ಚಂದ್ರಾವತಿ ಬಡ್ಡಡ್ಕ ಈ ಚುನಾವಣೆಯಲ್ಲಿ ಯಾವುದಾದರು ಒಂದು ಪಕ್ಷ ಇಡಿಯಾಗಿ ಗೆದ್ದರೆ ಸಾಕಪ್ಪೋ ಸಾಕು ಎಂಬುದು ಹೆಚ್ಚಿನೆಲ್ಲರ ಆಕಾಂಕ್ಷೆಯಾಗಿತ್ತು. ರಾಜ್ಯದಲ್ಲಿನ ಕುತಂತ್ರ ರಾಜಕಾರಣ ವಾಕರಿಕೆ ತರಿಸಿದ್ದು, ಅದೋ-ಇದೋ, ಯಾವುದಾದರೂ ಒಂದೇ ಪಕ್ಷಕ್ಕೆ ಬಹುಮತ ದೊರೆಯಲಿ ಎಂಬ ಪರಿಸ್ಥಿತಿ ಕರ್ನಾಟಕದಲ್ಲಿ ನಿರ್ಮಾಣವಾಗಿತ್ತು.
ಹದಿಮೂರನೆಯ ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶದ ಬಳಿಕದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸ್ಪಷ್ಟಬಹುಮತಕ್ಕೆ ಮೂರು ಸೀಟುಗಳು ಕಡಿಮೆಯಾದರೂ, ಅಮ್ಮಬ್ಬಾ ಎಂಬಂತೆ ಅಂಚಿನಲ್ಲಿ ಬಂದು ನಿಂತಿರುವ ಇದಕ್ಕಿನ್ನು, ಬಹುಮತಕ್ಕೆ ಬೇಕಿರುವ ಮೂರು ಸಂಖ್ಯೆ ಹೊಂಚಿಕೊಳ್ಳುವುದು ಕಷ್ಟವೇನಲ್ಲ. ದಕ್ಷಿಣ ಭಾರತದಲ್ಲಿ ಪ್ರಥಮ ಬಾರಿಗೆ ಸ್ವಂತ ಸಾಮರ್ಥ್ಯದ ಮೇಲೆ ಗೆದ್ದ ಬಿಜೆಪಿ, ಯುಡಿಯೂರಪ್ಪರ ದ್ವಿತೀಯ ಬಾರಿಯ ಪಟ್ಟಾಭಿಷೇಕಕ್ಕೆ ತಯ್ಯಾರಿ ನಡೆಸಿದೆ.
ಈ ಬಾರಿಯ ಫಲಿತಾಂಶಗಳನ್ನು ಗಮನಿಸಿದರೆ, ಮತದಾರ ಬುದ್ಧಿವಂತಿಕೆ ಮೆರೆದಿದ್ದಾನೆ ಎಂಬುದು ಸ್ಪಷ್ಟ. ಘಟಾನುಘಟಿ ರಾಜಕಾರಣಿಗಳೆಲ್ಲ ಮಣ್ಣುಮುಕ್ಕಿದ್ದಾರೆ. ಅಂತೆಯ ಥಳುಕು-ಬಳುಕಿಗೂ ಮಣೆಹಾಕಿಲ್ಲ. ಗಿನ್ನೆಸ್ ದಾಖಲೆ ಬರೆಯಹೊರಟ ಧರಂ ಸಿಂಗರ ದಾಖಲೆ ಹುಮ್ಮಸ್ಸು ಗುಳುಂ ಆಗುವಂತೆ ಮಾಡಿದ್ದಾನೆ. ಕನ್ನಡದ ಹೆಸರು ಹೇಳುತ್ತಾ, ಕತ್ತೆಯ ಮೇಲೆ ಸವಾರಿ ಮಾಡುತ್ತಾ ಜಾಗಟೆ ಬಡಿಯುತ್ತಿದ್ದ ವಾಟಾಳ್ ನಾಗರಾಜ್ ಕ್ಷೇತ್ರದ ಜನತೆ, ವಾಟಾಳ್ ಅವರು ಠೇವಣಿ ಕಳೆದುಕೊಳ್ಳುವಂತೆ ಮಾಡಿದ್ದು, ಮತದಾರರು 'ಕತ್ತೆ'ಗಳಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಶಿಕಾರಿಪುರ ಚುನಾವಣೆ ಘೋಷಣೆಯಾಗುತ್ತಲೇ ರಾಷ್ಟ್ರದ ಗಮನಸೆಳೆದದ್ದು ಶಿಕಾರಿಪುರ ಕ್ಷೇತ್ರ. ಇಬ್ಬರು ಮಾಜಿ ಮುಖ್ಯಮಂತ್ರಿಗಳು ಕಣಕ್ಕಳಿದಿದ್ದು ಮದ್ದಾನೆಗಳ ಹೋರಾಟ, ಕೆಲವರಲ್ಲಿ ಅತೀವ ಕುತೂಹಲ, ಮತ್ತೆ ಕೆಲವರಲ್ಲಿ ಕಳವಳ, ಇನ್ನೂ ಕೆಲವರಲ್ಲಿ ಆತಂಕ ಮೂಡಿಸಿತ್ತು. ಯಡಿಯೂರಪ್ಪರನ್ನು ಶತಾಯ ಗತಾಯ ಸೋಲಿಸಲೇಬೇಕೆಂದು ಹರಕೆ ಹೊತ್ತವರಂತೆ, ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿರಲೇ ಇಲ್ಲ. ಸಮಾಜವಾದಿ ಪಕ್ಷದಿಂದ ಸ್ಫರ್ಧಿಸಿದ್ದ ಬಂಗಾರಪ್ಪ ಈ ಹಿಂದೆ ಯಾವಾಗಲೋ ಮಾಡಿದ್ದ ಉಪಕಾರವನ್ನು ಸ್ಮರಿಸಿಕೊಂಡ ದೇವೇಗೌಡರು, ಯಡಿಯೂರಪ್ಪರನ್ನು ಸೋಲಿಸಲು ತನ್ನ ಪಕ್ಷದ ಅಭ್ಯರ್ಥಿಯನ್ನು ಕಣಕ್ಕಿಳಿಸಲಿಲ್ಲ ಎಂಬ ಹೇಳಿಕೆ ನೀಡಿದ್ದರು. ಏತನ್ಮಧ್ಯೆ, ಪಕ್ಷದೊಳಗಿನ ವಿರೋಧಿಗಳೂ ಯಡಿಯೂರಪ್ಪ ಸೋಲಬೇಕೆಂದು ಒಳಗಿಂದೊಳಗೆ ಹುಳಹುಳ ಅಂದದ್ದೂ ಸುಳ್ಳಲ್ಲ. ಇದನ್ನೇ ಪ್ರತಿಷ್ಠೆ ವಿಷಯವಾಗಿ ತೆಗೆದುಕೊಂಡ ಯಡಿಯೂರಪ್ಪ, ಮತದಾರ 'ದೇವರ' ಮೇಲೆ ಭಾರ ಹಾಕಿ ಪ್ರಚಾರಕ್ಕಿಳಿದಿದ್ದರು.
ತನ್ನ ಸ್ವಂತ ಕ್ಷೇತ್ರ ಸೊರಬವನ್ನು ಬಿಟ್ಟು ಶಿಕಾರಿಪುರಕ್ಕೆ ಓವರ್‌ಕಾನ್ಫಿಡೆನ್ಸಿನೊಂದಿಗೆ ತೆರಳಿದ್ದ ಬಂಗಾರಪ್ಪ 45,750 ಮತಗಳಿಂದ ಸೋತರು. ನೀವು ಒಬ್ಬ "ಮುಖ್ಯಮಂತ್ರಿ ಅಭ್ಯರ್ಥಿಗೆ ಮತಹಾಕುತ್ತೀರಿ" ಎಂಬುದಾಗಿ ಮತದಾರರ ಬಳಿ ಬೇಡಿಕೊಂಡ ಯಡಿಯೂರಪ್ಪರ ತಂತ್ರ ಫಲಿಸಿತು. ಗೆದ್ದರು.
ಕುಟುಂಬ ರಾಜಕೀಯಕ್ಕೆ ಮಣೆ ಇಲ್ಲ! "ನಾನಿಲ್ಲದೆ ಅದ್ಯಾರು ಸರಕಾರ ರಚಿಸುತ್ತಾರೋ ನೋಡ್ತೀನಿ" ಎಂದು ಮತದಾರರು ಯಾವಾಗಲೂ ಹುಂಬರು ಎಂಬಂತೆ ಸಡಿಲ ಮಾತುಗಳನ್ನು ಆಡಿದ್ದ ದೇವೇಗೌಡರೀಗ ಗಾಯ ನೆಕ್ಕಿಕೊಳ್ಳಬೇಕಾಗಿದೆ. ಈ ಚುನಾವಣೆಯಲ್ಲಿ ಅತ್ಯಂತ ಹೀನಾಯ ಸೋಲು ವಿದಳಗೊಂಡ ಜನತಾದಳದ್ದು. ಕಳೆದ ಬಾರಿ 58 ಸ್ಥಾನಗಳಲ್ಲಿ ಗೆಲ್ಲಿಸಿದ್ದ ಮತದಾರನಿಗೆ ಅವಮಾನಿಸಿದ ಜೆಡಿಎಸ್‌ಗೆ ಶಾಸ್ತಿಯಾಗಿದೆ. ಅದು ಗೆದ್ದಿದ್ದು ಬರಿಯ 28 ಸ್ಥಾನಗಳು ಮಾತ್ರ. ಜನತೆಗೆ ಉತ್ತಮ ಕಾರ್ಯ ನೀಡಲು ಮುತುವರ್ಜಿ ವಹಿಸಿದ್ದ, ಅಭಿವೃದ್ದಿ ರಾಜಕಾರಣಕ್ಕೆ ಹೊರಟಿದ್ದ ಕುಮಾರಸ್ವಾಮಿಗೂ ಮೂಗುದಾರ ತೊಡಿಸಿದ್ದ ದೇವೇಗೌಡರ ಕುಟುಂಬ ರಾಜಕಾರಣ ಚಿಂದಿ.
ಅಂತೆಯೇ ಬಂಗಾರಪ್ಪರ ಕುಟುಂಬ ರಾಜಕೀಯವೂ ಪುಡಿಪುಡಿ. ತನ್ನ ಮಗನ ವಿರುದ್ಧವೇ ಇನ್ನೊಬ್ಬ ಮಗನನ್ನು ಎತ್ತಿ ಕಟ್ಟಿದ್ದ ಬಂಗಾರಪ್ಪ, ತಾನೂ ಸೋತು, ತನ್ನ ಮಕ್ಕಳನ್ನು ಸೋಲಿಸುವಲ್ಲಿ ಗೆದ್ದಿದ್ದಾರೆ.
|