ಮುಂಬರುವ ಬಜೆಟ್ ಕೃಷಿಕರಿಗೆ ನೆಮ್ಮದಿ ತರಲಿದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ಸುಳಿವು ನೀಡಿದ್ದಾರೆ.
ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಮುಂಬರುವ ಒಂದೇರಡು ದಿನಗಳಲ್ಲಿ ಸಂಸತ್ತಿನಲ್ಲಿ ಬಜೆಟ್ ಮಂಡನೆ ಮಾಡಲಿದ್ದು, ನಂತರ ಈ ಕುರಿತು ಸುದೀರ್ಘವಾಗಿ ಚರ್ಚಿಸಲಾಗುವುದು ಎಂದು ಪ್ರಧಾನಿ ಭರವಸೆ ನೀಡಿದರು.
ಸೋನಿಯಾಗಾಂಧಿ ಅವರ ನೇತೃತ್ವದಲ್ಲಿ ಕೇಂದ್ರದ ಯುಪಿಎ ಸರಕಾರ ರೈತರ ಪರವಾಗಿದ್ದು,ಮನವಿಯಲ್ಲಿ ಸಲ್ಲಿಸಿದ ಬೇಡಿಕೆಗಳನ್ನು ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಪಂಜಾಬ್‌ನಿಂದ ತಮ್ಮ ನಿವಾಸಕ್ಕೆ ಆಗಮಿಸಿದ್ದ ರೈತರನ್ನು ಉದ್ದೇಶಿಸಿ ಮಾತನಾಡಿದರು.
ರೈತರ ಸಮಸ್ಯೆಗಳಿಗೆ ಪರಿಹಾರ ಜವಳಿ ಗುಡಿಕೈಗಾರಿಕೆಗೆ ಸಣ್ಣ ಪ್ರಮಾಣದ ಸಾಲಕ್ಕೆ ಆಗ್ರಹಿಸಿ ಅಕಾಲಿದಳ ಮತ್ತು ಬಿಜೆಪಿ ಪಕ್ಷಗಳು ರಾಜಧಾನಿಯಲ್ಲಿ ಸಂಘಟಿಸಿದ್ದ ಬೃಹತ್ ರೈತರ ಮೆರವಣಿಗೆಯ ನಂತರ ಪ್ರಧಾನಿ ನಿವಾಸಕ್ಕೆ ತೆರಳಿ ಮನವಿ ಪತ್ರವನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾಗಾಂಧಿ ಕೂಡಾ ಉಪಸ್ಥಿತರಿದ್ದರು.
ಪಂಜಾಬ್ ರೈತರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದು, ಕಾಂಗ್ರೆಸ್ ಪಕ್ಷ ಹಾಗೂ ಯುಪಿಎ ಸರಕಾರ ಪಂಜಾಬ್ ರಾಜ್ಯದ ಅಭಿವೃದ್ಧಿ ಮತ್ತು ಏಳಿಗೆಯನ್ನು ಬಯಸುತ್ತದೆ ಎಂದು ಪ್ರಧಾನಿ ಮನಮೋಹನ್ ಸಿಂಗ್ ರೈತ ಸಮೂಹಕ್ಕೆ ತಿಳಿಸಿದರು.
|