ರೈತರಿಗೆ ಭರ್ಜರಿ ಸಾಲ ಮನ್ನಾ, ಯಾವುದೇ ವರ್ಗ ಭೇದವಿಲ್ಲದೆ ಎಲ್ಲರಿಗೂ ವರಮಾನ ತೆರಿಗೆ ರಿಯಾಯಿತಿಗಳು, ಕಾರ್ಪೊರೇಟ್ ವಲಯಕ್ಕೆ ಹೆಚ್ಚುವರಿ ಅನ್ನಿಸಬಹುದಾದ ಹೊರೆ ಇಲ್ಲದ ಬಜೆಟನ್ನು ಸ್ಥೂಲವಾಗಿ ವಿಶ್ಲೇಷಿಸಿದರೆ, ಇದರ ಹಿಂದೆ ಚುನಾವಣಾ ವಾಸನೆಯನ್ನು ಗ್ರಹಿಸಬಹುದಾಗಿದೆ.
ಈ ಜನಮರುಳು ಬಜೆಟನ್ನು ನೋಡಿದರೆ, ಈ ವರ್ಷಾಂತ್ಯದಲ್ಲಿ, ಬಹುಶಃ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಲ್ಲಿ ಲೋಕಸಭಾ ಚುನಾವಣೆಗಳು ನಡೆದೇ ನಡೆಯುತ್ತವೆ ಎಂಬ ಊಹಾಪೋಹಗಳಿಗೆ ಇದು ಕಿಡಿ ಹಚ್ಚಿದ್ದಂತೂ ಸತ್ಯ.
ರಾಜಕೀಯ ಪಕ್ಷಗಳಲ್ಲಿ, ಅದರಲ್ಲೂ ಆಡಳಿತಾರೂಢರ ಮನಸ್ಸಿನಲ್ಲಿ ಇಂಥದ್ದೊಂದು ಭಾವನೆ ಬರುವುದಕ್ಕೆ ಪ್ರಧಾನ ಕಾರಣವಾಗಿದ್ದು ಕೃಷಿ ಸಾಲ ಮನ್ನಾ ಮತ್ತು ಸಂಬಂಧಿತ ಪರಿಹಾರ ಯೋಜನೆಗಳ ಅನುಷ್ಠಾನಕ್ಕೆ ಈ ವರ್ಷದ ಜೂನ್ ತಿಂಗಳ ಗಡುವು ವಿಧಿಸಿಕೊಂಡಿರುವುದು.
ಇದನ್ನು ಯುಪಿಎ ಸರಕಾರವನ್ನು ಬೆಂಬಲಿಸುತ್ತಿರುವ ಲೋಕಸಭೆಯ ಸಿಪಿಐ ಸಂಸದೀಯ ಪಕ್ಷದ ನಾಯಕ ಗುರುದಾಸ್ ದಾಸಗುಪ್ತಾ ಬಣ್ಣಿಸಿದ್ದು ಹೇಗೆ ಗೊತ್ತೇ? "ಚುನಾವಣೆಯ ದಿನಾಂಕವೊಂದನ್ನು ಬಿಟ್ಟು ಬೇರೆಲ್ಲವನ್ನೂ ಘೋಷಿಸಲಾಗಿದೆ"!
ಬಜೆಟನ್ನು ಚುನಾವಣಾ ಪ್ರಣಾಳಿಕೆ ಎಂದೇ ಬಣ್ಣಿಸಿರುವ ಬಿಜೆಪಿ ಉಪಾಧ್ಯಕ್ಷ ಮುಖ್ತಾರ್ ಅಬ್ಬಾಸ್ ನಖ್ವಿ, ಚುನಾವಣೆಗಳು ಬಹಳ ಶೀಘ್ರವಾಗಿಯೇ ನಡೆಯಲಿವೆ ಎಂಬುದರ ಸ್ಪಷ್ಟ ಸೂಚನೆಯಿದು. ಬಜೆಟ್‌ನ ರೂಪವನ್ನು ಗಮನಿಸಿದರೆ, ಇದು ವಸ್ತುಶಃ ಮಧ್ಯಂತರ ಚುನಾವಣಾ ಘೋಷಣೆಯಂತಿದೆ ಎಂದಿದ್ದಾರೆ.
ಉದ್ಯಮಿ ಮತ್ತು ರಾಜ್ಯಸಭಾ ಸದಸ್ಯ ರಾಹುಲ್ ಬಜಾಜ್ ಅವರೂ ಈ ಹೇಳಿಕೆಯನ್ನು ಅನುಮೋದಿಸಿದ್ದಾರೆ. ಇದು ಶೀಘ್ರ ಚುನಾವಣೆಯ ಸ್ಪಷ್ಟ ಸೂಚನೆ ಎಂದಿದ್ದಾರವರು.
ಸಂಸತ್ತಿನ ಕೇಂದ್ರೀಯ ಸದನದಲ್ಲಿಯೂ ಬಜೆಟ್ ಮಂಡನೆಯಾದ ಬಳಿಕ ಕಾಂಗ್ರೆಸ್ ಸಂಸದರು ಪರಸ್ಪರರೊಂದಿಗೆ ಚುನಾವಣೆಯ ಸಾಧ್ಯತೆಯ ಬಗೆಗೇ ಚರ್ಚಿಸುತ್ತಿದ್ದರು. ಮಾತ್ರವಲ್ಲ, ಬೇರೆ ಪಕ್ಷಗಳ ಸಹೋದ್ಯೋಗಿಗಳೊಂದಿಗೆ ಯುದ್ಧಕ್ಕೆ ಸಿದ್ಧರಾಗಿರುವಂತೆ ನಗೆ ಚಟಾಕಿ ಹಾರಿಸುತ್ತಿದ್ದುದೂ ಕಂಡುಬಂತು.
ಆದರೆ ಸಿಪಿಐ ಸಂಸದ ಡಿ.ರಾಜಾ ಅವರಿಗೆ ಇಲ್ಲಿ ಯಾವುದೇ ಚುನಾವಣೆ ವಾಸನೆ ಕಂಡುಬರುತ್ತಿಲ್ಲ. ಇತ್ತ, ವಿತ್ತ ಸಚಿವ ಚಿದಂಬರಂ ಅವರು ಕೂಡ ಚುನಾವಣೆಗಳ ಬಗೆಗಿನ ವಾದವನ್ನು ತಳ್ಳಿ ಹಾಕುತ್ತಾರೆ. ಭಾರತದಲ್ಲಿ ಪ್ರತಿವರ್ಷವೂ ಚುನಾವಣೆಗಳು ನಡೆಯುತ್ತಿರುತ್ತವೆ, ಹಾಗಾಗಿ ಪ್ರತಿ ಬಾರಿಯೂ ಇದನ್ನು ಚುನಾವಣಾ ಬಜೆಟ್ ಎಂದೇ ಹೇಳಬಹುದು ಎಂದು ಛೇಡಿಸಿದ್ದಾರವರು.
"ಬಜೆಟ್ ಬಗ್ಗೆ ನಿಮಗೇನೂ ಹೇಳಲಾಗದಿದ್ದರೆ, ಆಗ ನೀವಿದನ್ನು ಚುನಾವಣಾ ಬಜೆಟ್ ಎಂದು ಕರೆಯುತ್ತೀರಿ" ಅಂತ ಅವರು ಪ್ರತಿ ಪಕ್ಷಗಳತ್ತ ಛೂಬಾಣ ಬಿಟ್ಟಿದ್ದಾರೆ.
ಓದುಗರೇ... ನಿಮಗೇನನ್ನಿಸುತ್ತದೆ? ಇಲ್ಲೇ ಕೆಳಗೆ ಅಭಿಪ್ರಾಯ ಮಂಡಿಸಿ...
|