ನಕ್ಸಲರ ಅಟ್ಟಹಾಸ: ಕುದುರೆಮುಖ, ಉಡುಪಿ, ಶೃಂಗೇರಿ ಅಭಯಾರಣ್ಯಗಳಲ್ಲಿ ತಳವೂರಿದ್ದ ನಕ್ಸಲೀಯರು, ಸಾಕೇತ್ ರಾಜನ್,ಶಿವಲಿಂಗು, ಹಾಜೀಮಾ ಹತ್ಯೆಯ ಬಳಿಕ ಸ್ವಲ್ಪ ತಟಸ್ಥವಾಗಿದ್ದರು. ಆಗಾಗ ಪಶ್ಚಿಮಘಟ್ಟಗಳಲ್ಲಿ ತಮ್ಮ ಅಟ್ಟಹಾಸ ಮೆರೆಯುತ್ತಿದ್ದ ನಕ್ಸಲ್ ತಂಡದ ವಿರುದ್ಧ ಪೊಲೀಸ್ ಪಡೆ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿತ್ತು. ಆದರೆ ಮೇ.16ರಂದು ಸೋಮೇಶ್ವರ ಸಮೀಪದ ಹೆಬ್ರಿಯ ಶಿಕ್ಷಕ ಭೋಜ ಶೆಟ್ಟಿ ಹಾಗೂ ಸುರೇಶ್ ಶೆಟ್ಟಿ ಎಂಬಿಬ್ಬರು ನಕ್ಸಲ್‌ರ ಗುಂಡಿಗೆ ಬಲಿಯಾಗುವ ಮೂಲಕ, ಮತ್ತೆ ನಕ್ಸಲ್ ರಕ್ತದಾಹದ ಬಗ್ಗೆ ಪಶ್ಚಿಮಘಟ್ಟ ಬೆಚ್ಚಿಬಿದ್ದಿತ್ತು. ತದನಂತರ ನಕ್ಸಲ್ ಚಟುವಟಿಕೆ ಮತ್ತೆ ತಣ್ಣಗಾದಂತೆ ಕಂಡು ಬಂದಿದ್ದರೂ ಕೂಡ, ಪಶ್ಚಿಮಘಟ್ಟದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯನ್ನು ಬಂಧಿಸಲಾಗಿತ್ತು, ಎನ್‌ಕೌಂಟರ್ ಮಾಡಲಾಯಿತು ಎಂಬ ವದಂತಿಗಳು ಹಬ್ಬಿದ್ದವು. ಆದರೆ ಸ್ವತಃ ಬಿಜಿಕೆಯೇ ಹೇಳಿಕೆ ನೀಡಿದ ನಂತರ ಊಹಾಪೋಹಗಳಿಗೆ ತೆರೆಬಿದ್ದಿತ್ತು. ಹಾಗೆ ಶೃಂಗೇರಿಯ ಬಿಜೆಪಿ ಪ್ರಮುಖ ನಾಯಕರೊಬ್ಬರು ಸೇರಿದಂತೆ ಎಂಟು ಮಂದಿಯನ್ನು ನಕ್ಸಲ್ ತಂಡವೊಂದು ರಹಸ್ಯವಾಗಿ ಮಾತುಕತೆ ನಡೆಸಿ,ಅವರನ್ನು ಸುರಕ್ಷಿತವಾಗಿ ಬಿಟ್ಟಿತ್ತು. ಇದು ಪೊಲೀಸ್ ಇಲಾಖೆಗೆ ತಲೆನೋವು ತಂದ ವಿಚಾರವಾಗಿತ್ತು. ಕೂಡಲೇ ರಹಸ್ಯವಾಗಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿದ ಪೊಲೀಸ್ ಪಡೆ ಹೊರನಾಡಿನ ಮಾವಿನಹೊಲದ ಬಳಿ ನಕ್ಸಲರು ಹಾಗೂ ಪೊಲೀಸ್ ಗುಂಡಿನ ಕಾಳಗದಲ್ಲಿ ಮೂವರು ನಕ್ಸಲೀಯರು, ಓರ್ವ ಪೊಲೀಸ್ ಕಾನ್‌ಸ್ಟೇಬಲ್ ಬಲಿಯಾಗಿದ್ದರು.ಇವೆಲ್ಲ ಘಟನೆ ನಡೆಯುತ್ತಿದ್ದಂತೆಯೇ ಕುಂದಾಪುರ ತಾಲೂಕಿನ ಹಳ್ಳಿಹೊಳೆಯಲ್ಲಿ ಭೂಮಾಲೀಕ ಕೇಶವ ಯಡಿಯಾಳರನ್ನು ಮರಕ್ಕೆ ಕಟ್ಟಿಹಾಕಿ ಗುಂಡು ಹಾರಿಸಿ ಹತ್ಯೆಗೈಯುವ ಮೂಲಕ ನಕ್ಸಲೀಯರ ಅಟ್ಟಹಾಸ ಮುಂದುವರಿಯುವ ಮುನ್ಸೂಚನೆ ನೀಡುವ ಮೂಲಕ, ಪಶ್ಚಿಮಘಟ್ಟದ ಜನರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ. ಕಳ್ಳಭಟ್ಟಿ ದುರಂತ: ಸಾರಾಯಿ ನಿಷೇಧ ಮಾಡುವ ಮೂಲಕ ತಮ್ಮ ಸರಕಾರ ಘನಂದಾರಿ ಕೆಲಸ ಮಾಡಿದೆ ಎಂದು ಬೆನ್ನು ತಟ್ಟಿಕೊಳ್ಳುತ್ತಿರುವಾಗಲೇ, ಬಿಜೆಪಿ ಸರಕಾರಕ್ಕೆ ತ್ಸುನಾಮಿಯಂತೆ ಬಂದರೆಗಿದ್ದು, ಕಳ್ಳಭಟ್ಟಿ ದುರಂತ. ಬೆಂಗಳೂರಿನ ಆನೇಕಲ್, ನೆರೆಯ ಧರ್ಮಪುರಿ, ಕೃಷ್ಣಗಿರಿ ಸೇರಿದಂತೆ ಕೆಲವೆಡೆ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 170ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು, ಆ ನಂತರ ನಡೆದು ಕೇವಲ ರಾಜಕೀಯ ಕೆಸರೆಚಾಟ. ಇದು ಮುಖ್ಯಮಂತ್ರಿಯ ವಿರುದ್ದ ವಿರೋಧ ಪಕ್ಷಗಳು ನಡೆಸಿದ ಸಂಚು ಎಂಬುದಾಗಿ ಯಡಿಯೂರಪ್ಪ ಅವರು ತಿಪ್ಪೆ ಸಾರಿದರು. 1981ರಲ್ಲಿ ದೇವರಜೀವನಹಳ್ಳಿಯಲ್ಲಿ ಸಂಭವಿಸಿದ ಕಳ್ಳಭಟ್ಟಿ ದುರಂತದಲ್ಲಿ 323ಮಂದಿ ಬಲಿಯಾಗಿದ್ದರು, ಆಗ ದುರಂತದ ಕುರಿತು ನ್ಯಾಯಾಂಗ ತನಿಖೆ ನಡೆಸಿದ ನ್ಯಾ.ಆರ್.ಜಿ.ದೇಸಾಯಿ, ಅವರು ಮಾರಿಮುತ್ತು ಮತ್ತು ಅಮೀರ್ ಸುಲ್ತಾನ್ ಎಂಬಿಬ್ಬರೇ ಕಾರಣ ಎಂದು ವರದಿ ಸಲ್ಲಿಸಿದ್ದರು. ಆದರೆ ಅವರಿಬ್ಬರ ವಿರುದ್ಧದ ಆರೋಪ ಸಾಬೀತಾಗಿಲ್ಲ. ಆದರೆ ಇಂತಹ ಖದೀಮರ ಅಟ್ಟಹಾಸದಿಂದ ಜನಸಾಮಾನ್ಯರ ಬದುಕು ಚಿಂದಿಯಾಗುತ್ತಿದ್ದರೂ, ಆರೋಪಿಗಳು ಮಾತ್ರ ಕಾನೂನಿನ ಸಂಕೋಲೆಯಿಂದ ತಪ್ಪಿಸಿಕೊಳ್ಳುತ್ತಿರುವುದು ಮತ್ತೊಂದು ದೊಡ್ಡ ದುರಂತ ! ಬೆಂಗಳೂರು ಸರಣಿ ಸ್ಫೋಟ: ಉದ್ಯಾನನಗರಿ ನೆಮ್ಮದಿ ಜೀವನಕ್ಕೆ ಪ್ರಸಕ್ತ ತಾಣ ಎಂದೇ ಜನರು ಭಾವಿಸಿದ್ದರು, ಆದರೆ ಯಾವತ್ತು ಐಐಎಎಸ್ಸಿ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸುವ ಮೂಲಕ ಓರ್ವ ವಿಜ್ಞಾನಿಯೂ ಬಲಿಯಾದರೋ ಆವಾಗ (ಇದಕ್ಕೂ ಮುನ್ನ ರಾಜೀವ್ ಗಾಂಧಿ ಹಂತಕರು ನಗರದ ಕೋಣನಕುಂಟೆಯಲ್ಲೇ ವಾಸ್ತವ್ಯ ಹೂಡಿದ್ದ ವಿಷಯವೇ ದೇಶವನ್ನು ಬೆಚ್ಚಿಬೀಳಿಸಿತ್ತು.) ರಾಜ್ಯದ ರಾಜಧಾನಿ ಉಗ್ರರ ಅಡಗುತಾಣವಾಗಿದೆ ಎಂಬ ಅಂಶ ಸ್ಪಷ್ಟವಾಗತೊಡಗಿತ್ತು. ಆದರೆ ಗುಪ್ತಚರ ಇಲಾಖೆಯ ವೈಫಲ್ಯ ಮತ್ತೊಮ್ಮೆ ಸಾಬೀತಾಗಿದ್ದು, ಜುಲೈ 25ರಂದು ಸರಣಿ ಬಾಂಬ್‌ಗಳು ಸ್ಫೋಟಿಸುವ (ಮಡಿವಾಳದಲ್ಲಿ 1.20ಕ್ಕೆ, ನಾಯಂಡನಹಳ್ಳಿಯಲ್ಲಿ 1.25, ಆಡುಗೋಡಿ-1.40ಕ್ಕೆ, ಕೋರಮಂಗಲ ಈಗಲ್ ಸ್ಟ್ರೀಟ್‌ನಲ್ಲಿ 2.10, ಮಲ್ಯ ಆಸ್ಪತ್ರೆ ಸಮೀಪ 2.25, ಲಾಂಗ್ ಫೋರ್ಡ್ ರಸ್ತೆ 2.35ಕ್ಕೆ ಸ್ಫೋಟ ಸಂಭವಿಸಿದ್ದವು.) ಮೂಲಕ ರಾಜ್ಯವೇ ತಲ್ಲಣಿಸಿಹೋಗಿತ್ತು. ಸ್ಫೋಟದಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ, ಹಲವಾರು ಮಂದಿ ಗಾಯಗೊಂಡಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸುಬ್ರಹ್ಮಣ್ಯ ನಗರ ಪೊಲೀಸರು 3ಮಂದಿ ಶಂಕಿತರನ್ನು ವಶಕ್ಕೆ ತೆಗೆದುಕೊಂಡಿದ್ದರು. ಸ್ಫೋಟಕ್ಕೆ ಬಳಸಿದ ರಾಸಾಯನಿಕ ಗ್ರೆನೇಡ್‌ಗೆ ಸಮನಾದದ್ದು ಎಂಬ ಅಂಶ ವಿಧಿವಿಜ್ಞಾನ ಪ್ರಯೋಗಾಲಯದ ವರದಿಯಿಂದ ದೃಢಪಟ್ಟಿತ್ತು. ಆದರೆ ಬೆಂಗಳೂರು ಸರಣಿ ಸ್ಫೋಟ ಪ್ರಕರಣದ ತನಿಖೆ ಮಾತ್ರ ಸಮಾಧಿ ಸೇರಿದ ಶವದಂತಾಗಿದೆ.....ಚರ್ಚ್ ಮೇಲೆ ದಾಳಿ: ಒರಿಸ್ಸಾದಲ್ಲಿ ಸಂಘ-ಪರಿವಾರ ಕ್ರೈಸ್ತ ಸಮುದಾಯದ ಮೇಲೆ ಹೊತ್ತಿಸಿದ ದ್ವೇಷಾಗ್ನಿ, ಕರ್ನಾಟಕದಲ್ಲೂ ಪ್ರತಿಧ್ವನಿಸುವ ಮೂಲಕ ಆಡಳಿತಾರೂಢ ಬಿಜೆಪಿ ಸರಕಾರ ಅಲ್ಪ ಸಮಯದಲ್ಲೇ ಮುಖಭಂಗ ಅನುಭವಿಸುವಂತಾಗಿದ್ದು. ಸೆಪ್ಟೆಂಬರ್ 21ರಂದು ನಗರದ ಮರಿಯಣ್ಣನಪಾಳ್ಯ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಚರ್ಚ್‌ಗಳ ಮೇಲೆ ದಾಳಿ ನಡೆಯುವ ಮೂಲಕ, ಸರಕಾರ ಪ್ರತಿಪಕ್ಷ ಸೇರಿದಂತೆ ಸಾರ್ವಜನಿಕವಾಗಿ ತೀವ್ರ ಟೀಕೆಗೆ ಒಳಗಾಯಿತು. ಆದರೆ ಮುಖ್ಯಮಂತ್ರಿ ಯಡಿಯೂರಪ್ಪ ಇದು ಪ್ರತಿಪಕ್ಷಗಳ ಷಡ್ಯಂತ್ರ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಏತನ್ಮಧ್ಯೆ ಬಜರಂಗದಳದ ರಾಜ್ಯ ಸಂಚಾಲಕ ಮಹೇಂದ್ರ ಕುಮಾರ್ ಅವರು ಖಾಸಗಿ ಟಿವಿ ಚಾನೆಲ್‌ವೊಂದರ ಮುಖಾಮುಖಿ ಕಾರ್ಯಕ್ರಮವೊಂದರಲ್ಲಿ ಈ ದಾಳಿಗೆ ಬಜರಂಗದಳವೇ ಹೊಣೆ ಎಂದು ಹೇಳುವ ಮೂಲಕ ಪ್ರಕರಣ ತಿರುವು ಪಡೆದುಕೊಂಡಿತ್ತು. ಆ ನಂತರ ಒತ್ತಡ, ಆರೋಪ-ಪ್ರತ್ಯಾರೋಪದ ಗೊಂದಲದಲ್ಲಿಯೇ ಮಹೇಂದ್ರ ಕುಮಾರ್ ಬಂಧನ, ಮತ್ತೆ ರಾಜ್ಯದ ಹಲವೆಡೆ ಪ್ರಾರ್ಥನಾ ಮಂದಿರ, ಚರ್ಚ್ ಮೇಲೆ ದಾಳಿ. ಪ್ರಧಾನಿ ಕಳವಳ, ಬಿಷಪ್‌ರಿಂದ ಮುಖ್ಯಮಂತ್ರಿ ಯಡಿಯೂರಪ್ಪಗೆ ಮಂಗಳಾರತಿ. ಪ್ರಕರಣ ಸಿಬಿಐ ತನಿಖೆಗೆ ವಹಿಸಲಾಯಿತು. ಆದರೂ ಚರ್ಚ್ ಮೇಲಿನ ದಾಳಿ ಬಿಜೆಪಿ ಸರಕಾರಕ್ಕೊಂದು ಕಪ್ಪು ಚುಕ್ಕೆಯಾಯಿತು.ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನದ ಗರಿ: ಸಾವಿರದ ಐನೂರು ವರ್ಷಗಳ ಇತಿಹಾಸ ಇರುವ ಕನ್ನಡಕ್ಕೆ 'ಅಭಿಜಾತ' ಸ್ಥಾನಮಾನ ನೀಡಬೇಕೆಂದು ಕೆಲವು ವರ್ಷಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಕೊನೆಗೂ ಕೇಂದ್ರ ಸರಕಾರ ಅಕ್ಟೋಬರ್ 31ರಂದು ಅಧಿಕೃತವಾಗಿ ಘೋಷಿಸಿತ್ತು. ತಮಿಳಿಗೆ ಶಾಸ್ತ್ರೀಯ ಸ್ಥಾನಮಾನ ದೊರೆತ ಬಳಿಕ ಎಚ್ಚೆತ್ತುಕೊಂಡ ಕನ್ನಡಿಗರು ಕನ್ನಡಕ್ಕೂ ಶಾಸ್ತ್ರೀಯ ಸ್ಥಾನಮಾನ ನೀಡಬೇಕೆಂದು ಸಾಹಿತಿಗಳು, ಕನ್ನಡಪರ ಸಂಘಟನೆಗಳು ಚಳವಳಿ ನಡೆಸಿದ್ದವು. ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ದೊರೆಯಲೇಬೇಕು ಎಂಬ ನಿಟ್ಟಿನಲ್ಲಿ ಕನ್ನಡಿಗರ ಕೂಗು ಬಲವಾಗತೊಡಗಿತ್ತು. ಅದಾಗಲೇ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ದೆಹಲಿಯ ರಾಜ್‌ಘಾಟ್‌ನಲ್ಲಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿದ ನಂತರ, ಕೇಂದ್ರ ಸರಕಾರ ದಿಢೀರನೆ ಕನ್ನಡ ಮತ್ತು ತೆಲುಗಿಗೆ ಶಾಸ್ತ್ರೀಯ ಸ್ಥಾನಮಾನ ಗೌರವ ನೀಡಿರುವ ಬಗ್ಗೆ ಘೋಷಣೆ ಹೊರಡಿಸಿತ್ತು. ಆದರೆ ಕನ್ನಡಕ್ಕೆ ಶಾಸ್ತ್ರೀಯ ನೀಡಿರುವ ಆಯ್ಕೆ ಸಮಿತಿಯನ್ನೇ ಪ್ರಶ್ನಿಸಿ ತಮಿಳುನಾಡಿನ ಆರ್.ಗಾಂಧಿ ಎಂಬವರು ಮದ್ರಾಸ್ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇತ್ತೀಚೆಗೆ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ನೀಡಿದ ಮಾನದಂಡದ ಬಗ್ಗೆ ವಿವರ ನೀಡುವಂತೆ ಕೇಂದ್ರಕ್ಕೆ ನೋಟಿಸ್ ಜಾರಿ ಮಾಡಿದೆ. ಇದೀಗ ಕನ್ನಡಕ್ಕೆ ದೊರೆತ ಶಾಸ್ತ್ರೀಯ ಸ್ಥಾನಮಾನ ಕೋರ್ಟ್ ಕಟಕಟೆಯಲ್ಲಿದೆ. ಗಾನಗಂಧರ್ವ ಭೀಮಸೇನ ಜೋಶಿಗೆ ಭಾರತ ರತ್ನ: ಹಿಂದೂಸ್ತಾನಿ ಸಂಗೀತ ಕ್ಷೇತ್ರದ ದಿಗ್ಗಜ ಪಂಡಿತ್ ಭೀಮಸೇನ ಜೋಶಿ ಅವರಿಗೆ ದೇಶದ ಪ್ರತಿಷ್ಠಿತ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಬಳಿಕ ಈ ಅತ್ಯುನ್ನತ ಪ್ರಶಸ್ತಿಯನ್ನು ಭೀನಸೇನ ಜೋಶಿ ಅವರನ್ನು ಗುರುತಿಸಿ ಭಾರತ ರತ್ನ ನೀಡಿರುವುದು ಕನ್ನಡ ಸಂಗೀತಲೋಕಕ್ಕೆ ಸಂದ ಮುಕುಟವಾಗಿದೆ. ಜೋಶಿಯವರು 1922ರಲ್ಲಿ ಫೆಬ್ರುವರಿ 4ರಂದು ಗದಗದಲ್ಲಿ ಜನಿಸಿದ್ದರು. ಚಿಕ್ಕ ವಯಸ್ಸಿನಲ್ಲೇ ಸಂಗೀತ ಕಲಿಯಲೆಂದು ಮನೆ ಬಿಟ್ಟು ಧಾರವಾಡದ ಕುಂದಗೋಳಕ್ಕೆ ತೆರಳಿದ ಅವರು, ಸುಪ್ರಸಿದ್ಧ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಹಿಂದೂಸ್ತಾನಿ ಸಂಗೀತ ಕಿರಾಣಾ ಘರಾಣದಲ್ಲಿ ಪರಿಣತಿ ಸಾಧಿಸಿದರು. ಇದೀಗ 86ರ ಹರೆಯಕ್ಕೆ ಕಾಲಿಟ್ಟಿರುವ ಗಾನಗಂಧರ್ವನಿಗೆ ಈಗಾಗಲೇ ಪದ್ಮವಿಭೂಷಣ, ಪದ್ಮಶ್ರೀ ಸೇರಿದಂತೆ ಹಲವಾರು ಪ್ರಶಸ್ತಿಗಳು ಅವರ ಮಡಿಲು ಸೇರಿದ್ದವು.ಪದ್ಮಪ್ರಿಯಾ ಪ್ರಕರಣ: ಉಡುಪಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಅವರ ನಿಗೂಢ ಕಣ್ಣರೆ ಹಾಗೂ ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಶವವಾಗಿ ಅವರು ಪತ್ತೆಯಾದ ಘಟನೆ ರಾಜ್ಯಾದ್ಯಂತ ಕುತೂಹಲ ಕೆರಳಿಸಿದ ಪ್ರಕರಣವಾಗಿತ್ತು. ಆರಂಭದಲ್ಲಿ ಪದ್ಮಪ್ರಿಯಾ ಅವರನ್ನು ಸುರಕ್ಷಿತವಾಗಿದ್ದಾರೆ ಅವರನ್ನು ಕರೆತರುವ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಹೇಳಿಕೆ ಮಧ್ಯೆಯೇ, ಪದ್ಮಪ್ರಿಯಾ ಅವರು ದೆಹಲಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ನೇಣಿಗೆ ಶರಣಾಗುವ ಮೂಲಕ ಗೃಹಸಚಿವ ವಿ.ಎಸ್.ಆಚಾರ್ಯ ಸೇರಿದಂತೆ ಪೊಲೀಸ್ ಇಲಾಖೆ ಕೂಡ ತಲೆತಗ್ಗಿಸುವಂತಾಗಿತ್ತು. ವಿರೋಧಪಕ್ಷಗಳು ಬಿಜೆಪಿ ಸರಕಾರವನ್ನು ಸಾಕಷ್ಟು ಹರಿದೆಳೆದಿದ್ದವು. ಮನೆಯ ಆಪ್ತರಾಗಿದ್ದ ಅತುಲ್ ಕುಮಾರ್ ತನ್ನ ಪತ್ನಿಯ ಅಪಹರಣ ಮತ್ತು ಸಾವಿನ ಹಿಂದಿನ ರೂವಾರಿ ಎಂದು ಶಾಸಕ ಭಟ್ ಆರೋಪಿಸಿ ದೂರು ದಾಖಲಿಸಿದ್ದರು. ಅತುಲ್ ಬಂಧನ ಬಿಡುಗಡೆಯ ಕೆಲವು ದಿನಗಳ ನಂತರ ಪದ್ಮಪ್ರಿಯಾ ಪ್ರಕರಣ ತೆರೆಯಮರೆಗೆ ಸರಿದಿತ್ತು. |