ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಬಜೆಟ್
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲ್ವೇ ಬಜೆಟ್ ಆಗಲಿದೆ 'ಸಂತೃಪ್ತಿಯ ಬುಟ್ಟಿ'
ಲಾಲು ಪ್ರಸಾದ ಯಾದವರು ಮತ್ತೊಂದು, ಬಹುಶಃ ಯುಪಿಎ ಸರಕಾರದ ಕೊನೆಯ ಪೂರ್ಣ ಪ್ರಮಾಣದ 'ಜನಪರ' ರೈಲ್ವೇ ಬಜೆಟನ್ನು ಮಂಡಿಸುವ ಸಿದ್ಧತೆಯಲ್ಲಿದ್ದು, ರೈಲ್ವೇಯ ಸಾಧನೆಯಿಂದ ಉತ್ತೇಜಿತರಾಗಿ ಪ್ರಯಾಣ ದರ ಕಡಿತಗೊಳಿಸುವ ಹಾಗೂ ಸರಕು ಸಾಗಾಟ ದರವನ್ನು ತರ್ಕಬದ್ಧ ಪರಿಷ್ಕರಣೆಗೆ ಒಳಪಡಿಸುವ ಎಲ್ಲ ಲಕ್ಷಣಗಳಿವೆ.

ಈ ಮೂಲಕ ಸತತ ನಾಲ್ಕನೇ ವರ್ಷದ ಬಜೆಟಿನಲ್ಲಿ ಲಾಲೂ ಪ್ರಸಾದರು ಪ್ರಯಾಣ ದರ ಏರಿಸದೇ ಇರುವ ಸಾಧನೆ ಮಾಡುವ ನಿರೀಕ್ಷೆ ಇದೆ. ಬಜೆಟಿನಲ್ಲಿ 26 ಹೊಸ ಯೋಜನೆಗಳನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಆರ್ಥಿಕ ಮತ್ತು ತಾಂತ್ರಿಕ ವಿಭಾಗಗಳಲ್ಲಿ ರೈಲ್ವೇ ಇಲಾಖೆಯ ಅದ್ಭುತ ಸಾಧನೆ ಮಾಡಿರುವುದನ್ನು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸೋಮವಾರ ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದರು.

ಪ್ರಯಾಣಿಕ ದರವನ್ನು 3ರಿಂದ 5 ಶೇಕಡಾದಷ್ಟು ಇಳಿಕೆಯಾಗಲಿದ್ದರೆ, ಪೆಟ್ರೋಲಿಯಂ, ಉಕ್ಕು ಮತ್ತು ಕಬ್ಬಿಣದ ಸರಕು ಸಾಗಾಟ ದರವು ಕೂಡ ಮೂರರಿಂದ ನಾಲ್ಕು ಶೇಕಡಾದಷ್ಟು ಇಳಿಕೆ ಕಾಣಲಿದೆ ಎಂದು ಮೂಲಗಳು ತಿಳಿಸಿವೆ.

ಕಾರ್ಯಾಚರಣೆ ವೆಚ್ಚವನ್ನು ಭಾರಿ ಪ್ರಮಾಣದಲ್ಲಿ ತಗ್ಗಿಸುವಲ್ಲಿ ರೈಲ್ವೇ ಇಲಾಖೆ ಯಶಸ್ವಿಯಾಗಿರುವುದು ಮತ್ತು ಕಾರ್ಯಾಚರಣಾ ಪ್ರಮಾಣ ವರ್ಧಿಸಿರುವುದರಿಂದ ದೊರೆತ ಲಾಭಾಂಶದಿಂದಾಗಿ ಪ್ರೇರಣೆ ಪಡೆದು ಈ ದರ ಕಡಿತವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಏಪ್ರಿಲ್ 2007 ಹಾಗೂ ಜನವರಿ 2008ರ ಅವಧಿಯಲ್ಲಿ ಸರಕು ಸಾಗಾಟದಿಂದ ಆದಾಯವು ಶೇ.11ರಷ್ಟು ವರ್ಧಿಸಿದ್ದು, ಪ್ರಯಾಣಿಕರ ದರದಿಂದ ಬರುವ ಆದಾಯವು ಶೇ.14ರಷ್ಟು ಏರಿಕೆಯಾಗಿತ್ತು. ಇದರಿಂದ ಲಾಲು ಅವರು ದರ ಕಡಿತಕ್ಕೆ ಮುಂದಾಗಿದ್ದಾರೆ.

ಎಲ್ಲಾ ವರ್ಗದ ಪ್ರಯಾಣ ದರಗಳನ್ನೂ ಕಡಿತಗೊಳಿಸಲಾಗುತ್ತದೆ ಮತ್ತು ಉಪನಗರೀಯ ರೈಲು ಪ್ರಯಾಣ ದರವನ್ನೂ ಪರಿಷ್ಕರಿಸಲಾಗುತ್ತದೆ. ಸರಕಿಗೆ ಸಂಬಂಧಿಸಿ, ಕಳೆದ ಮೂರು ಬಜೆಟ್‌ಗಳಲ್ಲಿ ಮಾಡಿರುವಂತೆ ರೈಲ್ವೇಯು ತನ್ನ ತರ್ಕಬದ್ಧ ಪರಿಷ್ಕರಣಾ ನೀತಿಯನ್ನು ಮುಂದುವರಿಸಲಿದೆ ಎಂದು ಭಾವಿಸಲಾಗಿದೆ.

ರೈಲ್ವೇ ನಿರ್ವಹಣೆಯಿಂದ ಉತ್ತೇಜಿತರಾಗಿರುವ ಲಾಲು, ಈ ಬಾರಿಯ ಬಜೆಟ್ ಸಾಮಾನ್ಯ ಪ್ರಯಾಣಿಕನಿಗೆ 'ಸಂತೃಪ್ತಿಯ ಬುಟ್ಟಿ'ಯಂತಾಗಲಿದೆ ಎಂದಿದ್ದಾರೆ.
ಮತ್ತಷ್ಟು
ರಾಷ್ಟ್ರಪತಿಯಿಂದ ಚುನಾವಣಾ ಭಾಷಣ ಮಾಡಿಸಿದ ಸರಕಾರ!
ಬಿರುಗಾಳಿ ಎಬ್ಬಿಸಲಿರುವ ಬಜೆಟ್ ಅಧಿವೇಶನ
ಬಜೆಟ್‌ನಲ್ಲಿ ರೈತರಿಗೆ ಹೆಚ್ಚಿನ ಕಾಳಜಿ ಇರಲಿ
ಬಜೆಟ್‌ನಿಂದ ಬ್ಯಾಂಕಿಂಗ್ ವಲಯದ ನಿರೀಕ್ಷೆ ಏನು ?
ಬಜೆಟ್ ; ಸಹಕಾರ ಬ್ಯಾಂಕ್‌ಗಳಿಗೆ ತೆರಿಗೆ ವಿನಾಯಿತಿ
ಜವಳಿ ಉದ್ಯಮದ ವ್ಯಥೆಗೆ ಬಜೆಟ್‌ನಲ್ಲಿ ಪರಿಹಾರವಿದೆಯೇ ?