ವಿತ್ತ ಸಚಿವ ಪಳನಿಯಪ್ಪನ್ ಚಿದಂಬರಂ ಕೇಂದ್ರ ಸರಕಾರದ 2008-09ರ ಸಾಲಿನ ಮುಂಗಡ ಪತ್ರ ಮಂಡಿಸಿದ್ದು ಚುನಾವಣೆ ಕೇಂದ್ರೀಕೃತವಾಗಿರುವ ಜನಪ್ರಿಯ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಮತ್ತು ಕೃಷಿಯತ್ತ ಆದ್ಯ ಗಮನ ಹರಿಸಿದ್ದು, ರೈತರ ಕೃಷಿಸಾಲದ ಸಂಪೂರ್ಣ ಮನ್ನಾ ಘೋಷಿಸಲಾಗಿದೆ.
ಸತತವಾಗಿ ಐದನೆ ಬಾರಿಗೆ ರಾಷ್ಟ್ರೀಯ ಬಜೆಟ್ ಮಂಡಿಸಲು ಅವಕಾಶ ನೀಡಿದ್ದಕ್ಕೆ ಯುಪಿಎ ಸರಕಾರಕ್ಕೆ ಧನ್ಯವಾದ ಅರ್ಪಿಸುತ್ತಲೇ ತನ್ನ ಬಜೆಟ್ ಭಾಷಣ ಆರಂಭಿಸಿದ ಹಣಕಾಸು ಸಚಿವ ಚಿದಂಬರಂ, ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜತೆ ತಾವು ಹಂಚಿಕೊಂಡ ಅಪರೂಪದ ಗೌರವ ಎಂದು ಬಣ್ಣಿಸಿದರು.
ಆರ್ಥಿಕತೆಯು ಶೇ.8.7ರಷ್ಟು ಬೆಳವಣಿಗೆ ಸಾಧಿಸುವುದೆಂದು ನಿರೀಕ್ಷಿಸಿರುವುದಾಗಿ ಹಿಂದಿನ ದಿನ ತಾವು ಮಂಡಿಸಿದ ಆರ್ಥಿಕ ಸಮೀಕ್ಷೆಯನ್ನು ಉಲ್ಲೇಖಿಸುತ್ತಾ ಅವರು ತಿಳಿಸಿದರು. ಹಣದುಬ್ಬರವನ್ನು ನಿಯಂತ್ರಣದಲ್ಲಿಡುವುದು ಸರ್ಕಾರದ ನೀತಿಯ ತಳಹದಿಯಾಗಿದ್ದು, ಸಮಗ್ರ ಬೆಳವಣಿಗೆಗೆ ಇನ್ನೂ ಹೆಚ್ಚು ಕ್ರಮ ಕೈಗೊಳ್ಳಲಾಗುವುದು ಎಂದು ನುಡಿದರು.
ಈ ವರ್ಷದ ಶಿಕ್ಷಣ ಬಜೆಟ್ನಲ್ಲಿ 28,674ರಿಂದ 34,400 ಕೋಟಿ ರೂ.ಗೆ ಶೇ.20ರಷ್ಟು ಏರಿಕೆಯನ್ನು ಪ್ರಕಟಿಸಿದ ವಿತ್ತಸಚಿವರು, ರಾಷ್ಟ್ರಾದ್ಯಂತ ಐಐಟಿ ಮತ್ತು ಐಐಎಂಗಳನ್ನು ಸ್ಥಾಪಿಸುವುದಾಗಿ ಹೇಳಿದರು. ಆಂಧ್ರಪ್ರದೇಶ, ಬಿಹಾರ ಮತ್ತು ರಾಜಸ್ತಾನದಲ್ಲಿ ಮೂರು ಐಐಟಿಗಳ ಸ್ಥಾಪನೆಯನ್ನು ಚಿದಂಬರಂ ಪ್ರಕಟಿಸಿದರು. ರಾಷ್ಟ್ರೀಯ ಜ್ಞಾನ ಕೇಂದ್ರಗಳನ್ನು ಸ್ಥಾಪಿಸುವ ಪ್ರಸ್ತಾವನೆ ಮಾಡಿದ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ 100 ಕೋಟಿ ರೂ.ಗಳನ್ನು ಮಂಜೂರು ಮಾಡಿದರು.
ಸರ್ವ ಶಿಕ್ಷಣ ಅಭಿಯಾನಕ್ಕೆ 13,100 ಕೋಟಿ, ಮಧ್ಯಾಹ್ನದ ಬಿಸಿಯೂಟ ಯೋಜನೆಗೆ 8000 ಕೋಟಿ, ಪ್ರೌಢ ಶಿಕ್ಷಣ ಯೋಜನೆಗೆ 4554 ಕೋಟಿಯನ್ನು ಅವರು ಪ್ರಕಟಿಸಿದರು. ಗ್ರಾಮೀಣ ಶಿಕ್ಷಣಕ್ಕೆ ಹೆಚ್ಚು ಒತ್ತುನೀಡಿದ ಅವರು, ಹಿಂದುಳಿದ ಬ್ಲಾಕ್ಗಳಲ್ಲಿ 410 ಹೆಚ್ಚುವರಿ ಕಸ್ತೂರಬಾ ಗಾಂಧಿ ವಿದ್ಯಾಲಯಗಳ ಸ್ಥಾಪನೆಯನ್ನು ಪ್ರಕಟಿಸಿದರು.
ಸೇವಾ ಮತ್ತು ಉತ್ಪಾದನಾ ವಲಯದಲ್ಲಿ ಅನುಕ್ರಮವಾಗಿ ಶೇ10.7 ಮತ್ತು ಶೇ9.4ರ ಅಭಿವೃದ್ಧಿಯನ್ನು ಆಯವ್ಯಯಪತ್ರದಲ್ಲಿ ನಿರೀಕ್ಷಿಸಲಾಗಿದೆ. ಸಾಮಾಜಿಕ ವಲಯದ ಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಹೆಚ್ಚು ಒತ್ತು ನೀಡಲಾಗಿದ್ದು, ಯುಪಿಎ ಸರಕಾರ ಜನಪ್ರಿಯ ಯೋಜನೆಗಳ ಮೀಸಲು ನಿಧಿಗಳನ್ನು ಹೆಚ್ಚಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ8.7ರ ಅಭಿವೃದ್ಧಿಯನ್ನು ಬಿಂಬಿಸಲಾಗಿದೆ.
ಲೇವಾದೇವಿ ವ್ಯವಹಾರಸ್ಥರ ಬಿಗಿಮುಷ್ಠಿಯಿಂದ ಕೃಷಿಕರನ್ನು ಹೊರತರಲು ರೈತರಿಗೆ ಸಾಂಸ್ಥಿಕ ಸಾಲವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಲಾಗುವುದು ಎಂದು ನುಡಿದರು.
ಯುಪಿಎ ಸರಕಾರದ ಕೊನೆಯ ಬಜೆಟ್ ಮಂಡಿಸಿದ ಚಿದಂಬರಂ, ಒಟ್ಟಾರೆ ಯೋಜನೆಯಲ್ಲಿ ಶೇ38ರ ಹೆಚ್ಚಳ ಘೋಷಿಸಿದರು. ರಾಷ್ಟ್ರದಲ್ಲಿ ಆತಂಕ ಮೂಡಿಸಿರುವ ಹಣದುಬ್ಬರವನ್ನು ತಡೆಯಲಾಗುವುದು ಎಂದು ನುಡಿದ ಹಣಕಾಸು ಸಚಿವರು ಆಹಾರೋತ್ಪನ್ನದ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವುದಾಗಿ ಹೇಳಿದರು.
ಕೃಷಿವಲಯದಲ್ಲಿ ಶೇ.4ರ ದರದ ಅಭಿವೃದ್ಧಿ ಸಾಧಿಸಲು ಕಾರ್ಯೋನ್ಮುಖವಾಗುವುದಾಗಿ ಭರವಸೆ ನೀಡಿದ ಚಿದು, ಒಟ್ಟಾರೆ ಆಹಾರ ಉತ್ಪನ್ನವು 219.32 ದಶಲಕ್ಷ ಟನ್ನುಗಳಾಗಲಿವೆ ಮತ್ತು ಅಕ್ಕಿ ಉತ್ಪನ್ನವು 94.08 ದಶಲಕ್ಷ ಟನ್‌ಗಳಾಗಲಿವೆ ಎಂದು ತಿಳಿಸಿದರು.
|