ಉಗ್ರರಿಗೆ ಜೀವತೆತ್ತ ರಾಷ್ಟ್ರಯೋಧರು ಮುಂಬೈದಾಳಿಕೋರರ ವಿರುದ್ಧ ಹೋರಾಡುವ ವೇಳೆಗೆ, ರಾಷ್ಟ್ರವು ಧೀರ ಯೋಧರನ್ನು ಕಳೆದು ಕೊಂಡಿದೆ. ಎಟಿಎಸ್ ಮುಖ್ಯಸ್ಥರಾಗಿದ್ದ ಹೇಮಂತ್ ಕರ್ಕರೆ, ಎನ್‌ಕೌಂಟರ್ ತಜ್ಞ ವಿಜಯ್ ಸಾಲಸ್ಕರ್, ಧೀರ ಪೊಲೀಸ್ ಅಧಿಕಾರಿ ಅಶೋಕ್ ಕಾಮ್ಟೆ, ಎನ್ಎಸ್‌ಜಿಯ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಗಜೇಂದ್ರ ಸಿಂಗ್ ಪೊಲೀಸ್ ಪೇದೆಗಳಾದ ಪ್ರಕಾಶ್ ಮೋರೆ, ಅಂಬಾದಾಸ್ ಪವಾರ್, ಎಂ,ಸಿ ಚೌಧರಿ, ಶಶಾಂಕ್ ಶಿಂಧೆ, ಬಾಪುಸಾಹೇಬ್ ದುರ್ಗುಡೆ, ಬಾಬಾಸಾಹೇಬ್ ಭೋಂಸ್ಲೆ, ಅರುಣ್ ಚಿಟ್ಟೆ, ಜಯಂತ್ ಪಾಟೀಲ್, ಯೋಗೇಶ್ ಪಾಟಿಲ್, ಅಂಬಾದಾಸ್ ಪವಾರ್, ವಿಜಯ್ ಖಾಂಡೇಕರ್, ರಾಹುಲ್ ಶಿಂಧೆ, ಮುಖೇಶ್ ಜಾಧವ್ ಇವರುಗಳು ಉಗ್ರರೊಂದಿಗೆ ಹೋರಾಡುವ ವೇಳೆ ವೀರಮರಣವನ್ನಪ್ಪಿದ್ದು, ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ.
ಇದಲ್ಲದೆ, ದೆಹಲಿಯ ಜಾಮಿಯಾ ನಗರದಲ್ಲಿ ಅಗಡಿದ್ದ ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಿದ ವೇಳೆ ಸೆಪ್ಟೆಂಬರ್ ತಿಂಗಳಲ್ಲಿ ಪೊಲೀಸಧಿಕಾರಿ ಮೋಹನ್ ಚಂದ್ರಾ ಶರ್ಮಾ ಎಂಬವರು ಸಾವನ್ನಪ್ಪಿದ್ದರು. ಇವರೆಲ್ಲರ ಸಾವು ನಿಜ ಅರ್ಥದಲ್ಲಿ ತುಂಬಲಾರದ ನಷ್ಟ.
ಅಣುಒಪ್ಪಂದ ಅಣುಒಪ್ಪಂದ ಕಾರ್ಯಗತವಾಗಿರುವುದು 2008ರಲ್ಲಿ ಯುಪಿಎ ಸರ್ಕಾರ ತಲುಪಿದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದು. ಭಾರತ- ಅಮೆರಿಕ ಅಣು ಒಪ್ಪಂದಕ್ಕೆ ಉಭಯ ರಾಷ್ಟ್ರಗಳು ಸಹಿಹಾಕಿದ್ದು ಭಾರತ ಅಮೆರಿಕದ ಸಹಾಯದೊಂದಿಗೆ ಅಣುಶಕ್ತಿ ಉತ್ಪಾದಿಸಲು ಶಕ್ತ. ಅಣ್ವಸ್ತ್ರ ಪ್ರಸರಣ ತಡೆ ಒಪ್ಪಂದಕ್ಕೆ ಸಹಿ ಹಾಕದಿರುವ ಭಾರತವು 30 ವರ್ಷಗಳ ಅಸ್ಪಶೃತೆಯಿಂದ ಹೊರಬಂದಿದೆ. ಐಎಇಎಯು ಅಣು ಒಪ್ಪಂದಕ್ಕೆ ಹಸಿರು ನಿಶಾನೆ ನೀಡುವ ಮೂಲಕ ಭಾರತವು ಇತರ ಅಣುಶಕ್ತಿ ರಾಷ್ಟ್ರಗಳೊಂದಿಗೆ ಅಣು ವಹಿವಾಟು ನಡೆಸಬಹುದಾಗಿದೆ. ಆದರೆ ಈ ಒಪ್ಪಂದ ಆರೋಪ ವಿರೋಧಗಳಿಂದ ಮುಕ್ತವಾಗಿಲ್ಲ. ರಾಷ್ಟ್ರದ ಸಾರ್ವಭೌಮತೆಯನ್ನು ಯುಪಿಎ ಸರ್ಕಾರ ಅಮೆರಿಕದ ಮುಂದೆ ಒತ್ತೆ ಇರಿಸಿತು ಎಂಬ ಆರೋಪವನ್ನು ಮನಮೋಹನ್ ಸಿಂಗ್ ಎದುರಿಸುತ್ತಿದೆ.
ಬಿಹಾರ, ಅಸ್ಸಾಂ ಪ್ರವಾಹ ಕೋಸಿ ನದಿಗೆ ನೇಪಾಳದಲ್ಲಿ ಕಟ್ಟಿದ ಅಣೆಕಟ್ಟೆಯ ಸ್ವಲ್ಪ ದೂರದಲ್ಲಿರುವ ಕಟ್ಟೆ ಒಡೆದು ಹರಿದ ನೀರು ಬಿಹಾರದ ಎಂಟು ಜಿಲ್ಲೆಗಳನ್ನು ಕೊಚ್ಚಿಕೊಂಡೇ ಹೋಯಿತು. ಲಕ್ಷಾಂತರ ಮಂದಿ ತಮ್ಮ ಆಸ್ತಿಪಾಸ್ತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಅಂತೆಯೇ ಅಸ್ಸಾಮಿನಲ್ಲಿ ಉಕ್ಕಿಹರಿದ ಪ್ರವಾಹವೂ ಸಾಕಷ್ಟು ವಿಪತ್ತನ್ನು ತಂದಿರಿಸಿದೆ. ಎಲ್ಲವನ್ನೂ ಕಳಕೊಂಡವರು ಸರ್ಕಾರಿ ಶಿಬಿರಗಳಲ್ಲಿ ಅನಿವಾರ್ಯವಾಗಿ ತಂಗಿದ್ದು, ಹೊಸಬೆಳಕಿಗಾಗಿ ಎದುರು ನೋಡುತ್ತಿದ್ದಾರೆ.
ಇತರ ಕಳೆದ ವರ್ಷ ಸರಣಿ ಕೊಲೆಗಳಿಂದಾಗಿ ಸುದ್ದಿಯಲ್ಲಿದ್ದ ಉತ್ತರ ಪ್ರದೇಶದ ನೋಯ್ಡಾ ಈ ವರ್ಷವೂ ಸುದ್ದಿಯಲ್ಲಿತ್ತು. ಹದಿನಾಲ್ಕು ವರ್ಷದ ಬಾಲಕಿ ಅರುಷಿ ತಲ್ವಾರ್ ಮತ್ತು ಆಕೆಯ ಮನೆಗೆಲಸ ಮಾಡಿಕೊಂಡಿದ್ದ ಹೇಮಂತ್ ಎಂಬಾತನ ಸಾವು ರಾಷ್ಟ್ರಾದ್ಯಂತ ಸಂಚಲನ ಮೂಡಿಸಿತ್ತು. ಈ ಪ್ರಕರಣ ಹಲವು ತಿರುವುಗಳನ್ನು ಪಡೆದಿದ್ದು, ರಂಗುರಂಗಿನ ಕಥೆಗಳು ಬಿತ್ತರವಾಗಿದ್ದವು. ಇವುಗಳನ್ನು ಯಾವುದು ನಿಜ, ಯಾವುದು ಸುಳ್ಳು ಎಂಬುದು ಸತ್ತವರಿಗಷ್ಟೇ ಗೊತ್ತು. ಸಾವನ್ನಪ್ಪಿರುವ ಹುಡುಗಿ ಅರುಷಿ ತಲ್ವಾರ್‌ಳ ತಂದೆ ರಾಕೇಶ್ ತಲ್ವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೀಡಾಗಿ ಸುಮಾರು ಒಂದುವರೆ ತಿಂಗಳು ಜೈಲಿನಲ್ಲಿದ್ದರು. ಜೂನ್ ಒಂದರಂದು ಪ್ರಕರಣವನ್ನು ಸಿಬಿಐ ಕೈಗೆತ್ತಿಕೊಂಡಿದೆಯಾದರೂ, ಕೊಲೆಗಾರನ್ಯಾರು ಎಂಬುದನ್ನು ಇನ್ನೂ ಭೇದಿಸಲಾಗಿಲ್ಲ. ಮತ್ತು ಈ ಸಂಬಂಧ ಬಂಧನಕ್ಕೀಡಾವರೆಲ್ಲ ಜಾಮೀನು ಪಡೆಯುವಲ್ಲಿ ಸಫಲರಾಗಿದ್ದಾರೆ.
ಚಂದ್ರಯಾನ ಎಂಬ ಯಶಸ್ಸಿನ ಕಾವ್ಯ 2008ರ ಅಕ್ಟೋಬರ್ 22ರ ದಿನ ಸುವರ್ಣಾಕ್ಷರದಲ್ಲಿ ಬರೆದಿಡುವಂತಹುದು. ಆ ದಿನ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಒಂದು ನವ ಇತಿಹಾಸ ಬರೆಯಿತು. ಖಂಡಿತ, ಇದರ ಹಿಂದೆ ನಮ್ಮ ವಿಜ್ಞಾನಿಗಳ ಕನಸಿದೆ, ವರ್ಷಗಳಕಾಲದ ಶ್ರಮವಿದೆ. ಇದೆಲ್ಲವೂ ಸಾಕಾರಗೊಂಡ ಆ ಅನಿರ್ವಚನೀಯ ಆನಂದದ ಕ್ಷಣದಲ್ಲಿ ವಿಜ್ಞಾನಿಗಳ ಹರ್ಷ ಮುಗಿಲು ಮುಟ್ಟಿತ್ತು, ಶ್ರೀಹರಿ ಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ದೇಶೀ ತಂತ್ರಜ್ಞಾನದ ಮಾನವ ರಹಿತ ಈ ಚಂದ್ರಯಾನ ಉಪಗ್ರಹದ ತನ್ನ ಯಾನ ಆರಂಭಿಸಿದಾಗ ಸಹಸ್ರ ಸಹಸ್ರ ಕಣ್ಣುಗಳು ಕುತೂಹಲದಿಂದ ವೀಕ್ಷಿಸಿದವು.
1,380 ಕೆಜಿ ತೂಕದ ಚಂದ್ರಯಾನವು 11 ಪೇಲೋಡ್‌ಗಳನ್ನು ಹೊತ್ತೊಯ್ದಿದೆ. ಉಪಗ್ರಹ ಉಡಾವಣೆಯ ಬಳಿಕದ ಎರಡು ವಾರಗಳ ಸರಣಿ ಪ್ರಕ್ರಿಯೆಯ ಬಳಿಕ ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ತಲುಪಿದ್ದು ಚಂದ್ರನ ಮೇಲ್ಮೈಗಿಂತ 100 ಕಿಲೋಮೀಟರ್ ಮೇಲ್ಗಡೆಗೆ ತಲುಪಿ ಕಾರ್ಯಾಚರಣೆ ಆರಂಭಿಸಿದೆ.
ಚಂದ್ರಯಾನವು ಒಯ್ದಿರುವ 11 ಪೇಲೋಡ್‌ಗಳಲ್ಲಿ ಐದನ್ನು ಸಂಪೂರ್ಣವಾಗಿ ಭಾರತದಲ್ಲೇ ವಿನ್ಯಾಸಗೊಳಿಸಲಾಗಿದ್ದರೆ, ಮೂರನ್ನು ಯೂರೋಪ್ ಬಾಹ್ಯಾಕಾಶ ಏಜೆನ್ಸಿ ಹಾಗೂ ಒಂದು ಬಲ್ಗೇರಿಯಾ ಮತ್ತು ಎರಡು ಅಮೆರಿಕದಲ್ಲಿ ವೃದ್ಧಿಯಾಗಿದೆ. ಇವುಗಳು ಸುಮಾರು ಎರಡು ವರ್ಷಗಳ ಕಾಲ ಚಂದ್ರನ ಮೈಲೈಯ ಸಮಗ್ರ ವಿಚಾರಗಳ ಮಾಹಿತಿ ಸಂಗ್ರಹಿಸಲಿವೆ.
ಇನ್ನುಳಿದಂತೆ * ವರ್ಷದ ಆದಿಯಲ್ಲಿ ಬೆಳಕಿಗೆ ಬಂದ ಕಿಡ್ನಿ ಹಗರಣದ ರೂವಾರಿ ಡಾ| ಅಮಿತ್ ನೇಪಾಳದಲ್ಲಿ ಬಂಧನ * ಪತ್ರಕರ್ತೆ ಶಿವಾನಿ ಭಟ್ನಾಗರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಪಿಎಸ್ ಅಧಿಕಾರಿ ರಾಕೇಶ್ ಶರ್ಮಾ ಸೇರಿದಂತೆ ನಾಲ್ವರಿಗೆ ಜೀವಾವಧಿ ಶಿಕ್ಷೆ. * ಓಬಿಸಿ ಮೀಸಲಾತಿಗೆ ಅಸ್ತು. * ನಟ ಸಂಜಯ್ ದತ್ ಮೂರನೇ ವಿವಾಹ ಮತ್ತು ಅದಕ್ಕೆ ಕಾನೂನು ತೊಡಕು. * ಜೋಧಪುರ ಚಾಮುಂಡ ದೇವಾಲಯದಲ್ಲಿ ಕಾಲ್ತುಳಿತದಿಂದಾಗಿ 224 ಮಂದಿ ಸಾವು * ತನ್ನ ಮಗನಿಗೆ ಟಿಕೆಟ್ ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದ ಕಾಂಗ್ರೆಸ್ ಎಐಸಿಸಿ ಕಾರ್ಯದರ್ಶಿಯಾಗಿದ್ದ ಮಾರ್ಗರೆಟ್ ಆಳ್ವ ರಾಜೀನಾಮೆ, ಸರಣಿ ಸರಣಿ ದಾಳಿಗಳಿಂದಾಗಿ ರಾಜೀನಾಮೆ ನೀಡಬೇಕಾಗಿ ಬಂದ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್, ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸರಾವ್ ದೇಶಮುಖ್, ಉಪಮುಖ್ಯಮಂತ್ರಿ ಆರ್.ಆರ್.ಪಾಟೀಲ್ ಹಾಗೂ ಮತ್ತಿತರ ಪ್ರಕರಣಗಳು ಮಾಧ್ಯಮಗಳ ಹೆಡ್‌ಲೈನ್ ಹಿಟ್ ಮಾಡಿದ್ದವು.
ಒಟ್ಟಿನಲ್ಲಿ 2008 ಸಿಹಿ ಕಹಿಗಳ ಮಿಶ್ರಣ. ಮುಂಬೈ ದಾಳಿ, ಬಿಹಾರದಲ್ಲಿ ಉಕ್ಕಿ ಹರಿದ ಪ್ರವಾಹ ಮುಂತಾದವುಗಳು ಈ ವರ್ಷ ನಮಗೆ ಮರೆಯಾಗಲಾರದ ಪಾಠಗಳನ್ನು ಕಲಿಸಿದೆ. 2009 ಎಲ್ಲರಿಗೂ ಶಾಂತಿಯ, ಸೌಹಾರ್ದದ, ಅಭ್ಯುದಯದ ಆರೋಗ್ಯಕರ ವರ್ಷವಾಗಲಿ ಎಂಬ ಹಾರೈಕೆಯೊಂದಿಗೆ,
ನಮಸ್ಕಾರ. |