ನಾಗೇಂದ್ರ ತ್ರಾಸಿ ಅಂಕ -1
(ಗಂಭೀರ ವದನರಾಗಿ 'ದಳ'ಪತಿಯ ರಂಗ ಪ್ರವೇಶ)
ಪ್ರಜಾಕೋಟಿಗೆ ನನ್ನ ಅನಂತ ಪ್ರಣಾಮಗಳು, ಈ ಹಿಂದೆಂದೂ ನನಗೆ ಇಂತಹ ಕಷ್ಟ ಒದಗಿ ಬಂದಿರಲಿಲ್ಲ, ಆದರೆ ನನ್ನ ಸಾಮ್ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದ್ದುದರಿಂದಲೇ ನಾನೀಗ ನಿಮ್ಮ ಮುಂದೆ ತಲೆಬಾಗಿ ನಿಂತಿದ್ದೇನೆ.
ಈವರೆಗೂ ನಡೆದ ಬೆಳವಣಿಗೆಯನ್ನು ಅರಿಯದ ಮುಗ್ದರು ನೀವಲ್ಲ. ಕಳೆದ ಬಾರಿ ನನ್ನ ಪುತ್ರರತ್ನನಾದ ಕುಮಾರ ನನ್ನ ವಿರೋಧಿ ಪಾಳಯದೊಂದಿಗೆ (ಕಮಲಮುಖಿ ಜೊತೆಗೆ) ಮಾಡಿಕೊಂಡ ಅಪವಿತ್ರ ಮೈತ್ರಿ ನನ್ನನ್ನು ತಲೆತಗ್ಗಿಸುವಂತೆ ಮಾಡಿತ್ತು.
'ಈ ರಾಜ್ಯದಲ್ಲಿ ನಾನು ಸಿಂಹಾಸನ ಏರುವ ಸಂದರ್ಭವನ್ನು ನನ್ನ ಮಾತೃಶ್ರೀಗೂ ಹಾಗೂ ಪತ್ನಿಗೂ ನೋಡಲಾಗಿರಲಿಲ್ಲ. ಪುತ್ರ ಕುಮಾರನ ಅಪವಿತ್ರ ಮೈತ್ರಿಯಿಂದ ಕುದ್ದುಹೋದ ನಾನು ಅವನ ಪಟ್ಟಾಭಿಷೇಕವನ್ನೂ ಕಣ್ತುಂಬಿಕೊಳ್ಳಲಾಗಿಲ್ಲ' ಎಂದು ಕಣ್ಣೀರುಗರೆಯುವರು...
ತಮ್ಮ ಹೆಗಲ ಮೇಲಿದ್ದ ಶಲ್ಯದಿಂದ ಕಣ್ಣೀರನ್ನು ಒರೆಸಿಕೊಂಡು, ಪ್ರಜಾಕೋಟಿಗೆ ಕೈಮುಗಿದು, 'ನನ್ನ ದರ್ಬಾರಿನ ಕಾಲದಿಂದಲೂ ತಾವು ನನ್ನ ಒಳಿತು-ಕೆಡುಗಳನ್ನು ಮನ್ನಿಸಿ, ಪ್ರಜಾಕೋಟಿ ಆಪಾದಿಸಿರುವ ವಚನಭಂಗ ಶಾಪದಿಂದ ಪುತ್ರನನ್ನು ವಿಮೋಚನೆಗೊಳಿಸಿ, ಮತ್ತೆ ಸಿಂಹಾಸನರೂಢನಾಗುವುದನ್ನು ನೋಡುವುದೇ ನನ್ನ ಅಂತಿಮ ಆಸೆ' ಎಂದು ಮತ್ತೆ ಕಣ್ಣೀರು ಸುರಿಸಿದಾಗ...
ಸಮೀಪದಲ್ಲೇ ನಿಂತಿದ್ದ ದಳಪತಿಯ ಪಕ್ಷ ಸೇವಕ ಮಹಾಸ್ವಾಮಿಗಳ ಕಿವಿಯಲ್ಲಿ ಮೆಲ್ಲನೆ, ನಮ್ಮ ಶತ್ರು ಪಾಳಯದವರು ನಮ್ಮ ಮೇಲೆ ದಾಳಿ ನಡೆಸಲು ಇತ್ತ ಕಡೆಯೇ ಬರುವುದಾಗಿ ಸಂದೇಶ ಬಂದಿದ್ದು, ತಾವು ಆದಷ್ಟು ಶೀಘ್ರ ಇಲ್ಲಿಂದ ತೆರಳುವುದು ಒಳ್ಳೆಯದು ಎಂಬುದಾಗಿ ಉಸುರಿದ. ಸರಿ ಹಾಗೇ ಆಗಲಿ ಎಂದು ತಮ್ಮ ಆಸ್ಥಾನ ಪಂಡಿತರರೊಂದಿಗೆ ನಿರ್ಗಮಿಸುವರು.
|