ಕೇಂದ್ರ ಹಣಕಾಸು ಸಚಿವ ಪಿ.ಚಿದಂಬರಂ ಶುಕ್ರವಾರ ಮಂಡಿಸಿರುವ ಮುಂಗಡ ಪತ್ರದಲ್ಲಿ ರಕ್ಷಣಾ ಕ್ಷೇತ್ರಕ್ಕೆ ಶೇ.10ರ ಹೆಚ್ಚಳ ಮಾಡಲಾಗಿದೆ. ಹಿಂದೆಂದೂ ಕಾಣದಷ್ಟು ದೊಡ್ಡಮೊತ್ತದ ಅಂದರೆ ಒಂದು ಲಕ್ಷಕೋಟಿ ರೂಪಾಯಿಗಳಷ್ಟು ಹೆಚ್ಚು ವೆಚ್ಚಮಾಡಲು ರಕ್ಷಣಾ ಕ್ಷೇತ್ರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕಳೆದ ಸಾಲಿನ ಬಜೆಟ್‌ನಲ್ಲಿ 96,000 ಕೋಟಿ ರೂಪಾಯಿ ರಕ್ಷಣಾ ವಲಯಕ್ಕೆ ಒದಗಿಸಲಾಗಿದ್ದರೆ, ಈ ಸಲ 1,05,600 ಕೋಟಿ ರೂಪಾಯಿಗಳನ್ನು ಮೀಸಲಿಸಲಾಗಿದೆ. ಇದರಿಂದಾಗಿ ಸಶಸ್ತ್ರ ಪಡೆಗಳ ಆಧುನೀಕರಣಕ್ಕೆ ಯಾವುದೇ ಧಕ್ಕೆಯುಂಟಾಗದು.
ಕಳೆದ ವರ್ಷ ಮಂಜೂರಾದ ಒಟ್ಟು ಮೊತ್ತದಲ್ಲಿ 3,500 ಕೋಟಿ ರೂಪಾಯಿಗಳನ್ನು ವಿನಿಯೋಗ ಮಾಡಲಾಗಿಲ್ಲ. ಹೆಲಿಕಾಫ್ಟರ್ ಹಾಗೂ ಫಿರಂಗಿ ಖರೀದಿಯ ಎರಡು ಪ್ರಮುಖ ಒಪ್ಪಂದಗಳು ಮುಂದುವರಿಯದ ಕಾರಣ ಈ ಹಣ ಉಳಿಕೆಯಾಗಿದೆ.
ಇಷ್ಟು ದೊಡ್ಡ ಮೊತ್ತವನ್ನು ರಕ್ಷಣಾ ವಿಭಾಗಕ್ಕೆ ಮೀಸಲಾಗಿರಿಸಲಾಗಿದ್ದರೂ, ಪಾಕಿಸ್ತಾನ ಮತ್ತು ಚೀನಾಗಳಿಗೆ ಹೋಲಿಸಿದರೆ ಇದು ಸಣ್ಣ ಮೊತ್ತ. ಭಾರತದಲ್ಲಿ ರಕ್ಷಣಾ ವೆಚ್ಚ ಒಟ್ಟುರಾಷ್ಟ್ರೀಯ ಉತ್ಪನ್ನದ ಶೇಕಡಾ ಎರಡಕ್ಕಿಂತ ಕಡಿಮೆ ಇದೆ. ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಹಾಗೂ ಚೀನಗಳು ಅನುಕ್ರಮವಾಗಿ ಐದು ಹಾಗೂ ಏಳು ಶೇಕಡಾವಾಗಿದೆ.
ರಕ್ಷಣಾ ವಿಭಾಗಕ್ಕೆ ದೊಡ್ಡ ಮೊತ್ತದ ಮಂಜೂರಾತಿಗೆ ಸಂತಸ ವ್ಯಕ್ತಪಡಿಸಿರುವ ರಕ್ಷಣಾ ಸಚಿವ ಎ.ಕೆ.ಆಂಟನಿ, ಆಧುನೀಕರಣ ಕಾರ್ಯವು ಪೂರ್ಣ ಪ್ರಮಾಣದಲ್ಲಿ ಮುಂದುವರಿಯಲಿದೆ ಎಂದು ಹೇಳಿದ್ದಾರೆ.
|