ಅಬ್ಬರದ ಐಪಿಎಲ್... ಇಂಡಿಯನ್ ಕ್ರಿಕೆಟ್ ಲೀಗ್‌ಗೆ ಪ್ರತಿಸ್ಫರ್ಧಿಯಾಗಿ ಹುಟ್ಟಿಕೊಂಡ ಬಿಸಿಸಿಐ ಪ್ರಾಯೋಜಿತ ಇಂಡಿಯನ್ ಪ್ರೀಮಿಯರ್ ಲೀಗ್ ಪೆಬ್ರವರಿಯಲ್ಲಿ ಕ್ರಿಕೆಟ್ ಆಟಗಾರರನ್ನು ಹರಾಜಿಗೆ ಹಾಕುವ ಪದ್ಧತಿಯನ್ನೂ ಹುಟ್ಟು ಹಾಕಿತು. ಇಲ್ಲಿ ಅತೀ ಹೆಚ್ಚು ರೇಟಿಗೆ ಮಾರಾಟವಾದವರು ಮಹೇಂದ್ರ ಸಿಂಗ್ ಧೋನಿ. ಅವರ ರೇಟು ಒಂದೂವರೆ ಕೋಟಿ; ಪಡೆದುಕೊಂಡ ತಂಡ ಚೆನ್ನೈ ಸೂಪರ್‌ಕಿಂಗ್ಸ್. ನಂತರದ ಸ್ಥಾನ ಆಸ್ಟ್ರೇಲಿಯಾದ ಆಂಡ್ರ್ಯೂ ಸೈಮಂಡ್ಸ್. ಇಶಾಂತ್ ಶರ್ಮಾ, ಇರ್ಫಾನ್ ಪಠಾಣ್, ಬ್ರೆಟ್ ಲೀ ಕೂಡ 9 ಲಕ್ಷಕ್ಕೆ ಹರಾಜಾದರು. ಐಸಿಸಿ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತಕ್ಕೆ ಅಂತಿಮ ಓವರಿನಲ್ಲಿ ಜಯ ತಂದುಕೊಟ್ಟ ಜೋಗಿಂದರ್ ಶರ್ಮಾ ಕೇವಲ ಒಂದು ಲಕ್ಷಕ್ಕೆ ಮಾರಾಟವಾಗಿದ್ದರು.ಐಪಿಎಲ್‌ನ ಮೊದಲ ಪಂದ್ಯ ನಡೆದದ್ದು ಏಪ್ರಿಲ್ 18ರಂದು. ಸರಣಿ ಕೊನೆಯಾದದ್ದು ಜೂನ್ 1ರಂದು. ಮುಂಬೈ ಇಂಡಿಯನ್ಸ್ (ಮುಖೇಶ್ ಅಂಬಾನಿ), ಬೆಂಗಳೂರು ರಾಯಲ್ ಚಾಲೆಂಜರ್ಸ್ (ವಿಜಯ ಮಲ್ಯ), ಹೈದರಾಬಾದ್ ಡೆಕ್ಕನ್ ಚಾರ್ಜರ್ಸ್ (ಡೆಕ್ಕನ್ ಕ್ರಾನಿಕಲ್), ಚೆನ್ನೈ ಸೂಪರ್‌ಕಿಂಗ್ಸ್ (ಇಂಡಿಯನ್ ಸಿಮೆಂಟ್ಸ್- ಎನ್. ಶ್ರೀನಿವಾಸನ್), ಡೆಲ್ಲಿ ಡೇರ್‌ಡೆವಿಲ್ಸ್ (ಜಿಎಂಆರ್ ಹೋಲ್ಡಿಂಗ್ಸ್), ಕಿಂಗ್ಸ್ XI ಪಂಜಾಬ್ (ಪ್ರೀತಿ ಝಿಂಟಾ, ನೆಸ್ ವಾಡಿಯಾ), ಕೊಲ್ಕತ್ತಾ ನೈಟ್ ರೈಡರ್ಸ್ (ಶಾರೂಖ್ ಖಾನ್, ಜೂಹಿ ಚಾವ್ಲಾ), ರಾಜಸ್ತಾನ್ ರಾಯಲ್ಸ್ (ಎ.ಆರ್. ಝಾ) ಎಂಬ ಒಟ್ಟು ಎಂಟು ತಂಡಗಳನ್ನು ಐಪಿಎಲ್ ಹುಟ್ಟು ಹಾಕಿತ್ತು. ಇಲ್ಲಿ ಅತೀ ಹೆಚ್ಚು ಮೊತ್ತಕ್ಕೆ ಮಾರಾಟವಾದ ತಂಡ ಮುಂಬೈ ರೈಡರ್ಸ್. ಇದು 111.9 ಮಿಲಿಯನ್ ಡಾಲರ್‌ಗೆ ಮಾರಾಟವಾಗಿತ್ತು. ಅತಿ ಕಡಿಮೆ ರಾಜಸ್ತಾನ್ ರಾಯಲ್ಸ್(67 ಮಿಲಿಯನ್ ಡಾಲರ್).ಇಲ್ಲಿ ಚಾಂಪಿಯನ್ ಆದ ತಂಡ ರಾಜಸ್ತಾನ್ ರಾಯಲ್ಸ್. ರನ್ನರ್ ಅಪ್ ಎನಿಸಿದ್ದು ಚೆನ್ನೈ ಸೂಪರ್ ಕಿಂಗ್ಸ್. ಕಿಂಗ್ಸ್ XI ಪಂಜಾಬ್ ಮತ್ತು ಡೆಲ್ಲಿ ಡೇರ್‌ಡೆವಿಲ್ಸ್ ಸೆಮಿಫೈನಲ್ ಪ್ರವೇಶಿಸಿದ್ದವು.ಸಪ್ಪೆಯಾದ ಐಸಿಎಲ್... ಎಸ್ಸೆಲ್ ಗ್ರೂಪ್ ಪ್ರೈವೆಟ್ ಲಿಮಿಟೆಡ್ ಸ್ಥಾಪಿಸಿದ ಇಂಡಿಯನ್ ಕ್ರಿಕೆಟ್ ಲೀಗ್ ಬಿಸಿಸಿಐಯ ಐಪಿಎಲ್ ಸ್ಥಾಪನೆಯಾಗುವುದಕ್ಕಿಂತ ಮೊದಲೇ ಅಂದರೆ 2007ರಲ್ಲೇ ಹುಟ್ಟಿಕೊಂಡಿತ್ತು. ಮೊದಲು ಆರು ತಂಡಗಳನ್ನು ಹೊಂದಿದ್ದ ಐಸಿಎಲ್ ಈ ವರ್ಷ ಒಂಬತ್ತು ತಂಡಗಳೊಂದಿಗೆ ಆಡುತ್ತಿದೆ. ಒಂದು ಕಾಲದ ಕ್ರಿಕೆಟ್ ಹೀರೋಗಳಾದ ಕಪಿಲ್ ದೇವ್, ಕಿರಣ್ ಮೋರೆ, ಟೋನಿ ಗ್ರೆಗ್, ಡೀನ್ ಜೋನ್ಸ್ ಮುಂತಾದವರು ಐಸಿಎಲ್ ಕ್ರಿಕೆಟ್ ಮಂಡಳಿಯಲ್ಲಿ ಪ್ರಮುಖ ಹುದ್ದೆಗಳಲ್ಲಿದ್ದಾರೆ. ಆದರೂ ಐಪಿಎಲ್ ಅಬ್ಬರದೆದುರು ಐಸಿಎಲ್ ಕುಬ್ಜವಾದಂತಾಗಿದೆ. ತನ್ನ ಹಣ ಬಲದಿಂದ ಮೆರೆಯುತ್ತಿರುವ ಬಿಸಿಸಿಐ ಐಸಿಎಲ್‌ನ್ನು ಮಟ್ಟ ಹಾಕಲು ಇನ್ನಿಲ್ಲದ ಯತ್ನ ನಡೆಸುತ್ತಿದ್ದು, ಐಸಿಸಿಯಲ್ಲೂ ತನ್ನ ಪ್ರಭಾವ ಬೀರಿ ರಾಷ್ಟ್ರೀಯ ತಂಡದ ಯಾವುದೇ ಆಟಗಾರ ಐಸಿಎಲ್‌ನಲ್ಲಿ ಆಡದಂತೆ ತಡೆ ಹಿಡಿಯುವಲ್ಲಿ ಯಶಸ್ಸು ಕಂಡಿದೆ. ಹೇಡನ್ ಪುಸ್ತಕ ಗದ್ದಲ... ತನ್ನ ಆತ್ಮಚರಿತ್ರೆಯಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಬಗ್ಗೆ ಇಲ್ಲ ಸಲ್ಲದ ಬರಹಗಳನ್ನು ಬರೆದು ಅವಹೇಳನಕ್ಕೆ ಗುರಿಯಾದವರು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್. ಮಂಗನಾಟ ಪ್ರಕರಣದ ಬಗ್ಗೆ ಬರೆಯುತ್ತಾ ಸಚಿನ್‌ರನ್ನು ಹೀಗಳೆಯಲಾಯಿತು. ಸಚಿನ್ ಕ್ರೀಡಾಸ್ಫೂರ್ತಿ ಬಗ್ಗೆಯೂ ಪ್ರಶ್ನಿಸಿ ನಂತರ ಕ್ಷಮೆ ಕೇಳಿದ ಘಟನೆಯೂ ಇದರ ನಡವೆ ನಡೆದು ಹೋಯಿತು. ಪುಸ್ತಕ ಮಾರಾಟಕ್ಕೆ ಆಸ್ಟ್ರೇಲಿಯನ್ ಕ್ರಿಕೆಟಿಗರು ಈ ರೀತಿ ಮಾಡುತ್ತಿದ್ದಾರೆ ಎಂಬ ಉತ್ತರಗಳು ಹಿರಿಯ ಕ್ರಿಕೆಟಿರಿಂದ ಬಂದ ನಂತರ ಎಲ್ಲವೂ ತಣ್ಣಗಾಯಿತು.ಆಸೀಸ್ ಸೊಕ್ಕು ಮುರಿದ ಭಾರತ... ಆಸ್ಟ್ರೇಲಿಯಾ ಪ್ರವಾಸದ ಸಂದರ್ಭದಲ್ಲಿ ಮಂಗನಾಟ ಪ್ರಕರಣದಿಂದ ಭಾರತಕ್ಕೆ ಸಾಕಷ್ಟು ಲಾಭವೇ ಆಗಿತ್ತು. ಆ ಟೆಸ್ಟ್ ಸರಣಿಯಲ್ಲಿ ವಿಲನ್ ಆಗಿ ಕಾಡಿದ್ದ ಅಂಪೈರ್ ಸ್ಟೀವ್ ಬಕ್ನರ್ ಅವರನ್ನು ಕೂಡ ಅರ್ಧದಲ್ಲೇ ಐಸಿಸಿ ಕಿತ್ತು ಹಾಕಿತ್ತು. ಸರಣಿ ಸೋತರೂ ಆಸೀಸ್‌ಗೆ ಭಾರತ ನಡುಕ ಹುಟ್ಟಿಸಿತ್ತು. ಜತೆಗೆ ತನ್ನ ಸತತ 17ನೇ ವಿಜಯದ ಸರಪಳಿಯನ್ನು ಕೂಡ ಮುರಿದು ಹಾಕಿತ್ತು. ಈ ಹಿಂದೆ ಕೂಡ ಆಸೀಸ್‌ನ ಸತತ ಜಯವನ್ನು ಭಾರತವೇ ಮುರಿದಿತ್ತು. 2008 ರ ನವೆಂಬರ್‌ನಲ್ಲಿ ನಡೆದ ಗವಾಸ್ಕರ್-ಬಾರ್ಡರ್ ಟ್ರೋಫಿಯನ್ನು ಮರಳಿ ಪಡೆದದ್ದು ಮತ್ತೊಂದು ಇತಿಹಾಸ ಸೃಷ್ಟಿಗೆ ಕಾರಣವಾಯಿತು. ಜತೆಗೆ ಆಸ್ಟ್ರೇಲಿಯಾದ ಬೆನ್ನು ಹುರಿಗೆ ಛಲಕ್ ಹುಟ್ಟಿಸಲು ಭಾರತವೇ ಬೇಕು ಎಂಬು ಸಂದೇಶವನ್ನು ಇತರ ರಾಷ್ಟ್ರಗಳಿಗೆ ಈ ಸರಣಿ ಗೆಲುವು ರವಾನಿಸಿತು. ನಾಲ್ಕು ಟೆಸ್ಟ್ ಸರಣಿಯನ್ನು ಭಾರತ 2-0 ಅಂತರದಲ್ಲಿ ಗೆದ್ದುಕೊಂಡದ್ದು ಆಸೀಸ್‌ಗೆ ನುಂಗಲಾರದ ತುತ್ತಾಗಿತ್ತು. ಅವಮಾನದಿಂದ ಕಂಗೆಟ್ಟಿದ್ದ ಅಲ್ಲಿನ ಮಾಧ್ಯಮ ಮತ್ತು ಆಟಗಾರರು ನಿಧಾನಗತಿಯ ಓವರ್ ರೇಟ್ ವಿಚಾರದಲ್ಲಿ ಕಪ್ತಾನ ಪಾಂಟಿಂಗ್ ಕೈಗೊಂಡ ನಿರ್ಧಾರದ ಬಗ್ಗೆ ಟೀಕೆ ಟಿಪ್ಪಣಿಗಳು ಬಂದವು. ಒಟ್ಟಾರೆ ಭಾರತ ಈ ಸರಣಿ ಗೆಲುವಿನಿಂದ ಜಗತ್ತಿನ ನಂಬರ್ ವನ್ ತಂಡವಾಗುವತ್ತ ದಾಪುಗಾಲು ಹಾಕಿತು.ಗಂಭೀರ್-ವಾಟ್ಸನ್ ವಿವಾದ... ನವೆಂಬರ್‌ನಲ್ಲಿ ನಡೆದ ಭಾರತ-ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಪಂದ್ಯವೊಂದರಲ್ಲಿ ಶೇನ್ ವಾಟ್ಸನ್‌ರ ಎದೆಗೆ ಗೌತಮ್ ಗಂಭೀರ್ ಮೊಣಕೈಯಿಂದ ತಿವಿದಿದ್ದರು ಎಂಬುದು ದೊಡ್ಡ ವಿವಾದವಾಗಿತ್ತು. ವಾದ-ವಿವಾದಗಳ ನಂತರ ಗಂಭೀರ್ ಆರೋಪಿ ಎಂಬುದು ಸಾಬೀತಾದ ಕಾರಣ ಒಂದು ಟೆಸ್ಟ್ ನಿಷೇಧ ಹೇರಲಾಯಿತು. ಮಾತಿನ ಚಕಮಕಿ ನಡೆಸಿದ ಆರೋಪಕ್ಕಾಗಿ ವಾಟ್ಸನ್‌ರಿಗೆ ಪಂದ್ಯದ ಶುಲ್ಕದಲ್ಲಿ ಕಡಿತ ಮಾಡುವ ಮೂಲಕ ದಂಡನೆ ವಿಧಿಸಲಾಗಿತ್ತು.ಇಂಗ್ಲೆಂಡ್‌ನ್ನು ಅಡ್ಡಡ್ಡ ಮಲಗಿಸಿದ್ದು... ಆಸೀಸ್ ಸರಣಿ ಮುಗಿದ ತಕ್ಷಣ ಆರಂಭವಾಗಿದ್ದು ಇಂಗ್ಲೆಂಡ್ ವಿರುದ್ಧದ ತಾಯ್ನೆಲದ ಏಕದಿನ ಸರಣಿ. ಏಳು ಏಕದಿನ ಪಂದ್ಯಗಳಲ್ಲಿ ಕೊನೆಯ ಎರಡು ಪಂದ್ಯಗಳು ಮುಂಬೈ ಉಗ್ರರ ದಾಳಿ ಹಿನ್ನಲೆಯಲ್ಲಿ ರದ್ದಾಗಿತ್ತು. ಉಳಿದ ಐದು ಪಂದ್ಯಗಳನ್ನು ಕೂಡ ಗೆದ್ದು ಕೊಂಡ ಭಾರತ ಆಂಗ್ಲರ ಮುಖಕ್ಕೆ ಮಸಿ ಬಳಿದಿತ್ತು. ಸರಣಿಗೆ ವಾಪಸಾಗಿದ್ದ ಯುವರಾಜ್ ಸಿಂಗ್ ಅದ್ಭುತ ಪ್ರದರ್ಶನ ಆರಂಭಿಕ ಯಶಸ್ಸುಗಳಿಗೆ ಪ್ರಮುಖ ಕಾರಣ. ಯುವಿ ಮೊದಲೆರಡು ಪಂದ್ಯಗಳಲ್ಲಿ ಶತಕ ಸಿಡಿಸಿದ್ದರು. ರ‌್ಯಾಂಕಿಂಗ್‌ನಲ್ಲಿ ಭಾರತ... ಟೆಸ್ಟ್ ಹಾಗೂ ಏಕದಿನ ಹೀಗೆ ಎರಡೂ ತೆರನಾದ ಕ್ರಿಕೆಟಿನಲ್ಲಿ ಭಾರತ ಉತ್ತಮ ಪ್ರದರ್ಶನ ತೋರಿದ್ದು, ರ‌್ಯಾಂಕಿಂಗ್ ಪಟ್ಟಿಯಲ್ಲೂ ಅಗ್ರ ಸ್ಥಾನದತ್ತ ದಾಪುಗಾಲು ಹಾಕುತ್ತಿದೆ. ಟೆಸ್ಟ್ ಹಾಗೂ ಏಕದಿನ ಕ್ರಿಕೆಟಿನಲ್ಲಿ ಮೂರನೇ ಸ್ಥಾನದಲ್ಲಿರುವ ಶೀಘ್ರದಲ್ಲೇ ಎರಡನೇ ಸ್ಥಾನಕ್ಕೇರಲಿದೆ. ನಂಬರ್ ವನ್ ಪಟ್ಟವನ್ನು ಆಸ್ಟ್ರೇಲಿಯಾ ಕೈಯಿಂದ ಕಸಿದುಕೊಳ್ಳುವುದು ಟೀಮ್ ಇಂಡಿಯಾ ಎದುರಿಗಿರುವ ಗುರಿ. ಯುವ ಕ್ರೀಡಾಳುಗಳನ್ನು ತುಂಬಿಕೊಂಡಿರುವ ಭಾರತ ಕ್ರಿಕೆಟ್ ತಂಡ ಆ ಸಾಧನೆಗೆ ಪಾತ್ರವಾಗುವ ಸಾಧ್ಯತೆಯಿದೆಯಾದರೂ ಸ್ಥಿರ ಪ್ರದರ್ಶನದ ಅಗತ್ಯವಿರುವುದು ಅಷ್ಟೇ ಸತ್ಯ. |