ನವದೆಹಲಿ: ತಮ್ಮ ವೀಸಾ ಅರ್ಜಿಯ ಸ್ಥಿತಿಗತಿಯನ್ನು ತಿಳಿಯುವ ಸಲುವಾಗಿ ಸ್ಪೈಸ್ ಟೆಲಿಕಾಂ ನೂತನ ಸ್ಪೈಸ್ 'ವಿಸಾ ಸ್ಟೇಟಸ್' ಸೇವೆಯನ್ನು ಪ್ರಾರಂಭಿಸಿರುವುದಾಗಿ ಪ್ರಕಟಿಸಿದೆ. ಈ ಸೇವೆಯ ಮುಖಾಂತರ ಅಮೆರಿಕ, ಯುಕೆ, ಕೆನಡ ಮತ್ತು ಆಸ್ಟ್ರೇಲಿಯಾ ಒಳಗೊಂಡಂತೆ ಹತ್ತಕ್ಕೂ ಹೆಚ್ಚು ದೇಶಗಳ ವಿಸಾ ಮಾಹಿತಿಯನ್ನು ಎಸ್ಎಂಎಸ್(ಶಾರ್ಟ್ ಮೇಲ್ ಸರ್ವಿಸ್) ಮೂಲಕ ಪಡೆಯಬಹುದು ಎಂದು ಕಂಪನಿ ತಿಳಿಸಿದೆ.
ಮೊಬೈಲ್ ಮೂಲಕ ಹಲವಾರು ಸೇವೆ ಒದಗಿಸುತ್ತಿರುವ ಸ್ಪೈಸ್‌ನಿಂದ ಇದು ಇನ್ನೊಂದು ಸೇವೆಯಾಗಿದೆ. ಕೇವಲ ಎಸ್ಎಂಎಸ್ ಮೂಲಕ ಮಾಹಿತಿ ಪಡೆಯ ಬಹುದಾದ ಈ ಸೇವೆಯು ಗ್ರಾಹಕರಿಗೆ ಹೆಚ್ಚು ಅನುಕೂಲಕರವಾಗಿದೆ ಎಂದು ಸ್ಪೈಸ್ ಟೆಲಿಕಾಂನ ಮಾರ್ಕೆಟಿಂಗ್ ವಿಭಾಗದ ಉಪಾಧ್ಯಕ್ಷ ಮುಕುಲ್ ಖನ್ನಾ ಮಂಗಳವಾರದಂದು ನವದೆಹಲಿಯಲ್ಲಿ ತಿಳಿಸಿದರು. ಸ್ಪೈಸ್‌ನ ಎಲ್ಲಾ ಪೋಸ್ಟ್‌ಪೇಯ್ಡ್ ಮತ್ತು ಪ್ರಿಪೇಯ್ಡ್ ಗ್ರಾಹಕರಿಗೆ ಈ ಸೇವೆಗಾಗಿ ಪ್ರತಿ ಎಸ್ಎಂಎಸ್‌ಗೆ 13 ರೂ.ಗಳನ್ನು ವಿಧಿಸಲಾಗುತ್ತದೆ. ಮೋದಿ ವೆಲ್‌ವೆಸ್ಟ್ ಪ್ರೈವೆಟ್ ಲಿಮಿಟೆಡ್ ಪ್ರಾಯೋಜಿತ ಸ್ಪೈಸ್ ಟೆಲಿಕಾಂ ಪ್ರಸ್ತುತ ಪಂಜಾಬ್ ಮತ್ತು ಕರ್ನಾಟಕದಲ್ಲಿ ಮೊಬೈಲ್ ಫೋನ್ ಸೇವೆಯನ್ನು ನೀಡುತ್ತಿದೆ ಎಂದು ಕಂಪನಿಯ ತಿಳಿಸಿದೆ.
|