ಈ ವಾರ ಪಶ್ಚಿಮೋತ್ಥಾನಾಸನ ಹಾಕುವುದನ್ನು ಕಲಿಯೋಣ ಬನ್ನಿ. ಕಳೆದ ವಾರ ಹಿಂದಕ್ಕೆ ಬಾಗುವ ಆಸನವನ್ನು ಕಲಿತಿದ್ದೆವು. ಈ ಬಾರಿ ಕುಳಿತುಕೊಂಡು ಮುಂದಕ್ಕೆ ಬಾಗುವ ಆಸನವನ್ನು ಕಲಿಯುತ್ತಿದ್ದೇವೆ. ಇದು ಪಶ್ಚಿಮ+ಉತ್ಥಾನ+ಆಸನ ಎಂಬುದನ್ನು ಒಳಗೊಂಡಿರುವ ಸಂಯುಕ್ತ ಶಬ್ದ. ಪಶ್ಚಿಮ ಅಂದರೆ ಪಶ್ಚಿಮ ದಿಕ್ಕು ಅಥವಾ ಹಿಂದೆ ಎಂಬರ್ಥ. ಉತ್ಥಾನ ಅಂತರೆ ನಿಗುರು ಅಥವಾ ವಿಸ್ತೃತ ಎಂಬರ್ಥ. ಈ ಆಸನ ಹಾಕುವಾಗ ಇದು ಅಕ್ಷರಶಃ ಅನ್ವಯವಾಗುತ್ತದೆ. ಈ ಆಸನದ ವೇಳೆಗೆ ಬೆನ್ನೆಲುಬನ್ನು ನೇರವಾಗಿ ಚಾಚಲಾಗುತ್ತೆದೆ.
ವಿಧಾನ ಚಾಪೆ ಅಥವಾ ನೆಲಹಾಸಿನ ಮೇಲೆ ಕುಳಿತು ನಿಮ್ಮ ಕಾಲುಗಳನ್ನು ಮುಂದಕ್ಕೆ ಚಾಚಿ. ಬೆನ್ನೆಲುಬು ನೆಟ್ಟಗಿರಿಸಲು ಪ್ರಯತ್ನಿಸಿ. ಪಾದಗಳು ಜತೆಗಿರಬೇಕು ಮತ್ತು ಮೊಣಕಾಲುಗಳು ಬಾಗಬಾರದು.
ಎರಡೂ ಕೈಗಳನ್ನು ಮುಂದಕ್ಕೆ ಚಾಚಿ ಮತ್ತು ಉಸಿರು ಒಳಗೆಳೆದುಕೊಳ್ಳುವ ವೇಳೆ ನಿಮ್ಮ ಕೈಗಳನ್ನು ಭುಜಕ್ಕಿಂತ ಮೇಲೆತ್ತಿ. ಬೆನ್ನನ್ನು ನೀಳವಾಗಿಸಿ, ಉಸಿರು ಬಿಡುತ್ತಾ ಸೊಂಟದಿಂದಲೇ ಮುಂದಕ್ಕೆ ಬಾಗಿ. ಕಾಲ್ಬೆರಳು, ಹಿಮ್ಮಡಿ ಅಥವಾ ಪಾದ ಎಲ್ಲಿಗೆ ನಿಮ್ಮ ಕೈ ತಲುಪುತ್ತದೆಯೋ ಅದನ್ನು ಹಿಡಿದುಕೊಳ್ಳಿ.
ನಿಮ್ಮ ಕೈಗಳು ಕಾಲ್ಬೆರಳುಗಳನ್ನು ತಲುಪದಿದ್ದಲ್ಲಿ, ನೀವು ಮೇಲ್ಚಾಚಿರುವ ನಡು ಪಾದಗಳನ್ನು ಹಿಡಿದುಕೊಳ್ಳಬಹುದು. ಪಾದಗಳನ್ನು ಹಿಡಿದುಕೊಳ್ಳುವ ವೇಳೆ ಮೊಣಕೈಗಳನ್ನು ನೇರವಾಗಿಸಿ, ಲಘವಾಗಿ ಬಾಗಿಸಿ. ಅಭ್ಯಾಸದಿಂದ ನೀವು ಮೊಣಕಾಲುಗಳನ್ನು ನೆಟ್ಟಿಗಿರಿಸಬಹುದು.
ಉಸಿರನ್ನು ಒಳಗೆಳೆದುಕೊಳ್ಳುವ ವೇಳೆ ಬೆನ್ನು ಮೂಳೆಯನ್ನು ವಿಸ್ತರಿಸಿ. ಉಸಿರು ಬಿಡುವ ವೇಳೆ ಎದೆಯನ್ನು ಒಳಗೆಳೆದುಕೊಳ್ಳಿ. ಸುಮಾರು ಆರರಿಂದ ಎಂಟು ಬಾರಿ ಉಸಿರಾಡುವ ತನಕ ಈ ಭಂಗಿಯಲ್ಲಿರಿ.
ಈ ಭಂಗಿಯಲ್ಲಿರುವ ವೇಳೆಗೆ ನಿಮ್ಮ ಗಮನ ಸಂಪೂರ್ಣ ಚಾಚಿದ ಮತ್ತು ಉಸಿರಾಟದ ಮೇಲಿರಲಿ. ದೇಹದ ಅಂಗಗಳ ಕುರಿತು ಜಾಗೃತರಾಗಿದ್ದಲ್ಲಿ ನೀವು ಯಾವುದೇ ಗಾಯಗಳನ್ನು ತಡೆಯಬಹುದು.
ಈ ಆಸನದಿಂದ ಮುಕ್ತರಾಗಲು, ಉಸಿರನ್ನು ಬಿಡುತ್ತಾ ಕೈಗಳನ್ನು ಹೊರಚಾಚಿ. ಬೆನ್ನನ್ನು ನೆಟ್ಟಗಾಗಿಸಿ. ಉಸಿರು ಬಿಡುತ್ತಾ ಕೈಗಳನ್ನು ಮುಕ್ತವಾಗಿಸಿ ಮತ್ತು ಒಂದೆರಡು ಉಸಿರಿನ ತನಕ ವಿಶ್ರಾಂತಿ ಪಡೆಯಿರಿ.
ಎಚ್ಚರಿಕೆ: ಈ ಭಂಗಿಯು ಬೆನ್ನು ಮೂಳೆಯನ್ನು ಮೇಲಿನಿಂದ ಕೆಳಗಿನ ತನಕ ನಿಗುರಿಸುತ್ತದೆ. ಬೆನ್ನುಮೂಳೆ ಗಾಯಗಳೇನಾದರೂ ಇದ್ದಲ್ಲಿ ಎಚ್ಚರಿಕೆ ವಹಿಸಿ ಮತ್ತು ಮುಂದಕ್ಕೆ ಆಳವಾಗಿ ಬಾಗದಿರಿ. ಗರ್ಭಿಣಿಯರು ಈ ಆಸನವನ್ನು ಆಭ್ಯಾಸ ಮಾಡುವುದಾದರೆ ಕಾಲುಗಳನ್ನು ಅಗಲಕ್ಕಿರಿಸಿ. ಸ್ಲಿಪ್ ಡಿಸ್ಕ್, ಬೇಧಿ ಅಥವಾ ಸೊಂಟ ನೋವು ಇದ್ದಲ್ಲಿ ಈ ಭಂಗಿ ಬೇಡ.
ಅನುಕೂಲಗಳು ಈ ಆಸನವನ್ನು ಮಾಡುವುದರಿಂದ ಬೆನ್ನು ಹುರಿಗೆ ಉತ್ತಮವಾದ ವ್ಯಾಯಾಮ ಒದಗುತ್ತದೆ. ಅಂತೆಯೇ ಕಿಬ್ಬೊಟ್ಟೆಯೊಳಗಿನ ಅಂಗಾಂಗಗಳಿಗೂ ವ್ಯಾಯಾಮ ಲಭಿಸಿ ಬೊಜ್ಜು ಕರಗಿಸಲು ಸಹಕಾರಿಯಾಗುತ್ತದೆ.
|