ಬ್ಯಾಂಕಿಂಗ್ ಕಂಪೆನಿಗಳಲ್ಲಿ ವಿದೇಶಿ ಹೂಡಿಕೆದಾರರಿಗೆ ಶೇ. 74ರಷ್ಟು ಶೇರು ಹೊಂದಲು ಅನುಮತಿ ನೀಡುವ ಕುರಿತ ಕೇಂದ್ರ ಸರಕಾರದ ನಿರ್ಧಾರದ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿರುದ್ಧ ಯಾವುದೇ ಮಧ್ಯಂತರ ಆದೇಶ ಜಾರಿ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅದಾಗ್ಯೂ, ಮುಖ್ಯ ನ್ಯಾಯಾಧೀಶ ಬಾಲಕೃಷ್ಣನ್ ಮತ್ತು ನ್ಯಾಯಾಧೀಶ ಎಂ.ಕೆ. ಶರ್ಮಾ ನೇತೃತ್ವದ ಪೀಠವು ಈ ವಿಚಾರವಾಗಿ ಖಾಸಗಿ ವಲಯದ ಡಿಸಿಬಿ ಬ್ಯಾಂಕಿನ ಬಾಧಿತ ಶೇರುದಾರ ಸಲೀಂ ಅಕ್ಬರಲಿ ನಂಜಿ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಶೀಘ್ರದಲ್ಲೇ ವಿಲೇವಾರಿ ಮಾಡುವಂತೆ ಮುಂಬೈ ಹೈಕೋರ್ಟ್‌ಗೆ ಆದೇಶ ನೀಡಿದೆ.
ಕಾರ್ಪೊರೇಟ್ ಕಂಪೆನಿಗಳಿಗೆ ಮತ್ತು ವಿದೇಶಿ ಹೂಡಿಕೆದಾರರಿಗೆ 310 ಕೋಟಿ ರೂಪಾಯಿಗಳ ಆದ್ಯತಾ ಶೇರುಗಳನ್ನು ವಿತರಿಸಲು ಡಿಸಿಬಿ ಬ್ಯಾಂಕ್‌ಗೆ ಅನುಮತಿಸುವ ನಿಟ್ಟಿನಲ್ಲಿ ಆರ್‌ಬಿಐ ಅನುಮೋದನೆ ಪತ್ರ ನೀಡಿದ ನಿರ್ಧಾರವನ್ನು ಪ್ರಶ್ನಿಸಿ ನಂಜಿ ಹೈ ಕೋರ್ಟಿಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ರಿಟ್ ಅರ್ಜಿಯನ್ನು ಸ್ವೀಕರಿಸಿದ ಹೈ ಕೋರ್ಟ್, ಮಧ್ಯಂತರ ತಡೆ ನೀಡುವಂತೆ ಸಲ್ಲಿಸಿದ್ದ ಅವರ ಮನವಿಯನ್ನು ತಿರಸ್ಕರಿಸಿದ ಹಿನ್ನಲೆಯಲ್ಲಿ ನಂಜಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
|