ಸಚಿನ್ ತೆಂಡೂಲ್ಕರ್ ದಾಖಲೆ... ಈ ಮಾಸ್ಟರ್ ಬ್ಲಾಸ್ಟರ್ ದಾಖಲೆಗಳ ಬಗ್ಗೆ ಹೇಳಿದಷ್ಟು ಮುಗಿಯದು. ಆದರೂ ಈ ವರ್ಷದ ಪ್ರಮುಖ ದಾಖಲೆಯೆಂದರೆ ವೆಸ್ಟ್‌ಇಂಡೀಸ್ ಆಟಗಾರ ಬ್ರಿಯಾನ್ ಲಾರಾ ಅವರು ಟೆಸ್ಟ್ ಕ್ರಿಕೆಟಿನಲ್ಲಿ ದಾಖಲಿಸಿದ್ದ ಮೊತ್ತವನ್ನು ಮೀರಿಸಿದ್ದು. ಅಕ್ಟೋಬರ್ 17ರಂದು ಈ ಸಾಧನೆ ಮಾಡುವ ಮೂಲಕ ಸಚಿನ್ ಟೆಸ್ಟ್ ಮತ್ತು ಏಕದಿನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ಖ್ಯಾತಿಗೆ ಪಾತ್ರರಾದರು. ಈ ದಾಖಲೆ ಮಾಡಿದ್ದು ಆಸ್ಟ್ರೇಲಿಯಾದೆದುರು ಮೊಹಾಲಿ ಕ್ರೀಡಾಂಗಣದಲ್ಲಿ. ಈ ವರ್ಷ ಅವರು ಏಕದಿನದಲ್ಲಿ 16 ಸಾವಿರ ರನ್ ಪೂರೈಸಿದ ಆಟಗಾರ ಎಂಬ ದಾಖಲೆಯನ್ನೂ ಬರೆದಿದ್ದರು. ಅವರ ಪುರಸ್ಕಾರಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಭಾರತ ಸರಕಾರದ ಪದ್ಮ ವಿಭೂಷಣ ಪ್ರಶಸ್ತಿ. ಇದನ್ನು 2008ರ ಮೇ 5ರಂದು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಪ್ರದಾನ ಮಾಡಿದರು. ಭಜ್ಜಿ-ಸೈಮಂಡ್ಸ್ ಮಂಗನಾಟ ವಿವಾದ... 2008 ರಲ್ಲಿ ಕ್ರಿಕೆಟಿನಲ್ಲಿ ಅತಿ ದೊಡ್ಡ ವಿವಾದವೆಂದರೆ ಮಂಗನಾಟ ಪ್ರಕರಣ. ಸಿಡ್ನಿಯಲ್ಲಿ ನಡೆಯುತ್ತಿದ್ದ ಆಸ್ಟ್ರೇಲಿಯಾ-ಭಾರತ ನಡುವಿನ ಟೆಸ್ಟ್ ಪಂದ್ಯವೊಂದರಲ್ಲಿ ಜನವರಿ 7ರಂದು ಆಂಡ್ರ್ಯೂ ಸೈಮಂಡ್ಸ್‌ರನ್ನು ಹರಭಜನ್ ಸಿಂಗ್ ಜನಾಂಗೀಯ ನಿಂದನೆ ಮಾಡಿದರೆಂಬುದು ದೂರು. ಮಂಗನಾಟ ಪ್ರಕರಣ ಬಿಸಿಸಿಐಯನ್ನೂ ಮುಜುಗರಕ್ಕೀಡು ಮಾಡಿತ್ತು. ತನ್ನ ಪ್ರಾಬಲ್ಯವನ್ನು ಐಸಿಸಿಯಲ್ಲೂ ತೋರಿಸಿದ ಭಾರತೀಯ ಕ್ರಿಕೆಟ್ ಮಂಡಳಿ ಹರಭಜನ್ ರಕ್ಷಣೆಗೆ ನಿಂತಿತ್ತು. ಕೊನೆಗೂ ಐಸಿಸಿ ಭಜ್ಜಿ ಮೇಲೆ ಹೇರಿದ್ದ ನಿಷೇಧವನ್ನು ವಾಪಸು ತೆಗೆದುಕೊಂಡು, ಇದಕ್ಕೆ ಯಾವುದೇ ಪುರಾವೆಯಿಲ್ಲ ಎಂಬ ತತ್ವಕ್ಕೆ ಬದ್ಧವಾಯಿತು.ಹರಭಜನ್ ಸಾಧನೆ... ವಿವಾದಗಳನ್ನು ಹೊರತು ಪಡಿಸಿ ನೋಡಿದಾಗ ಹರಭಜನ್ ಸಾಧನೆಯೇನೂ ಕ್ಷುಲ್ಲಕವಲ್ಲ. ಈ ವರ್ಷ ತನ್ನ ಟೆಸ್ಟ್ ಕ್ರಿಕೆಟ್ ಜೀವನದಲ್ಲಿ 300 ವಿಕೆಟ್ ಪಡೆದ ದಾಖಲೆಯನ್ನೂ ಬರೆದಿದ್ದಾರೆ. ನವೆಂಬರ್ 7ರಂದು ಆಸ್ಟ್ಟೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ರಿಕಿ ಪಾಂಟಿಂಗ್ ವಿಕೆಟ್ ಪಡೆಯುವ ಮೂಲಕ 300 ಅಥವಾ ಅದಕ್ಕಿಂತಲೂ ಹೆಚ್ಚು ವಿಕೆಟ್ ಪಡೆದ ಭಾರತದ ಮೂರನೇ ಹಾಗೂ ವಿಶ್ವದ 22ನೇ ಕ್ರಿಕೆಟಿಗ ಎಂಬ ಖ್ಯಾತಿಗೊಳಗಾದರು. ಜತೆಗೆ ತಾಯ್ನೆಲದಲ್ಲೇ 200 ವಿಕೆಟ್ ಪಡೆದ ದಾಖಲೆ ಕೂಡ ಅಂದೇ ನಡೆಯಿತು. ಬೆರಳೆತ್ತಲು ಕಷ್ಟಪಟ್ಟ ಸ್ಟೀವ್ ಬಕ್ನರ್... 2008 ರ ಆಸ್ಟ್ರೇಲಿಯಾ-ಭಾರತ ನಡುವಿನ ಸಿಡ್ನಿ ಟೆಸ್ಟ್‌ನಲ್ಲಿ ವಿವಾದಾಸ್ಪದ ತೀರ್ಪುಗಳನ್ನು ನೀಡಿ ಭಾರತೀಯರಿಂದ ಟೀಕೆಗೊಳಗಾಗಿದ್ದ ಬಕ್ನರ್, ನಂತರ ಸರಣಿಯಿಂದ ಕಿತ್ತೆಸೆಯಲ್ಪಟ್ಟಿದ್ದರು. ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್‌ರಿಗೆ ಎರಡು ಬಾರಿ ಔಟಾದಾಗಲೂ ತೀರ್ಪು ಕೊಡದಿದ್ದ ಬಕ್ನರ್, ಭಾರತದ ರಾಹುಲ್ ದ್ರಾವಿಡ್‌ಗೆ ವಿನಾ ಕಾರಣ ಔಟ್ ತೀರ್ಪು ಕೊಟ್ಟ ನಂತರ ಭಾರತೀಯ ಕ್ರಿಕೆಟ್ ಮಂಡಳಿ ಸಿಡಿದೆದ್ದಿತ್ತು. ಪ್ರಕರಣ ಬಿಸಿಯೇರುತ್ತಿರುವುದನ್ನು ಕಂಡ ಐಸಿಸಿ ಬಕ್ನರ್ ಅವರ ಬದಲಿಗೆ ಬಿಲ್ಲಿ ಬೌಡೆನ್ ಅವರನ್ನು ಮುಂದಿನ ಪಂದ್ಯಗಳಿಗೆ ನಿಯೋಜಿಸಿತ್ತು. ಶ್ರೀಶಾಂತ್ ಕಪಾಳಮೋಕ್ಷ ಪ್ರಕರಣ... ಐಪಿಎಲ್ ಪಂದ್ಯವೊಂದರಲ್ಲಿ ಬೌಲರ್ ಶ್ರೀಕಾಂತ್ ಕಪಾಳಕ್ಕೆ ಬಾರಿಸಿದ್ದು ಮತ್ತೊಂದು ಭಜ್ಜಿಯ ವಿವಾದ. 2008ರ ಏಪ್ರಿಲ್‌ನಲ್ಲಿ ಈ ಪ್ರಕರಣ ಬಿಸಿಸಿಐ ಕಟಕಟೆಯೇರಿ ಭಾರೀ ಸುದ್ದಿ ಮಾಡಿತ್ತು. ಹರಭಜನ್ ಕ್ಷಮೆ ಕೇಳುವುದರ ಜತೆ ಐದು ಏಕದಿನ ಪಂದ್ಯಗಳ ನಿಷೇಧ ಹೇರಲಾಯಿತು. ಮುಂದೆ ಇಂತಹ ವರ್ತನೆ ಪುನರಾವರ್ತನೆಯಾದಲ್ಲಿ ಜೀವಾವಧಿ ನಿಷೇಧ ಹೇರುವುದಾಗಿ ಬೆದರಿಕೆ ಕೂಡ ಭಜ್ಜಿಗೆ ಬಂತು. ಟ್ವೆಂಟಿ-20 ಚಾಂಪಿಯನ್... ಕ್ರಿಕೆಟ್ ಜಗತ್ತಿನ ಹೊಸ ಆವಿಷ್ಕಾರ ಟ್ವೆಂಟಿ-20ಯ ಉದ್ಘಾಟನಾ ವಿಶ್ವಕಪ್‌ನ್ನು ಭಾರತ ಒಲಿಸಿಕೊಂಡದ್ದು 2008ರಲ್ಲಿ ಭಾರತದ ಮತ್ತೊಂದು ಸಾಧನೆ. ಹಳಬರನ್ನು ಬದಿಗಿಕ್ಕಿ ಯುವ ಪಡೆಯನ್ನು ಕಣಕ್ಕಿಳಿಸಿದ ಭಾರತ ಅದರಲ್ಲಿ ಯಶಸ್ಸನ್ನೂ ಕಂಡಿತ್ತು. ಒಂದು ಓವರಿನ ಎಲ್ಲಾ ಎಸೆತಗಳನ್ನು ಸಿಕ್ಸರ್ ಬಾರಿಸುವ ಮೂಲಕ ಯುವರಾಜ್ ಸಿಂಗ್, ಕೊನೆಯ ಓವರಿನಲ್ಲಿ ಜಯ ದೊರಕಿಸಿಕೊಟ್ಟ ಜೋಗಿಂದರ್ ಶರ್ಮಾ ಹೀಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಕಾಣಿಕೆಯ ಮೂಲಕ ಕ್ರಿಕೆಟ್ ಜಗತ್ತನ್ನು ಹುಚ್ಚೆಬ್ಬಿಸುವಂತೆ ಮಾಡಿದ್ದು 2008ರ ಮಾರ್ಚ್ ತಿಂಗಳ ಫೈನಲ್ ಪಂದ್ಯದಲ್ಲಿ. ಬಿಸಿಸಿಐ ಕೂಡ ಚಾಂಪಿಯನ್ ತಂಡಕ್ಕೆ ಭಾರೀ ಬಹುಮಾನವನ್ನೇ ಘೋಷಿಸಿತು. ಜೊತೆಗೆ ಅದ್ಧೂರಿಯ ಸ್ವಾಗತವನ್ನು ನೀಡಲಾಗಿತ್ತು.ಕಿರಿಯರ ವಿಶ್ವಕಪ್... 19 ರೊಳಗಿನವರ ವಿಶ್ವಕಪ್ ಭಾರತದ ಪಾಲಾಗಿದ್ದು 2008ರ ವಿಶೇಷಗಳ ಪಟ್ಟಿಗೆ ಇನ್ನೊಂದು ಸೇರ್ಪಡೆ. 16 ತಂಡಗಳು ಭಾಗವಹಿಸಿದ್ದ ಈ ವಿಶ್ವಕಪ್‌ನಲ್ಲಿ ಭಾರತ ದಕ್ಷಿಣ ಆಫ್ರಿಕಾದೆದುರು 12 ರನ್‌ಗಳ ಜಯ ಸಾಧಿಸಿತ್ತು. 2008ರ ಮಾರ್ಚ್ 2ರಂದು ಮಲೇಷ್ಯಾದ ಕೌಲಲಂಪುರದಲ್ಲಿ ಈ ಫೈನಲ್ ಪಂದ್ಯ ನಡೆದಿತ್ತು. ಆ ಮೂಲಕ ಬೆಳಕಿಗೆ ಬಂದ 19ರೊಳಗಿನ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ನಂತರ ಐಪಿಎಲ್ ತಂಡಕ್ಕೂ ಆಯ್ಕೆಯಾಗಿದ್ದರು. ಕಿರಿಯರ ವಿಶ್ವಕಪ್ ಗೆದ್ದದ್ದಕ್ಕಾಗಿ ಪ್ರತಿ ಆಟಗಾರರಿಗೂ 15 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು. 1983 ರ ವಿಶ್ವಕಪ್‌ಕ್ಕೆ ರಜತ ಮಹೋತ್ಸವ... 1983 ರಲ್ಲಿ ಭಾರತಕ್ಕೆ ವಿಶ್ವ ಕಪ್ ಗೆದ್ದು ತಂದುಕೊಟ್ಟ ಕಪಿಲ್ ದೇವ್ ತಂಡದ ಸದಸ್ಯರು ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದು 2008ರ ಜೂನ್ 22ರಂದು ರಾತ್ರಿ ದೆಹಲಿಯಲ್ಲಿ. ಅಂದಿನ ಟೀಮ್ ಇಂಡಿಯಾ ಎರಡು ಬಾರಿಯ ವಿಶ್ವ ಚಾಂಪಿಯನ್ ವೆಸ್ಟ್‌ಇಂಡೀಸ್‌ಗೆ ಸವಾಲೊಡ್ಡಿ, ಲಾರ್ಡ್ಸ್‌ನಲ್ಲಿ 1983ರ ಜೂನ್ 25ರಂದು ನಡೆದ ಫೈನಲ್ ಪಂದ್ಯದಲ್ಲಿ ಪ್ರುಡೆನ್ಷಿಯಲ್ ವಿಶ್ವಕಪ್ ಕಿರೀಟ ಧರಿಸಿತ್ತು. ಈ ದಿಗ್ವಿಜಯದ 25ನೇ ವರ್ಷದ ವರ್ಷಾಚಣೆಯಲ್ಲಿ ಅಂದಿನ ತಂಡದಲ್ಲಿದ್ದ 14 ಮಂದಿ ಕ್ರಿಕೆಟಿಗರು ಮತ್ತು ಅಂದಿನ ಮ್ಯಾನೇಜರ್ ಪಿ.ಆರ್.ಮಾನ್‌ಸಿಂಗ್ ಅವರನ್ನು ದೆಹಲಿಯಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಾವ ತುಂಬಿ ಮಾತನಾಡಿದ ವಿಶ್ವವಿಜೇತ ತಂಡದ ನಾಯಕ ಕಪಿಲ್ ದೇವ್ ಅವರು, ಅಂದಿನ ವಿಜಯಕ್ಕೆ ತನ್ನೆಲ್ಲಾ ತಂಡಸದಸ್ಯರೇ ಕಾರಣರಾಗಿದ್ದು, ಅವರ ಒಗ್ಗಟ್ಟಿನ ಪರಿಶ್ರಮವನ್ನು ನೆನಪಿಸಿಕೊಂಡರು. |