ಕಳೆದ ರಾಜ್ಯ ಚುನಾವಣೆಯಲ್ಲಿ ಚಿತ್ರತಾರೆಗಳನ್ನು ಚುನಾವಣಾ ಪ್ರಚಾರಕ್ಕೆ ಕರೆತರುವ ಮೂಲಕ ಬಿಜೆಪಿ ಮತದಾರರನ್ನು ಒಲೈಸುವಲ್ಲಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾಗಿತ್ತು. ಮುಂಬರುವ ವಿಧಾನಸಭಾ ಚುನಾವಣೆಗೂ ಇದೇ ತಂತ್ರವನ್ನು ರೂಪಿಸಲು ರಾಜ್ಯ ಬಿಜೆಪಿ ಘಟಕ ನಿರ್ಧರಿಸಿದೆ.
ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ವಹಿಸಿರುವ ಅರುಣ್ ಜೇಟ್ಲಿ ಕಳೆದ ಚುನಾವಣೆಯಲ್ಲಿ ಈ ತಂತ್ರವನ್ನೇ ರೂಪಿಸಿಕೊಂಡು ಮೊದಲ ಬಾರಿಗೆ ದಕ್ಷಿಣ ಭಾರತದಲ್ಲಿ ಅಧಿಕಾರ ಸ್ಥಾಪಿಸಲು ಬಿಜೆಪಿಗೆ ಸಾಧ್ಯವಾಯಿತು. ಈ ನಿಟ್ಟಿನಲ್ಲಿ ಅನೇಕ ಚಿತ್ರ ತಾರೆಯನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ತೆರೆಮರೆಯಲ್ಲಿ ಸಾಗುತ್ತಲೇ ಇದೆ.
ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಚುನಾವಣಾ ರಂಗು ಏರುತ್ತಿದ್ದಂತೆ, ಚಿತ್ರರಂಗದ ಕನಸಿನ ಕನ್ಯೆಯಾಗಿರುವ ಹೇಮಮಾಲಿನಿ ಅವರನ್ನು ರಾಜ್ಯಕ್ಕೆ ಕರೆತರುವ ಕುರಿತು ರಾಜ್ಯ ಬಿಜೆಪಿ ಚಿಂತನೆ ನಡೆಸುತ್ತಿದೆ. ಅಲ್ಲದೆ, ಮಾಜಿ ಕ್ರಿಕೆಟ್ ಪಟು ನವಜೋತ್‌ಸಿಂಗ್ ಅವರನ್ನು ಕರೆತಂದು ಮತದಾರರನ್ನು ಸೆಳೆಯಲು ಪ್ರಯತ್ನಿಸಿದೆ.
ಈ ಹಿನ್ನೆಲೆಯಲ್ಲಿ ವಿಧಾನ ಪರಿಷತ್ ಸದಸ್ಯ, ಚಿತ್ರನಟ ಶ್ರೀನಾಥ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ, ಕಿರಿತೆರೆ ಹಾಗೂ ಹಿರಿತೆರೆ ತಾರೆಗಳನ್ನು ಪ್ರಚಾರದಲ್ಲಿ ತೊಡಗಿಸಿಕೊಳ್ಳಲು ಉದ್ದೇಶಿಸಿದೆ. ಈಗಾಗಲೇ ಶೃತಿ, ಸಾಯಿಕುಮಾರ್, ವಿನಯಾ ಪ್ರಸಾದ್, ಮದನ್‌ಪಟೇಲ್ ಸೇರಿದಂತೆ ಹಲವು ಚಿತ್ರ ನಟ ನಟಿಯರು ಬಿಜೆಪಿಯೊಂದಿಗೆ ತಮ್ಮನ್ನು ಗುರುತಿಸಿಕೊಂಡಿದ್ದಾರೆ. ಅಲ್ಲದೆ, ಹಿರಿಯ ಬಿಜೆಪಿ ನಾಯಕರನ್ನು ರಾಜ್ಯ ಚುನಾವಣಾ ಪ್ರಚಾರಕ್ಕೆ ಕರೆಸುವ ಬಗ್ಗೆಯೂ ರಾಜ್ಯ ಬಿಜೆಪಿ ಘಟಕ ತಯಾರಿ ನಡೆಸುತ್ತಿದೆ.
|