಲಿ ನುಡಿದರು.
|