ರಶ್ಮಿ.ಪೈ ಮಹಿಳಾ ದಿನಾಚರಣೆಯ ನೂರನೇ ವರ್ಷವನ್ನು ಆಚರಿಸುವ ಈ ಸಂದರ್ಭನಲ್ಲಿ ಪ್ರಸ್ತುತ ಅಂತಾರಾಷ್ಟ್ರೀಯ ಮಹಿಳಾ ಸಂಘಟನೆಯು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ "ಆರ್ಥಿಕ ಮತ್ತು ಲಿಂಗ ಸಮಾನತೆ"ಎಂಬ ಧ್ಯೇಯವಾಕ್ಯ ಘೋಷಿಸಿದೆ. ಆದರೆ ಶತಮಾನ ಕಳೆದರೂ ಇಂದಿಗೂ ಹಳ್ಳಿಗಳಲ್ಲಿ ಕನಿಷ್ಠ ಕೂಲಿಗಾಗಿ ದಿನವಿಡೀ ದುಡಿಯುವ ಮಹಿಳೆಯರ ಆರ್ಥಿಕ ಸ್ಥಿತಿ ಸುಧಾರಿಸಿಲ್ಲ ಎನ್ನುವುದು ನಮ್ಮ ಕಣ್ಣ ಮುಂದಿರುವ ಜ್ವಲಂತ ನಿದರ್ಶನ. ಇದರ ನಡುವೆ ಮಹಿಳೆಯರ ವೇತನ ಸಮಾನತೆಯ ಘೋಷಣೆಯೊಂದಿಗಿನ ನೂರನೇ ವರ್ಷಾಚರಣೆ ವಿಪರ್ಯಾಸವಲ್ಲವೇ?
ಇತ್ತೀಚೆಗೆ ಅಮೆರಿಕವು ಪ್ರಕಟಿಸಿದ "2007 ಜಾಗತಿಕ ನಗರಾಭಿವೃದ್ಧಿ ಪರಿಷ್ಕರಣಾ ವರದಿ"ಯಲ್ಲಿ ಭಾರತದ ಅತೀ ಹೆಚ್ಚು ಜನರು ಗ್ರಾಮಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ಸುದ್ದಿಯನ್ನು ನಾವೀಗಾಗಲೇ ಓದಿದ್ದೇವೆ. ಪ್ರಸ್ತುತ ವರದಿ ಪ್ರಕಾರ, ಭಾರತದ ಜನಸಂಖ್ಯೆಯ 70 ಪ್ರತಿಶತ ಮಂದಿ ಹಳ್ಳಿಗಳಲ್ಲಿ ವಾಸವಾಗಿದ್ದಾರೆ. ಇನ್ನುಳಿದ 30% ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಅಂದರೆ ಇಲ್ಲಿನ ಬಹುತೇಕ ಮಂದಿಯೂ ಕೃಷಿಯನ್ನು ಅವಲಂಬಿಸಿಕೊಂಡಿದ್ದು, ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿ ಕಂಡುಕೊಳ್ಳಬೇಕಾದುದು ಅತೀ ಅಗತ್ಯ ಎಂದಾಯಿತು. ಇದರ ಜೊತೆಗೆ ಗ್ರಾಮೀಣ ಜನರಿಗೆ ಉದ್ಯೋಗ ಒದಗಿಸುವ ಮೂಲಕ ದೇಶದ ಆರ್ಥಿಕತೆಯಲ್ಲಿ ಬೆಳವಣಿಗೆಯನ್ನು ಹೊಂದಬಹುದೆಂದು ತಜ್ಞರ ಅಭಿಪ್ರಾಯ. ಅದೇನೇ ಇರಲಿ, ಗ್ರಾಮೀಣ ಜನರ ಅಥವಾ ಮಧ್ಯಮ ವರ್ಗದ ಜನರ ಆರ್ಥಿಕತೆಯ ಬಗ್ಗೆ ಚಿಂತನೆ ನಡೆಸಿದರೆ ಅವರ ಉದ್ಯೋಗ ಮತ್ತು ಅವರಿಗೆ ದೊರೆಯುವಂತಹ ವೇತನದ ಬಗ್ಗೆಯೂ ನಾವು ಮನನ ಮಾಡಬೇಕಾಗಿದೆ.
ಕಾರ್ಪೋರೇಟ್‌ಗಳ ಜೀವನ ಶೈಲಿಯಿಂದ ಒಂದು ಕ್ಷಣ ಹೊರಗೆ ಬಂದು ಮಧ್ಯಮ ವರ್ಗದ ಅಥವಾ ಗ್ರಾಮೀಣ ಜನರ ಬದುಕಿನ ಪುಟವನ್ನು ತಿರುವಿ ನೋಡಿದರೆ, ಆರ್ಥಿಕ ಸ್ಥಿತಿಯಲ್ಲಿ ಹಿಂದುಳಿದಿರುವ ಜನರೆಂದು ಬಣ್ಣಿಸಲ್ಪಡುವ ಗ್ರಾಮೀಣ ಜನರಲ್ಲಿ ಹೆಣ್ಣು ಗಂಡು ಎಂಬ ಭೇದವಿಲ್ಲದೆ ಜನರು ಹಗಲು ರಾತ್ರಿ ದುಡಿಯುತ್ತಿರುತ್ತಾರೆ. ಆದರೆ ತಾವು ಮಾಡುವ ಕೆಲಸಕ್ಕೆ ದೊರೆಯುವ ವೇತನದಲ್ಲಿ ಸಮಾನತೆ ಇದೆಯೇ? ಉದಾಹರಣೆಗೆ ಗ್ರಾಮ ಪ್ರದೇಶದಲ್ಲಿ ತೋಟದ ಕೆಲಸ ಮಾಡುವ ಹೆಂಗಸರನ್ನು ಮತ್ತು ಗಂಡಸರ ವಿಷಯವನ್ನೇ ತೆಗೆದುಕೊಳ್ಳಿ. ಇಬ್ಬರೂ ಒಂದೇ ರೀತಿಯ ಕೆಲಸ ಮಾಡುತ್ತಿದ್ದರೂ ಗಂಡಸರಿಗೆ ಅಧಿಕ ವೇತನ, ಹೆಣ್ಣು ಎಷ್ಟೇ ಕೆಲಸ ಮಾಡಿದರು ಹೆಣ್ಣೆಂಬ ನೆಪಕ್ಕೆ ಅವಳಿಗೆ ಕಡಿಮೆ ಸಂಬಳವೇಕೆ? ಹೆಣ್ಣು ಮತ್ತು ಗಂಡು ಇವರ ಕೆಲಸಗಳನ್ನು ಹೋಲಿಸಿದರೆ ಗಂಡು ಮಾಡುವಂತಹ ಕೆಲಸ ತುಸು ಕಠಿಣವಾಗಿದ್ದಿರಬಹುದು, ಹೆಣ್ಣಿಗೆ ಅಷ್ಟು ದೈಹಿಕ ಸಾಮರ್ಥ್ಯವಿಲ್ಲದೇ ಇರಬಹುದು, ಆದರೆ ಗ್ರಾಮಗಳಲ್ಲಿ ಗಂಡು ಹೆಣ್ಣಿನ ವೇತನಗಳಿಗೇಕೆ ಸಮಾನತೆ ಕಂಡು ಬಂದಿಲ್ಲ?
ನನಗೆ ತಿಳಿದಂತೆ ತೋಟದಲ್ಲಿ (ಗ್ರಾಮಗಳಲ್ಲಿ) ಕೆಲಸ ಮಾಡುವ ಪುರುಷರಿಗೆ ದಿನಕ್ಕೆ ಸುಮಾರು 120 ರೂ. ಸಂಬಳ ನೀಡುತ್ತಿದ್ದರೆ, ಹೆಂಗಸರಿಗೆ ಅಂದಾಜು 80 ರೂ. ನೀಡಲಾಗುತ್ತದೆ. ಇವರಿಬ್ಬರ ಕೆಲಸಗಳನ್ನು ಹೋಲಿಸಿದರೆ ಗಂಡಸರು ಮಾಡುವ ಕೆಲಸಕ್ಕಿಂತ ಹೆಚ್ಚಿನ ಕೆಲಸವನ್ನು ಹೆಂಗಸರು ಮಾಡುತ್ತಿದ್ದು, ಅದೂ ಮಾತ್ರವಲ್ಲ ಹೆಂಗೆಳೆಯರು ಮಾಡುವ ಕೆಲಸಗಳು ಹೆಚ್ಚು ನಿಖರ ಮತ್ತು ಅಚ್ಚುಕಟ್ಟಾಗಿರುತ್ತದೆ. ಎಷ್ಟೇ ಚುರುಕಿನಿಂದ ಕೆಲಸ ಮಾಡಿದರೂ ಮಹಿಳೆಗೆ ಸಿಗುವ ವೇತನ ಯಾವಾಗಲೂ ಕಡಿಮೆಯೇ. ಗಂಡಸರಿಗೆ ಕುಟುಂಬದವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಇದೆ. ತನ್ನ ಮಡದಿ ಮಕ್ಕಳ ಜೀವನ ಸಾಗಿಸಲು ಅವರಿಗೆ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ ಎಂದು ವಾದಿಸಿದರೂ, ಗಂಡನನ್ನು ಕಳೆದುಕೊಂಡು ಬೇರೆ ಯಾರನ್ನೂ ಅವಲಂಬಿಸದೆ, ತನ್ನ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸಿ ಉತ್ತಮವಾಗಿ ಜೀವನ ನಿರ್ವಹಿಸುವ ಒಂಟಿ ಮಹಿಳೆಯರು ನಮ್ಮಲ್ಲಿಲ್ಲವೇ ? ಕೃಷಿ ಕುಂಠಿತಗೊಂಡಾಗ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬದ ವಿಧವೆಯರು ತನ್ನ ಗಂಡನ ಕಾಯಕವನ್ನೇ ಮುಂದುವರಿಸಿದರೂ ಪುರುಷ ಸಮಾನವಾದ ವೇತನವನ್ನು ನೀಡಲಾಗುತ್ತಿದೆಯೇ ? ಭಾರತದಲ್ಲಿ 30 ಮಿಲಿಯನ್ ವಿಧವೆಯರು ಗಂಡಿನ ಆಸರೆಯಿಲ್ಲದೆ ಬದುಕು ಸಾಗಿಸುತ್ತಿಲ್ಲವೇ ? ಕೃಷಿಕಾರ್ಯಗಳಲ್ಲಿ ಅತೀ ಹೆಚ್ಚು ತಾಳ್ಮೆಯನ್ನುಪಯೋಗಿಸಿ ಕೆಲಸ ಮಾಡುವವರು ಮಹಿಳೆಯರಲ್ಲವೇ ? ಕಳೆ ಕೀಳುವುದು, ಜೊಳ್ಳು ತೆಗೆಯುವುದು ಮೊದಲಾದ ಚಿಕ್ಕ ಕೆಲಸಗಳನ್ನು ಮಹಿಳೆಗೆ ವಹಿಸಿಕೊಡಲಾಗಿದ್ದರೂ ಅದನ್ನು ಅತೀ ತಾಳ್ಮೆಯಿಂದ ಚೊಕ್ಕಟವಾಗಿ ಕೆಲಸ ಮಾಡಲು ಸಾಧ್ಯವಿರುವುದು ಮಹಿಳೆಯರಿಗೆ ಮಾತ್ರ ಎಂಬುದರಲ್ಲಿ ಎರಡು ಮಾತಿಲ್ಲ.
|