ಕಳ್ಳರು, ಸುಳ್ಳರು, ಕ್ರಿಮಿನಲ್‌ಗಳೆಲ್ಲಾ ಕರ್ನಾಟಕದ ಮತ ಮಹಾ ಸಮರದಲ್ಲಿ ಕಣಕ್ಕಿಳಿದಿದ್ದಾರೆ ಎಂಬ ಆರೋಪಗಳಿಗೆ ಪುಷ್ಟಿ ದೊರೆತಿದ್ದು, ಮೇ 10ರಂದು ಚುನಾವಣೆ ನಡೆಯಲಿರುವ 89 ಕ್ಷೇತ್ರಗಳಲ್ಲಿ ಒಟ್ಟು 47 ಮಂದಿ ಕ್ರಿಮಿನಲ್ ದಾಖಲೆಗಳಿರುವ ಅಭ್ಯರ್ಥಿಗಳು ಮತ ಬೇಟೆಗೆ ಹೊರಟಿದ್ದಾರೆ ಎಂಬುದು ಬಯಲಾಗಿದೆ.
ಚುನಾವಣೆಗಳು ಬಂದಾಗ ಮಾತ್ರವೇ ರಾಜಕಾರಣಿಗಳ ಕಣ್ಣಿಗೆ 'ಪ್ರಭು'ವಿನಂತೆ ಕಾಣುವ ರಾಜ್ಯದ ಮತದಾರ ಇವರಲ್ಲಿ ಯಾರನ್ನು ಆರಿಸಿ ಕಳುಹಿಸುತ್ತಾನೆ ಎಂಬುದು ಕಾದು ನೋಡಬೇಕು.
ಈ 47 ಕ್ರಿಮಿನಲ್ ಪೂರ್ವೇತಿಹಾಸವಿರುವ ಅಭ್ಯರ್ಥಿಗಳಲ್ಲಿ ಜೆಡಿಎಸ್ ಪಾಲು 13, ಬಿಜೆಪಿಯ ಪಾಲು 12, ಕಾಂಗ್ರೆಸ್ 10, ತೀರಾ ಇತ್ತೀಚೆಗೆ ಕರ್ನಾಟಕಕ್ಕೆ ಬಂದ ಉತ್ತರ ಪ್ರದೇಶದ ಬಿಎಸ್ಪಿ ಪಕ್ಷದಿಂದ 9, ಜೆಡಿಯು ಮತ್ತು ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ತಲಾ ಒಬ್ಬೊಬ್ಬ ಅಭ್ಯರ್ಥಿಗಳು ತಮ್ಮ 'ಬಲ' ಪರೀಕ್ಷೆಗೆ ಹೊರಟಿರುವುದಾಗಿ ಸರಕಾರೇತರ ಸಂಘಟನೆ ಪ್ರಜಾಸತ್ತಾತ್ಮಕ ಸುಧಾರಣಾ ಒಕ್ಕೂಟ (ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್) ಹೇಳಿದೆ.
ಈ ಅಭ್ಯರ್ಥಿಗಳ ಮೇಲಿರುವ ಕ್ರಿಮಿನಲ್ ಪ್ರಕರಣಗಳಲ್ಲಿ ಹಿಂಸಾಚಾರ, ಹಲ್ಲೆ, ಕ್ರಿಮಿನಲ್ ವಿಶ್ವಾಸ ದ್ರೋಹ ಮುಂತಾದವು ಸೇರಿವೆ. ಪ್ರಮುಖ ರಾಜಕೀಯ ಪಕ್ಷಗಳ ಕನಿಷ್ಠ ಎಂಟು ಅಭ್ಯರ್ಥಿಗಳು ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳನ್ನು ಎದುರಿಸಿದವರು ಎಂದಿದ್ದಾರೆ ಎನ್‌ಜಿಒ ಸಂಘಟನೆಯ ಅಧ್ಯಕ್ಷ ತ್ರಿಲೋಚನ ಶಾಸ್ತ್ರಿ.
ಆದರೂ, 2004ಕ್ಕೆ ಹೋಲಿಸಿದರೆ ಕ್ರಿಮಿನಲ್ ಹಿನ್ನೆಲೆಯಿರುವ ಅಭ್ಯರ್ಥಿಗಳ ಸಂಖ್ಯೆ ಕುಸಿದಿದೆಯಂತೆ. 2008ರಲ್ಲಿ ಬಿಜೆಪಿಯು 28 ಕ್ರಿಮಿನಲ್ ಪೂರ್ವೇತಿಹಾಸವಿರುವ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದರೆ, ಈ ಬಾರಿ ಕೇವಲ 12. ಕಾಂಗ್ರೆಸ್ (ಕಳೆದ ಬಾರಿಯ 12ರಿಂದ 10ಕ್ಕೆ ಇಳಿಕೆ) ಹಾಗೂ ಜೆಡಿಎಸ್ (ಕಳೆದ ಬಾರಿಯ 20ರಿಂದ 14ಕ್ಕೆ ಇಳಿಕೆ) ಕೂಡ ತಮ್ಮ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಗಳ ಸಂಖ್ಯೆಯನ್ನು ಕಡಿತಗೊಳಿಸಿವೆ.
ಪಕ್ಷಕ್ಕೆ ಭರ್ಜರಿ ನಿಧಿ ದೊರೆಯುತ್ತದೆಂಬ ಕಾರಣಕ್ಕೆ ಇಂಥವರಿಗೆ ಪಕ್ಷಗಳು ಟಿಕೆಟ್ ನೀಡಿದರೆ, ಅವರ 'ತೋಳ್ಬಲ'ದ ಭಯದಿಂದಾಗಿಯೇ ಜನರೂ ಅವರನ್ನು ಚುನಾಯಿಸಲೇಬೇಕಾಗುತ್ತದೆ ಎಂದು ಅಭಿಪ್ರಾಯಪಡುತ್ತಾರೆ ಶಾಸ್ತ್ರಿ.
ಈಗ ಚುನಾವಣಾ ಕಣದಲ್ಲಿರುವ ಹೆಚ್ಚಿನ ಅಭ್ಯರ್ಥಿಗಳು ರಿಯಲ್ ಎಸ್ಟೇಟ್, ಮದ್ಯ, ಗಣಿ ಮತ್ತಿತರ ದಂಧೆಗಳಲ್ಲಿ ತೊಡಗಿಸಿಕೊಂಡಿರುವವರು. 30 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಪಾಸ್ತಿ ಘೋಷಿಸಿರುವ ಕುಬೇರ ಅಭ್ಯರ್ಥಿಗಳ ಸಂಖ್ಯೆ 14. (ಕಾಂಗ್ರೆಸ್-7, ಬಿಜೆಪಿ-5, ಜೆಡಿಎಸ್-2).
5ರಿಂದ 30 ಕೋಟಿ ರೂ. ನಡುವೆ ಆಸ್ತಿಪಾಸ್ತಿ ಹೊಂದಿರುವ ಭಾಗಶಃ ಕುಬೇರರ ಸಂಖ್ಯೆಯಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಕಾಂಗ್ರೆಸ್ 21, ಜೆಡಿಎಸ್ 19, ಬಿಜೆಪಿ 14 ಹಾಗೂ ಬಿಎಸ್ಪಿ 9 ಅಭ್ಯರ್ಥಿಗಳಿದ್ದಾರೆ.
ಒಂದು ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆಸ್ತಿಪಾಸ್ತಿ ಘೋಷಿಸಿದ ಕುಚೇಲ ಅಭ್ಯರ್ಥಿಗಳ ಸಂಖ್ಯೆ ಹೀಗಿದೆ: ಸಮಾಜವಾದಿ ಪಕ್ಷ 12, ಬಿಎಸ್ಪಿ 11, ಜೆಡಿಯು 5, ಕಾಂಗ್ರೆಸ್ 2, ಜೆಡಿಎಸ್ 2 ಮತ್ತು ಬಿಜೆಪಿ 1.
2004ರ ಅಸೆಂಬ್ಲಿ ಚುನಾವಣೆ ಮತ್ತು ಈ ಬಾರಿಯ ಚುನಾವಣೆ ನಡುವಿನ ಅವಧಿಯಲ್ಲಿ 82 ಅಭ್ಯರ್ಥಿಗಳ ಒಟ್ಟು ಆಸ್ತಿಪಾಸ್ತಿ ಭರ್ಜರಿಯಾಗಿ, ರಾಕೆಟ್ ವೇಗದಲ್ಲಿ ಬೆಳೆದುಬಿಟ್ಟಿದೆ. ಸರಾಸರಿ ಆಸ್ತಿಯ ಸರಾಸರಿ ಬೆಳವಣಿಗೆಯ ಪ್ರಮಾಣ ಎಷ್ಟು ಗೊತ್ತೇ? ಉಸಿರು ಬಿಗಿ ಹಿಡಿದುಕೊಳ್ಳಿ... 677 ಶೇ.!
ಈ ಪ್ರಮಾಣದಲ್ಲಿ ಆಸ್ತಿ ಹೇಗೆ ಬೆಳೆಯಿತು ಎಂಬ ಕುರಿತು ತನಿಖೆಯ ಅಗತ್ಯವಿದೆ ಎಂದಿದ್ದಾರೆ ಶಾಸ್ತ್ರಿ.
ಇನ್ನು, ಎಲ್ಲಾ ರಾಜಕೀಯ ಪಕ್ಷಗಳೂ ಮಹಿಳಾ ಮೀಸಲಾತಿ ಅಂತ ಬೊಬ್ಬಿಡುತ್ತಿದ್ದಾವಲ್ಲ... ರಾಜ್ಯದಲ್ಲಿ ಒಟ್ಟಾರೆಯಾಗಿ ಕಣದಲ್ಲಿರುವ ಮಹಿಳೆಯರು ಎಷ್ಟು ಗೊತ್ತೇ? ಕೇವಲ 17 ಮಂದಿ ಮಾತ್ರ. ಮೊದಲ ಹಂತದ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 6 ಮಂದಿ, ಬಿಜೆಪಿಯಿಂದ ಐವರು, ಎಸ್ಪಿಯಿಂದ ಮೂವರು ಬಿಎಸ್ಪಿಯಿಂದ ಇಬ್ಬರು, ಜೆಡಿಎಸ್‌ನಿಂದ ಒಬ್ಬರು ಮಹಿಳೆ ಚುನಾವಣಾ ಕಣದಲ್ಲಿದ್ದಾರೆ. ಅಂದರೆ ಇದು ಶೇ.5ರಷ್ಟು.
|