ಇನ್ನು ಎರಡು ವರ್ಷಗಳ ನಂತರ ಸರದಿ ಸಾಲಿನಲ್ಲಿ ನಿಂತು ರೈಲ್ವೆ ಟಿಕೆಟ್ ತೆಗೆದುಕೊಳ್ಳುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ಅವರು ಲೋಕ ಸಭೆಯಲ್ಲಿ ಭರವಸೆ ನೀಡಿದರು.
ದೇಶದ ವಿವಿದ ರೈಲು ನಿಲ್ದಾಣಗಳಲ್ಲಿ ಇರುವ 250 ಸ್ವಯಂ ಚಾಲಿತ ಟಿಕೆಟ್ ಮಾರಾಟದ ಯಂತ್ರಗಳನ್ನು ಮುಂಬರುವ ಎರಡು ವರ್ಷಗಳ ಅವಧಿಯಲ್ಲಿ ಆರು ಸಾವಿರಕ್ಕೆ ಹೆಚ್ಚಿಸಲಾಗುವುದು. ಕಾಯ್ದಿಡದ ಟಿಕೆಟ್ ಕೌಂಟರ್‌ಗಳ ಸಂಖ್ಯೆಯನ್ನು ಮೂರು ಸಾವಿರದಿಂದ 15 ಸಾವಿರದವರೆಗೆ ಏರಿಸಲಾಗುವುದು. ಅಲ್ಲದೇ ಕಾಯ್ದಿರಿಸಿದ ಮತ್ತು ಕಾಯ್ದಿರಸದಿರುವ ಟಿಕೆಟುಗಳನ್ನು ಮೊಬೈಲ್ ಮೂಲಕ ಪ್ರಯಾಣಿಕರಿಗೆ ನೀಡುವ ಯೋಜನೆಯನ್ನು ರೈಲ್ವೆ ಇಲಾಖೆ ಮಾಡಿದೆ ಎಂದು ಲಾಲೂ ಪ್ರಸಾದ್ ಯಾದವ್ ಅವರು ಲೋಕಸಭೆಯಲ್ಲಿ 2008 -9ರ ಬಜೆಟ್ ಮಂಡನೆಯ ಸಮಯದಲ್ಲಿ ಭರವಸೆ ನೀಡಿದರು.
ಮಾಹಿತಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುವುದಕ್ಕೆ ಲಾಲೂ ಪ್ರಸಾದ್ ಯಾದವ್ ಅವರು ಮುಂದಾಗಿದ್ದು ಎರಡು ವರ್ಷಗಳ ನಂತರ ನಿಮಗೆ ರೈಲ್ವೆ ಕೌಂಟರುಗಳ ಬಳಿ ಸರತಿ ಸಾಲು ಕಾಣ ಸಿಗುವುದಿಲ್ಲ. ಪ್ರಯಾಣಿಕರು ಮನೆಯಲ್ಲಿ ಟಿಕೆಟ್ ತೆಗೆದುಕೊಂಡು ನೇರವಾಗಿ ರೈಲು ಏರಬಹುದು ಎಂದು ಪ್ರಕಟಿಸಿದರು.
ಜನಸಾಧಾರಣ್ ಟಿಕೆಟ್ ಬುಕ್ಕಿಂಗ್ ಸೇವಾ ಕೌಂಟರುಗಳನ್ನು ಎಲ್ಲ ರೈಲ್ವೆ ವಲಯಗಳಿಗೆ ವಿಸ್ತರಿಸಿಲಾಗುವುದು. ಈ ರೀತಿಯ ಕೌಂಟರುಗಳು ಸಾವಿರಾರು ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲಿವೆ ಎಂದು ಆಶಾವಾದ ವ್ಯಕ್ತಪಡಿಸಿದರು.
|