ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿಯವರ ಮೇಲೆ ವಿಶ್ವಾಸವಿಟ್ಟು ಕಾಂಗ್ರೆಸ್ ಪಕ್ಷವನ್ನು ಸೇರಿದ್ದೇನೆಂದು ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ್ ತಿಳಿಸಿದ್ದಾರೆ.
ಪಟ್ಟಣದ ಮಾಜಿ ಶಾಸಕ ಬಿ.ಎಸ್. ವೀರಭದ್ರಪ್ಪನವರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟಕೆಟ್ ಅಕಾಂಕ್ಷಿಯಾಗಿ ತಾನು ಕಾಂಗ್ರೆಸ್ ಸೇರಿಲ್ಲ. ಕ್ಷೇತ್ರ ಪುನರ್ ವಿಂಗಡಣೆಯಲ್ಲಿ ಅನೇಕ ಬದಲಾವಣೆಗಳು ಆಗಿವೆ. ಇದರಿಂದ ವಿವಾದಗಳೂ ಎದ್ದಿವೆ. ಆದರೆ ತಾವು ಕಾಂಗ್ರೆಸ್ ಮೇಲಿನ ವಿಶ್ವಾಸದಿಂದಾಗಿ ಪಕ್ಷ ಸೇರಿದ್ದೇನೆ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷ ಸೂಚಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದ ಪ್ರಕಾಶ್, ಒಂದು ವೇಳೆ ಪಕ್ಷ ಸ್ಪರ್ಧಿಸುವುದು ಬೇಡ ಎಂದಲ್ಲಿ ಪಕ್ಷದ ಗೆಲುವಿಗಾಗಿ ಶ್ರಮಿಸುತ್ತೇನೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಯಾವ ಕಾರಣಕ್ಕೂ ಬೇರೆ ಪಕ್ಷಕ್ಕೆ ಪಕ್ಷಾಂತರಗೊಳ್ಳುವುದಿಲ್ಲ ಎಂದು ತಿಳಿಸಿದರು.
ಜೆಡಿಎಸ್ ಪಕ್ಷದಿಂದ ಹೊರಬಂದಿರುವ ಕುರುಗೋಡು ಮಾಜಿ ಶಾಸಕ ಸೂರ್ಯನಾರಾಯಣ ರೆಡ್ಡಿಯವರು ಕಾಂಗ್ರೆಸ್ ಪಕ್ಷಕ್ಕ ಬರಲಿದ್ದಾರೆ ಎಂದು ಪ್ರಕಾಶ್ ಈ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.
|