ಶಾನಿ ಹೌದು! ಹೆಣ್ಣು ಕಳೆದುಹೋಗಿದ್ದಾಳೆ. ನೋಡ ನೋಡುತ್ತಿರುವಂತೆಯೆ, ಹೆಣ್ಣಿನ ಬಗ್ಗೆ, ಆಕೆಯ ಉನ್ನತಿಯ ಬಗ್ಗೆ, ಆಕೆಯ ಶಕ್ತಿಯ ಬಗ್ಗೆ, ಆಕೆಯ ಒಳಿತು ಕೆಡುಕುಗಳ ಬಗ್ಗೆ ಚರ್ಚೆಗಳು ಆಗುತ್ತಿರುವಂತೆ, ಸಮಾಜದಲ್ಲಿ ಆಕೆಗೆ ಉತ್ತಮ ಶಿಕ್ಷಣ-ಸ್ಥಾನಮಾನ ನೀಡುವ ಎಲ್ಲ ಪ್ರಯತ್ನಗಳೂ ನಡೆಯುತ್ತಿರುವಂತೆಯೇ ಹೆಣ್ಣು ಕಾಣೆಯಾಗುತ್ತಿದ್ದಾಳೆ. ಅಂದರೆ ಆಕೆ ಈ ಭೂಮಿಗೆ ಬರದಂತೆಯೇ ಕಾಣೆಯಾಗುತ್ತಿದ್ದಾಳೆ.
ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಎಲ್ಲವೂ ಹೈ-ಟೆಕ್ ಆಗುತ್ತಿರುವ ಈ ಯುಗದಲ್ಲಿ ಉದರದೊಳಗೆ ಮಿಸುಗುತ್ತಿರುವ ಭ್ರೂಣ ಹೆಣ್ಣೆಂದು ತಿಳಿಯುತ್ತಲೆ, ಹೈ-ಟೆಕ್ಕಾಗಿ ಸದ್ದಿಲ್ಲದೆ ಆ ಭ್ರೂಣದ ಸದ್ದಡಗಿಸಲಾಗುತ್ತಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತದ ಈ ಬೆಳವಣಿಗೆ ಭಯಾನಕ. ಆಫ್ರಿಕಾದ ಕೆಲೆವಡೆ ಹೆಣ್ಣಿನ ಅಂಗಾಂಶಗಳನ್ನೇ ಕತ್ತರಿಸುವ ಹೀನಾತಿಹೀನ ಪ್ರಕ್ರಿಯೆಗಳು ನಡೆಯುತ್ತಿವೆ, ಜಾಗತಿಕವಾಗಿ ಮಹಿಳೆಯ ವಿರುದ್ಧದ ಹಿಂಸೆಯ ಸ್ಪರ್ಧೆಯಲ್ಲಿ ಪ್ರಪಂಚದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ ಭಾರತ ಚಾಂಪಿಯನ್ ಎಂದರೆ ತಪ್ಪಲ್ಲ.
ಒಂದಷ್ಟು ವರ್ಷಗಳ ಹಿಂದೆ ಹೋದರೆ ಹೆಣ್ಣುಮಕ್ಕಳಿಗೆ ಗುಲಾಮರ ಸ್ಥಾನಮಾನ ಲಭಿಸುತ್ತಿದ್ದರೂ ಭೂಮಿಗೆ ಬರುವ ಅವಕಾಶವಿತ್ತು. ಇದೀಗ ಉನ್ನತ ತಾಂತ್ರಿಕತೆಯಿಂದಾಗಿ, ಹೆಣ್ಣು ಈ ಭೂಮಿಯಲ್ಲಿ ಕಣ್ಣು ಬಿಡುವ ಅವಕಾಶದಿಂದಲೇ ವಂಚಿತಳಾಗಿದ್ದಾಳೆ! ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಮೂಲಕ ಉದರದಲ್ಲಿರುವ ಭ್ರೂಣ ಗಂಡೋ ಹೆಣ್ಣೋ ಎಂದು ಪತ್ತೆ ಹಚ್ಚಿ, ಅದು ಹೆಣ್ಣಾದರೆ ಅಲ್ಲೇ ಮುಗಿಸಿ ಬಿಡುವ ಕೆಲಸ ನಡೆದು ಹೋಗುತ್ತದೆ.
ಈ ಒಂದು ವಿಷಯದಲ್ಲಿ ಜಾತಿ-ಮತ-ಭೇದವಿಲ್ಲದಂತೆ ಎಲ್ಲ ಪಂಗಡಗಳಲ್ಲೂ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಲೇ ಇದೆ. ಗಂಡು ಮಕ್ಕಳಾದರೆ ಆಸ್ತಿ: ಹೆಣ್ಣು ಮಕ್ಕಳಾದರೆ ಹೊರೆಯೆಂಬ ಈ ಮನೋಭಾವ, ಗಂಡು ಹೆಣ್ಣುಗಳ ಸಂಖ್ಯೆಯಲ್ಲಿ ಅಗಾಧವಾದ ಅಂತರ ಸೃಜಿಸಿದೆ. ಅಂಕಿ ಅಂಶಗಳನ್ನು ಗಮನಿಸಿದರೆ ಭಯಾನಕ ಪರಿಸ್ಥಿತಿ ಗೋಚರವಾಗುತ್ತದೆ. 1990ರ ಜನಗಣತಿ ಪ್ರಕಾರ ಹೆಂಗಸರಿಗಿಂತ ಗಂಡಸರ ಸಂಖ್ಯೆಯು 25 ಮಿಲಿಯನ್‌ಗಳಷ್ಟು ಅಧಿಕವಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಸರಕಾರ ಅಲ್ಟ್ರಾಸೌಂಡ್ ಮೂಲಕ ಮಗುವಿನ ಲಿಂಗ ಪತ್ತೆಹಚ್ಚುವುದನ್ನು ಕಾನೂನುಬಾಹಿರ ಎಂದು ಘೋಷಿಸಿತು.
ಕಾನೂನು ಇರುವುದು ಉಲ್ಲಂಘಿಸಲು ಎಂಬ ಹಠಕ್ಕೆ ಬಿದ್ದಂತೆ ಭ್ರೂಣದ ಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣದ ಹತ್ಯೆ ಅವ್ಯಾಹತವಾಗಿ ಮುಂದುವರಿಯಿತೆಂಬುದಕ್ಕೆ ಸಾಕ್ಷಿ 2001ರ ಜನಗಣತಿ. ಇಲ್ಲಿ ಗಂಡು ಹೆಣ್ಣಿನ ನಡುವಣ ಅಂತರ 35 ಮಿಲಿಯ(350 ಲಕ್ಷ)ಕ್ಕೇರಿದೆ. ಹೆಂಗಸರೇ ಇಲ್ಲದ ಸಮಾಜವನ್ನು ಊಹಿಸಲು ಸಾಧ್ಯವೆ?
ಭಾರತದಲ್ಲಿ ಹೆಣ್ಣು ಶಿಶುಗಳ ಅಥವಾ ಹೆಣ್ಣು ಭ್ರೂಣ ಹತ್ಯೆಗೆ ಸುದೀರ್ಘ ಇತಿಹಾಸವೇ ಇದೆ. ಸಾಂಸ್ಕೃತಿಕವಾಗಿ, ಸಾಂಪ್ರದಾಯಿಕವಾಗಿ ಎಲ್ಲ ಸಮಾಜಗಳಲ್ಲೂ ಗಂಡು ಮಕ್ಕಳಿಗೆ ಹೆಚ್ಚಿನ ಆದ್ಯತೆ ಇರುವ ಕಾರಣ ಹೆಣ್ಣು ಮಕ್ಕಳು ಹುಟ್ಟಿ ಕಣ್ಣು ಬಿಡುತ್ತಲೆ ಅವರ ಕಣ್ಣನ್ನು ಬಲವಂತವಾಗಿ ಮುಚ್ಚಿಸಲಾಗುತ್ತಿತ್ತು. ಅಂದರೆ ಹೆಣ್ಣು ಶಿಶುಗಳು ಹುಟ್ಟುತ್ತಲೇ ಅವುಗಳಿಗೆ ಸಾವು! ಆಧುನಿಕ ತಂತ್ರಜ್ಞಾನ ಈಗ ಇನ್ನಷ್ಟು ಪಾಲಿಶ್ಡ್ ರೀತಿಯಲ್ಲಿ, ಕಿಂಚಿತ್ ಪಶ್ಚಾತ್ತಾಪವೂ ಮೊಳೆಯದಂತೆ ಈ ಕೆಲಸ ಮುಗಿಸಿಕೊಡುತ್ತದೆ. ಇದು ವೈದ್ಯರಿಗೂ ಅತ್ಯಂತ ಲಾಭದಾಯಕ ವ್ಯಾಪಾರವಾಗಿದೆ.
|