ಮುಖ್ಯ ಪುಟ > ವಿವಿಧ > ವೆಬ್‌ದುನಿಯಾ ವಿಶೇಷ 08 > ಯುಗಾದಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಒಂದು ಜನ್ಮದಲ್ಲಿ ಒಂದೇ ಬಾಲ್ಯ, ನಮಗದಷ್ಟೇ ಏತಕೆ?
ಅವಿನಾಶ್ ಬಿ.
WD
ವರುಷಕೊಂದು ಹೊಸತು ಜನ್ಮ
ಹರುಷಕೊಂದು ಹೊಸತು ನೆಲೆಯು
ಅಖಿಲ ಜೀವ ಜಾತಕೆ

ಒಂದೆ ಒಂದು ಜನ್ಮದಲ್ಲಿ
ಒಂದೆ ಬಾಲ್ಯ ಒಂದೆ ಹರೆಯ
ನಮಗದಷ್ಟೆ ಏತಕೋ..

-ದ.ರಾ.ಬೇಂದ್ರೆ

"ಅಮ್ಮ ನಂಗೆ ಈ ಬಾರಿ ಯುಗಾದಿಗೆ ಹೊಸ ಅಂಗಿ ಚಡ್ಡಿ ತೆಗೆಸಿಕೊಡ್ತಾಳಂತೆ"
"ಹೌದಾ?"
ವಿಷು ವಿಶೇಷ
  ಏ.14ರಂದು ಸೌರಮಾನ ಪಂಚಾಂಗ ಪ್ರಕಾರ ಯುಗಾದಿ. ಅಂದು ಕೇರಳದಲ್ಲಿ ಮತ್ತು ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ವಿಷು ಹಬ್ಬ (ಬಿಸು ಪರ್ಬ) ಆಚರಿಸಲಾಗುತ್ತದೆ. ಆಚರಣೆ ಮೇಲೂ ಬೆಳಕು ಚೆಲ್ಲಬಲ್ಲ ಒಂದು ಕಥೆಯಿದು.      

"ನಿಂಗೆ ಇಲ್ವಾ?"
"ಇಲ್ಲ"
"ಯಾಕೆಯಾ?"
"ಅಪ್ಪನಲ್ಲಿ ಕೇಳಿದ್ದಕ್ಕೆ ಜೋರು ಮಾಡಿದ್ರು. ಕಣಿ ಇಡ್ಲಿಕ್ಕೆ ಅಕ್ಕಿಗೆ ದುಡ್ಡಿಲ್ಲ, ಹೊಸ ಬಟ್ಟೆಯಂತೆ ಹೊಸ ಬಟ್ಟೆ... ಅಂತ ಅಪ್ಪ ಕೂಗಾಡಿದ್ರು"

"ಹಾಗಾದ್ರೆ ಒಂದು ಕೆಲಸ ಮಾಡು. ಮೊನ್ನೆ ಶಾಲೆಗೆ ಹೊಲಿಸಿದ ಯುನಿಫಾರ್ಮ್ ಇದೆಯಲ್ಲ... ಅದು ಹೊಸದರ ಥರಾನೇ ಉಂಟು. ಅದನ್ನೇ ಹಾಕಿಕೋ."

ಈ ಸಲಹೆ ಬಂದಾಗ ಒಂದು ಹನ್ನಿ ಕಣ್ಣೀರು ಕೆನ್ನೆಯನ್ನು ಒರಸಿಕೊಂಡು ನನಗರಿವಿಲ್ಲದಂತೆಯೇ ಜಾರಿತ್ತು.

ಹೌದಲ್ವಾ? ನನ್ನ ಅಕ್ಕ ಪಕ್ಕದ ಮನೆಯಲ್ಲಿ ನನ್ನ ವಯಸ್ಸಿನ ಹುಡುಗ್ರು ಯುಗಾದಿಯಂದು, ವಿಷು ಕಣಿ ನೋಡಿ ಹೊಸ ಬಟ್ಟೆ ತೊಟ್ಟು ನಲಿದಾಡುವುದಕ್ಕೆ, ಅವರ ಫ್ರೆಂಡ್ಸಿಗೆಲ್ಲಾ ತೋರಿಸೋದಿಕ್ಕೆ ಎಷ್ಟೊಂದು ಸಂಭ್ರಮದಲ್ಲಿದ್ದಾರೆ! ಸಡಗರ, ಪುಳಕ, ಮನಸ್ಸಿನ ತುಂಬಾ ಹೊಸ ಅಂಗಿ ಚಡ್ಡಿಯ ಕನಸು... ಯುಗಾದಿಗೆ ಒಂದು ವಾರ ಇರುವಾಗಲೇ ಅವರ ಕಣ್ಣುಗಳಲ್ಲದೇನು ಹೊಳಪು!

ನಾನು ಯೋಚಿಸಿಕೊಳ್ಳುತ್ತೇನೆ... ಈ ಹಬ್ಬ ಅಂದ್ರೇನು? ಬೆಂದ ಅನ್ನಕ್ಕೇ ಒಂದಷ್ಟು ಬೆಲ್ಲ ಹಾಕಿ, ತೆಂಗಿನ ಕಾಯಿ ಇದ್ದರೆ ಅದನ್ನು ಅರೆದು ಹಾಲು ತೆಗೆದು, ಅದನ್ನೂ ಸೇರಿಸಿದರೆ ಒಂದು ಮಧ್ಯಾಹ್ನದೂಟಕ್ಕೆ ಅರ್ಧ ಲೋಟದಲ್ಲಿ ಪಾಯಸ ಎಂಬ ಸಿಹಿ ಪದಾರ್ಥ ತಿಂದರೆ ಅದೇ ಹಬ್ಬವಾಗಿಬಿಡುತ್ತಿತ್ತು ನನಗೆ. ಹೊಸ ಅಂಗಿ-ಚಡ್ಡಿಯ ಬಗ್ಗೆ ನಾನಂತೂ ಕನಸು ಕಂಡದ್ದಿಲ್ಲ, ಕಾಣುವಂತೆಯೂ ಇರಲಿಲ್ಲ.

ಸದಾ ಕಾಲ ದುಡಿಯುವ ಅಪ್ಪ, ತಂದು ಹಾಕಿದ್ದನ್ನು ಅಚ್ಚುಕಟ್ಟಾಗಿ ಬೇಯಿಸಿ ಎಲ್ಲರಿಗೂ ಸಮಪಾಲು ವಿತರಿಸುತ್ತಿದ್ದ ಅಮ್ಮ, ಅದರ ಜತೆಗೆ, "ಮಗೂ, ನಾಳೆ ಯುಗಾದಿ ಹಬ್ಬ, ಆವತ್ತು ನೀನು ಯಾವುದಕ್ಕೂ ಹಠ ಮಾಡಬಾರದು, ದೊಡ್ಡವರಿಂದ ಬೈಸಿಕೊಳ್ಳಬಾರದು. ಯಾಕಂದ್ರೆ, ಹೊಸ ವರ್ಷದ ಮೊದಲ ದಿನವೇ ಬೈಸಿಕೊಂಡರೆ, ಇಡೀ ವರ್ಷ ಅದು ಮುಂದುವರೀತದೆ. ಹಾಗಾಗಿ ಹೇಗಾದ್ರೂ ಲೂಟಿ ಮಾಡ್ಬಾರ್ದು. ಆಯ್ತಾ ಪುಟ್ಟಾ..." ಅಂತ ಮನಸಿನೊಳಗಿನ ಆತಂಕದ ನಡುವೆಯೇ ಸಲಹೆ ನೀಡುತ್ತಿದ್ದ ದೊಡ್ಡಮ್ಮ...

ಇವರ ನಡುವೆ ಹಬ್ಬ ಎಂಬ ಅದೆಂಥದನ್ನೋ ಆಚರಿಸುತ್ತಿದ್ದ ನನಗೆ, ನೆರೆಕರೆಯ ನನ್ನ ಗೆಳೆಯರ ಸಂತಸವನ್ನು ಹಂಚಿಕೊಳ್ಳುವುದಷ್ಟೇ ಪರಮಾನ್ನವಾಗಿತ್ತು. ಇದ್ದದ್ದರಲ್ಲಿಯೇ ಅಮ್ಮ ಗುಡ್ಡೆಗೆ ಹೋಗಿ ಗೇರು ಹಣ್ಣು, ಮಾವಿನ ಕಾಯಿ, ಗೇರು ಬೀಜ, ಮುಳ್ಳುಸೌತೆ... ಸಿಕ್ಕಿದ್ರೆ ಬಾಳೆ ಹಣ್ಣು... ಮತ್ತು ಇದ್ದ ಒಂದೇ ಒಂದು ತೆಂಗಿನ ಮರದಲ್ಲಿದ್ದ ತೆಂಗಿನಕಾಯಿ ತೆಗೆದು, ಅದನ್ನು, ಹರಿವಾಣದಲ್ಲಿ ಹರಡಿದ್ದ ಅರೆಪಾವು ಅಕ್ಕಿಯ ಮೇಲಿರಿಸಿ, ಅದಕ್ಕೊಂದು ಕನ್ನಡಿ ಇರಿಸಿ, ಅವಳ ಮದುವೆ ಕಾಲಕ್ಕೆ ನನ್ನ ಸೋದರ ಮಾವ (ಅಮ್ಮನ ಅಣ್ಣ) ಕೊಟ್ಟ ಕಾಲು ಪವನಿನ ಚಿನ್ನದುಂಗುರವನ್ನೂ ಇರಿಸಿ 'ವಿಷು ಕಣಿ' ಪ್ರತಿಷ್ಠಾಪಿಸುತ್ತಿದ್ದಳು. ಅದಕ್ಕೆ ನಮ್ಮ ಮನೆಯಂಗಳದಲ್ಲಿ ಬೆಳೆಸಿದ್ದ ಅಬ್ಬಲ್ಲಿಗೆ (ಕನಕಾಂಬರ), ಗುಲಾಬಿ, ಕೇಪುಳ ಹೂವುಗಳನ್ನು ಅಚ್ಚುಕಟ್ಟಾಗಿ ಕೊಯ್ದು, ಬಾಳೆಯ ದಾರದಲ್ಲಿ ನೆಯ್ದ ಹೂವಿನ ಹಾರದ ಅಲಂಕಾರ. ಒಂದಷ್ಟು ಕುಂಕುಮ ಲೇಪನ. ಅಪ್ಪನ ಎಲೆ-ಅಡಿಕೆ ಪೆಟ್ಟಿಗೆಯಿಂದ ಎಬ್ಬಿಸಿದ ವೀಳ್ಯದೆಲೆ ಮತ್ತು ಅಡಿಕೆ ತುಂಡುಗಳು.

"ನೋಡು ಮಗಾ, ನಾಳೆ ಬೆಳಿಗ್ಗೆ ಎದ್ದ ತಕ್ಷಣ ವಿಷು ಕಣಿ ನೋಡು, ಕನ್ನಡಿಯಲ್ಲಿ ನಿನ್ನ ಮುಖ ನೋಡಿದ ನಂತ್ರವೇ ಹಲ್ಲುಜ್ಬೇಕು... ಎದ್ದ ಕೂಡ್ಲೇ ಬೇರೇನನ್ನೂ ನೋಡ್ಬಾರ್ದು... ಸೀದಾ ದೇವರ ಫೋಟೋದ ಹತ್ತಿರ ಹೋಗಿ ಅಲ್ಲಿಟ್ಟಿರುವ ಕಣಿಯನ್ನೇ ನೋಡ್ಬೇಕು ತಿಳೀತಾ...?" ಅಂತ ಅಕ್ಕರೆ ತುಂಬಿದ, ಮುಖದ ಮೂಲೆಯಲ್ಲೆಲ್ಲೋ ಸಡಗರದ ಭಾವ ಮಿಂಚಿಸುತ್ತಾ ಹೇಳ್ತಾ ಇದ್ದಳು.

"ಆಯ್ತಮ್ಮಾ... ಅದ್ರಲ್ಲಿರೋ ಗೋಂಕು... (ಗೇರು ಹಣ್ಣು) ನಂಗೆ ತಿನ್ಲಿಕ್ಕೆ ಕೊಡ್ತೀಯಲ್ಲ..." ಅಂತ ಕನ್ಫರ್ಮ್ ಮಾಡಿಕೊಂಡೇ ನಾನು ಶರ್ತಬದ್ಧವಾಗಿಯೇ ಒಪ್ಪಿಗೆ ಕೊಡುತ್ತಿದ್ದೆ.

"ಪುಟ್ಟಾ... ನಾಳೆ ತುಂಬಾ ಒಳ್ಳೇ ದಿನ. ಯಾರ ಹತ್ರಾನೂ ಜಗಳ ಆಡ್ಬಾರ್ದು, ನಗು ನಗ್ತಾ ಇರ್ಬೇಕು. ಅಳ್ಬಾರ್ದು..." ಇದು ದೊಡ್ಡಮ್ಮನ ಹಿತೋಪದೇಶ. ಆಯ್ದು ದೊಡ್ಡಮ್ಮ, ಆದ್ರೆ ಅಲ್ಲಿ 'ಕಣಿ'ಗೆ ಇಟ್ಟಿರೋ ಗೇರು ಹಣ್ಣು ಮಾತ್ರ ನಂಗೆ ಕೊಡ್ಬೇಕು... ಆಯ್ತಾ... ಅಂತ ದೊಡ್ಡಮ್ಮನ ಕುತ್ತಿಗೆಯ ಸುತ್ತ ಎರಡೂ ಕೈ ಬಳಸಿ, ಒಂದು ಪ್ರೀತಿಯ ಅಪ್ಪುಗೆಯೊಂದಿಗೆ... ಆಡಲು ಕರೆದ ಪಕ್ಕದ್ಮನೆಯ ಮಾಣಿಯ ಜತೆ ಚೆಂಡಾಟಕ್ಕೆ ದೌಡಾಯಿಸ್ತಾ ಇದ್ದೆ. ಮನಸ್ಸಿನಲ್ಲಿ, ನಾಳೆ ಇಡೀ ದಿನ ಯಾರಿಂದ್ಲೂ ಬೈಸಿಕೊಳ್ಳದಿರುವುದು ಹೇಗೆ ಎಂಬ ಯೋಚನೆ ಕಾಡ್ತಾನೇ ಇತ್ತು.

ಅಂದು ಕತ್ತಲೆಯಾಗುತ್ತಿದ್ದಂತೆಯೇ, ಕೈಕಾಲು ತೊಳೆದು, ದೇವರ ದೀಪವನ್ನು ಚೆನ್ನಾಗಿ ಹುಣ್ಸೆ ಹುಳಿ ಹಾಕಿ ಉಜ್ಜಿ, ನಳನಳಿಸುವಂತೆ ಮಾಡಿ, ಅದಕ್ಕೆ ಎಂಟಾಣೆ ನೀಡಿ ಖರೀದಿಸಿ ತಂದಿದ್ದ ಎಳ್ಳೆಣ್ಣೆ ಹುಯ್ಡು ಹಚ್ಚಿದ ಅಮ್ಮ, ಹರಿವಾಣದಲ್ಲಿ 'ವಿಷು ಕಣಿ' ಜೋಡಿಸಲು ತೊಡಗುತ್ತಾಳೆ. ನಾನೂ, ಅಣ್ಣನೂ ಅಮ್ಮ ಏನು ಮಾಡ್ತಾಳೆ ಅಂತ ಬೆರಗುಗಣ್ಣಿನಿಂದಲೇ ನೋಡ್ತಾ... ಕೆಂಪು ಮತ್ತು ಹಳದಿ ಬಣ್ಣದಿಂದ ಕಂಗೊಳಿಸುತ್ತಾ, ಆಕರ್ಷಿಸುತ್ತಿದ್ದ ರಸ ತುಂಬಿದ್ದ ಗೇರು ಹಣ್ಣಿನ ರುಚಿಯ ಬಗ್ಗೆ ಮನದಲ್ಲೇ ಮಂಡಿಗೆ ಮೆಲ್ಲುತ್ತಿದ್ದೆವು.
(ಮುಂದಿನ ಪುಟಕ್ಕೆ ...)
1 | 2  >>  
ಮತ್ತಷ್ಟು
ಚೈತ್ರ ಶುದ್ಧ ಪಾಡ್ಯಮಿಯ ಚಾಂದ್ರಮಾನ ಯುಗಾದಿ
ಯುಗ ಯುಗಾದಿ ಕಳೆದರೂ... ಯುಗಾದಿ ಮರಳಿ ಬಂದಿದೆ
ನೋವು - ನಲಿವಿನ ಯುಗಾದಿ