ಅಂಕ 3
(ಇತ್ತ ತಮ್ಮ ಸೈನ್ಯ ಬಲದೊಂದಿಗೆ ಕೋಪಾವಿಷ್ಟರಾಗಿಯೇ ಯದುವೀರಪ್ಪ ರಂಗಪ್ರವೇಶ ಮಾಡುವರು)
ಅಯ್ಯೋ ಇದೆಂತಹ ದುರ್ಗತಿ, ನಮ್ಮ ವಿರುದ್ಧ ಶತ್ರು ಪಾಳಯದವರು ಷಡ್ಯಂತ್ರ ರೂಪಿಸಿ, ಭೀಷ್ಮನನ್ನು ಮಣಿಸಲು ಶಿಖಂಡಿಯನ್ನು ಎದುರು ನಿಲ್ಲಿಸಿದಂತೆ, ನನ್ನ ಮಣಿಸಲು ಶತ್ರು ಪಾಳಯ ಒಗ್ಗಟ್ಟಾಗಿದೆ. ಅದನ್ನ ಮೆಟ್ಟಿ ಮುರಿಯಲು ನಮ್ಮ ಕಮಲಮುಖಿ ಸೈನ್ಯ ಸನ್ನದ್ಧವಾಗಿದೆ ಎಂದು ಅಬ್ಬರಿಸುತ್ತಾರೆ.
ವಚನಭ್ರಷ್ಟರಿಂದ ನಾವೇನೂ ಕಲಿಯಬೇಕಾಗಿಲ್ಲ, ರಾಮರಾಜ್ಯ ಸ್ಥಾಪನೆಯೇ ನಮ್ಮ ಗುರಿ, ಇದು ವಚನಭ್ರಷ್ಟ ಹಾಗೂ ವಂಶಪಾರಂಪರಿಕ ಆಳ್ವಿಕೆಯ ವಿರುದ್ಧದ ಧರ್ಮ ಯುದ್ಧವಾಗಿದೆ. ಬನ್ನಿ, ವಿರೋಧಿಪಾಳವನ್ನು ಬಗ್ಗು ಬಡಿಯೋಣ ಎಂದೆಲ್ಲಾ ಆವೇಶ ಭರಿತವಾಗಿ ಕೂಗಾಡುತ್ತಿರುವಂತೆಯೇ ಅತ್ತ ಕಡೆಯಿಂದ ಮತ್ತೊಂದು ದಂಡು ಬರುತ್ತಿರುವುದು ಕಾಣಿಸುತ್ತದೆ...
'ನಿಲ್ಲಿಸಿ ನಿಮ್ಮ ಪೌರುಷವನ್ನು, ರಾಮರಾಜ್ಯ ಸ್ಥಾಪನೆ ಎಂಬುದಾಗಿ ಬೊಗಳೆ ಬಿಡುತ್ತಾ ಸುಮ್ಮನೆ ಕಾಲಹರಣ ಮಾಡಬೇಡಿ' ಎಂಬ ಮಾತನ್ನು ಕೇಳಿ ಯದುವೀರಪ್ಪ ಆಘಾತಕ್ಕೊಳಗಾಗಿ, ಸಾವರಿಸಿಕೊಂಡು, ಕಣ್ಣು ಬಿಟ್ಟು ನೋಡುತ್ತಾರೆ. ಅರೇ.. ಇದು ತಮ್ಮ ಪಾಳಯದವರಲ್ಲವೇ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ... ಶಕ್ಕು ತುಕಡಿ, ಅನಂತ್ ದಂಡು, ಬಂಡುಕೋರರೆಲ್ಲ ಒಟ್ಟುಗೂಡಿ ದಂಡೆತ್ತಿ ಬಂದಿದ್ದರು. ಮತ್ತೆ ಕೋಪಾವಿಷ್ಟರಾದ ಯದುವೀರರು, ಸದಾ ಆನಂದವಾಗಿರುವ ಸೇನಾಪತಿಯನ್ನು ಉದ್ದೇಶಿಸಿ, ಏನಿದು ಅಪಚಾರ ಎಂದು ಕೇಳಲಾದಾಗ, ಏನಿಲ್ಲಾ ಮಹಾಪ್ರಭು, ಅವರನ್ನು ತಾವು ಗಣನೆಗೆ ತೆಗೆದುಕೊಳ್ಳಬೇಕಾದ ಅಗತ್ಯವಿಲ್ಲ, ನಮ್ಮ ಪಾಳಯ ಎಲ್ಲಾ ರೀತಿಯಿಂದಲೂ ಬಲಾಢ್ಯವಾಗಿದೆ ಎಂದು ಹೇಳುತ್ತಿರುವಾಗಲೇ, ಇಬ್ಬರ ನಡುವೆ ವಾಗ್ವಾದ ಪ್ರಾರಂಭವಾಗಿ, ಇಡೀ ಪ್ರದೇಶ ರಣರಂಗವಾಗುತ್ತದೆ.
ನಿಮ್ಮ ಸಾಮ್ರಾಜ್ಯವನ್ನು ಅಧಃಪತನಗೊಳಿಸುವುದೇ ನನ್ನ ಗುರಿ ಎಂದು ಶಪಥ ಹಾಕಿ ಒಂದು ತುಕಡಿಯ ಮುಖ್ಯಸ್ಥೆ ಶಕು ರಣರಂಗದಿಂದ ನಿರ್ಗಮಿಸುವರು. ಅಷ್ಟರಲ್ಲಿ ಓಡೋಡಿ ಬಂದ ಸೈನಿಕನೊಬ್ಬ, ಮಹಾಪ್ರಭುಗಳು ಮನ್ನಿಸಬೇಕು, ನಮ್ಮ ಸೈನ್ಯಕ್ಕೆ ಸೇರ್ಪಡೆಗೊಳ್ಳಲು ಜಮೀನು ಮಾಫಿಯಾ ಮತ್ತು ಗಣಿ ದಂಧೆಯ ದೊರೆಗಳೇ ಮುಂತಾದ ಅತಿರಥ-ಮಹಾರಥರು ಆಗಮಿಸುತ್ತಿದ್ದಾರೆ, ತಾವು ಅವರನ್ನು ಬರಮಾಡಿಕೊಳ್ಳುವಂತರಾಗಬೇಕು ಎಂದು ಒಂದೇ ಉಸುರಿನಲ್ಲಿ ಹೇಳಿದ್ದನ್ನು ಕೇಳಿ, ಪ್ರಸನ್ನ ಚಿತ್ತರಾದ ಯದುವೀರರು, ಹರೇ ರಾಮ್, ಹರೇ ರಾಮ್, ಜೈ ಬಜರಂಗ ಬಲಿ ಎಂಬ ಘೋಷ ವಾಕ್ಯದೊಂದಿಗೆ ಅತ್ತ ಕಡೆ ನಿರ್ಗಮಿಸುವರು...
ಅಂಕ-4
(ಇವೆಲ್ಲವನ್ನು ಮರೆಯಲ್ಲಿ ನಿಂತು ಕೇಳಿಸಿಕೊಳ್ಳುತ್ತಿದ್ದ ಸಣ್ಣಪುಟ್ಟ ಆನೆ ಪಕ್ಷ, ಸೈಕಲ್ ಪಕ್ಷ, ಕತ್ತಿ ಸುತ್ತಿಗೆ ನಕ್ಷತ್ರವಿರುವ ಪಕ್ಷಗಳು ರಂಗದಲ್ಲಿ ಮುಖಾಮುಖಿಯಾಗುವರು)
ಇಲ್ಲಾ, ನಾವು ಈ ಅಧರ್ಮ ಪಾಲಕರು ಸಿಂಹಾಸನ ರೂಢರಾಗುವುದನ್ನು ತಡೆಯಲೇಬೇಕು ಎಂದು ಸಣ್ಣಪುಟ್ಟ ತುಂಡರಸರು ಒಟ್ಟಾಗಿ ಅವರನ್ನು ಮಣಿಸುವ ಮಾತನ್ನು ಆಡುತ್ತಿರುವಾಗಲೇ, ಏಯ್ ನಿಲ್ಲಿ, ಇದಕ್ಕೆ ಯಾರ ಅಗತ್ಯವೂ ಇಲ್ಲ, ನಮ್ಮ ಸೈನ್ಯ ಅಷ್ಟು ದುರ್ಬಲವಾಗಿಲ್ಲ. ನಾವು ಪ್ರತ್ಯೇಕವಾಗಿಯೇ ಅಧರ್ಮೀಯರ ಸಾಮ್ರಾಜ್ಯವನ್ನು ಬಗ್ಗು ಬಡಿಯುತ್ತೇವೆ ಎಂದು ಹಿಂದೆ ದಳಪತಿಯಾಗಿದ್ದ, ಈಗ ಆನೆ ಮೇಲೇರಿರುವ ಸಿಂಧ್ಯಾ ಘೋಷಿಸುತ್ತಾರೆ. ಇದನ್ನು ಕೇಳಿದ ಉಳಿದ ಸಾಮಂತ ಅರಸರು, ಸರಿ, ನಮ್ಮೆಲ್ಲರ ಮಾರ್ಗ ಬೇರೆ, ಬೇರೆಯಾದರು ಗುರಿ ಒಂದೇ , ನಮ್ಮ ನಮ್ಮ ಶಕ್ತ್ಯಾನುಸಾರ ರಣರಂಗದಲ್ಲಿ ಹೋರಾಡುವ ಎಂದು ರಂಗದಿಂದ ನಿರ್ಗಮಿಸುವರು...
|