ಅಂದಾಜು ಇನ್ನೂರು ವರ್ಷಗಳಿಗೂ ಹೆಚ್ಚು ಇತಿಹಾಸವನ್ನು ಹೊಂದಿರುವ ಭಾರತೀಯ ರೈಲಿಗೆ ಹೊಸ ಕಾಯಕಲ್ಪ ನೀಡಿದ್ದೇ ಲಾಲೂ ಪ್ರಸಾದ್ ಯಾದವ್ ಎನ್ನುವ ಮಾತಿನಲ್ಲಿ ಎಳ್ಳಷ್ಟು ಸಂಶಯವಿಲ್ಲ. ಸ್ವಾತಂತ್ರ್ಯಾನಂತರ ಭಾರತೀಯ ರೈಲು ಮತ್ತು ನಷ್ಟ ಅವಳಿಗಳು ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಐದು ವರ್ಷಗಳ ಹಿಂದೆ ರೈಲ್ವೆ ಸಚಿವರಾಗಿ ಬಂದ ಲಾಲೂ ಪ್ರಸಾದ್ ಯಾದವ್, ಬಿಹಾರ್‌ನ್ನು ಆಳಿದ ರೀತಿಯಲ್ಲಿ ಆಳಬಹುದು ಎನ್ನುವುದು ಎಲ್ಲರ ನಿರೀಕ್ಷೆಯಾಗಿತ್ತು. ಮೊದಲ ಎರಡು ವರ್ಷಗಳ ಅವಧಿಯಲ್ಲಿ ಲಾಭವೂ ಮಾಡದೇ ನಷ್ಟದಲ್ಲಿಯೂ ಸಾಗದೇ ರೈಲ್ವೆ ಮೂರನೆ ವರ್ಷದಲ್ಲಿ 20 ಸಾವಿರ ಕೋಟಿ ರೂಗಳ ಲಾಭ ದಾಖಲಿಸಿತು. ಇದು ಭಾರತೀಯ ರೈಲಿಗೆ ಅಷ್ಟೇ ಅಲ್ಲ ಸಾರಿಗೆ ಉದ್ಯಮದಲ್ಲಿ ಸಂಚಲನ ಹುಟ್ಟು ಹಾಕಿತು. ಹಾಗಾದರೆ ಲಾಲೂ ಮಾಡಿದ್ದೇನು ? ಮಾಡಬೇಕಿರುವುದೇನು ಅನ್ನುವತ್ತ ಕ್ಷಣ ಚಿತ್ತದ ಲೇಖನ.
ಇನ್ನೂ 664 ಕೋಟಿ ರೂಗಳ ಲಾಭಾಂಶವನ್ನು ನೀಡಬೇಕಿರುವ ಭಾರತೀಯ ರೈಲ್ವೆ ಇಲಾಖೆ, ಕಳೆದ ಎರಡು ವರ್ಷಗಳಿಂದ ಲಾಭದಲ್ಲಿ ಸಾಗುತ್ತಿದೆ. ಆದರೆ ರೈಲ್ವೆ ಇನ್ನೂ ಹಲವು ಬಾಬ್ತುಗಳಲ್ಲಿ ನಷ್ಟದಿಂದ ಹೊರಗೆ ಬಂದಿಲ್ಲ.
ಸರಕು ಸಾಗಾಣಿಕೆಯ ಮೂಲಕವೇ ಎರಡು ಮೂರಾಂಶದಷ್ಟು ಆದಾಯವನ್ನು ಗಳಿಸುತ್ತಿರುವ ರೈಲ್ವೆ, ಪ್ರಯಾಣಿಕ ಸಾರಿಗೆಯಲ್ಲಿ ಇನ್ನೂ ರಿಯಾಯಿತಿಯನ್ನು ಮುಂದುವರಿಸಿದೆ. ಒಟ್ಟು ಆದಾಯದ ಶೇ 40 ರಷ್ಟನ್ನು 15 ಲಕ್ಷ ರೈಲ್ವೆ ಉದ್ಯೋಗಿಗಳಿಗೆ ಸಂಬಳ ನೀಡುವುದಕ್ಕೆ ವ್ಯಯಿಸುತ್ತಿದೆ. ಉಳಿದ ಮೊತ್ತದಲ್ಲಿ ಶೇ 20 ರಷ್ಟು ಇಂಧನದ ಬಾಬ್ತಿಗೆ ವ್ಯಯವಾಗುತ್ತಿದೆ. ಎಲ್ಲ ವೆಚ್ಚಗಳು ಮತ್ತು ಲಾಭಾಂಶ ಪಾವತಿಯ ನಂತರ ಒಟ್ಟು ಆದಾಯದ ಶೇ 7 ರಷ್ಟು ಮಾತ್ರ ಪುನರ್ ಬಂಡವಾಳ ಹೂಡಿಕೆಗೆ ಉಳಿಯುತ್ತದೆ.
ಮೇಲಿನ ಅಂಕಿ ಅಂಶಗಳನ್ನು ಗಮನಿಸಿದಲ್ಲಿ ರೈಲ್ವೆಯ ಹೆಚ್ಚಿನ ಆದಾಯ ಬರುತ್ತಿರುವುದು ಸರಕು ಸಾಗಾಣಿಕೆಯಿಂದ. ಪ್ರಯಾಣಿಕರ ಸಾರಿಗೆಯಲ್ಲಿ ರೈಲು ದರಗಳಲ್ಲಿ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಏರಿಕೆಯಾಗಿಲ್ಲ. ಈ ಏರಿಕೆಯಿಲ್ಲದ ಪರಿಣಾಮವಾಗಿ ರೈಲು ಪ್ರಯಾಣ ನಾಗರಿಕರಿಗೆ ಇಷ್ಟವಾಗಬಹುದು. ಸಮಸ್ಯೆ ಎಂದರೆ ರೈಲಿನ ಬರುವ ಆದಾಯದ ಬಹುತೇಕ ಪಾಲು ಸಂಬಳ ಮತ್ತು ಇಂಧನ ವೆಚ್ಚದ ಬಾಬ್ತಿನಲ್ಲಿ ಕಳೆದು ಹೋಗುತ್ತಿರುವುದರಿಂದ ಈ ಬಾಬ್ತಿನ ವೆಚ್ಚವನ್ನು ತಗ್ಗಿಸಲೇ ಬೇಕು. ಮುಂದಿನ ದಿನಗಳಲ್ಲಿ ಬಂಡವಾಳ ಹೂಡಬೇಕಾದ ಮತ್ತು ರೈಲು ಸಂಪರ್ಕ ಜಾಲ ವಿಸ್ತರಣೆಯಾಗಬೇಕಿದೆ. ರೈಲು ಸಂಪರ್ಕ ಜಾಲದ ವಿಸ್ತರಣೆಗೆ ಬಂಡವಾಳದ ಅವಶ್ಯಕತೆ ಇದೆ. ಬರುವ ಆದಾಯದ ಒಂದು ಪಾಲನ್ನು ಬಂಡವಾಳ ಹೂಡಿಕೆಗೆ ಸಾಧ್ಯವಿಲ್ಲದಂತಹ ಪರಿಸ್ಥಿತಿ ರೈಲ್ವೆ ಇಲಾಖೆಗೆ ಇರುವುದರಿಂದ ಬಂಡವಾಳ ಹೂಡಿಕೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲೇಬೇಕು.
ಈ ನಿಟ್ಟಿನಲ್ಲಿ ಸರಕಾರ ಖಾಸಗಿ ಬಂಡವಾಳವನ್ನು ರೈಲು ಸಾರಿಗೆಯಲ್ಲಿ ಹೂಡಲು ಸರಕಾರ ಅನುಮತಿ ನೀಡುತ್ತದೋ ಇಲ್ಲವೋ ಗೊತ್ತಿಲ್ಲ. ಲಾಲೂ ಪ್ರಸಾದ್ ಯಾದವ್ ಮಾತ್ರ ಅನುಮತಿ ನೀಡಲಾರರು. ಮೊದಲನೆಯದಾಗಿ ಜನತಾ ಪರಿವಾರದ ಸೈದ್ದಾಂತಿಕ ಹಿನ್ನಲೆ ಖಾಸಗಿ ಬಂಡವಾಳವಾಗಲಿ ಇಲ್ಲವೇ ಬಂಡವಾಳ ಶಾಹಿ ಪದ್ದತಿಯನ್ನು ಒಪ್ಪಿಕೊಳ್ಳುವುದಿಲ್ಲ.
|