ಭಾರತೀಯರಿಗೆ ಸೆಕ್ಸ್ ತುಂಬಾ ಗೊತ್ತಿಲ್ದಿದ್ರೂ ಅನುಭವಿಸ್ತಾರೆ..!
ನವದೆಹಲಿ, ಬುಧವಾರ, 14 ಅಕ್ಟೋಬರ್ 2009( 16:57 IST )
ಸೆಕ್ಸ್ ಕುರಿತು ಹೆಚ್ಚಿನ ಸಲಹೆ ಮತ್ತು ಮಾಹಿತಿಗಳನ್ನು ಭಾರತೀಯರು ಪಡೆಯದಿರಬಹುದು; ಆದರೆ ಅವರು ತಮ್ಮ ಲೈಂಗಿಕ ಜೀವನವನ್ನು ಸಂಪೂರ್ಣವಾಗಿ ಆನಂದದಿಂದ ಅನುಭವಿಸುತ್ತಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.
ಕಾಂಡೋಮ್ ತಯಾರಿಕಾ ಕಂಪನಿ 'ಡ್ಯೂರೆಕ್ಸ್' ಜಾಗತಿಕವಾಗಿ ನಡೆಸಿದ 'ಲೈಂಗಿಕ ಉತ್ಕರ್ಷ ಜಾಗತಿಕ ಸಮೀಕ್ಷೆ'ಯಲ್ಲಿ ಈ ವಿಚಾರವನ್ನು ತಿಳಿಸಲಾಗಿದೆ.
26 ರಾಷ್ಟ್ರಗಳಲ್ಲಿ ಈ ಶೃಂಗಾರ ಸಮೀಕ್ಷೆಯನ್ನು ನಡೆಸಲಾಗಿದ್ದು, ಮೆಕ್ಸಿಕೋದವರು ಲೈಂಗಿಕವಾಗಿ ಅತೀ ಹೆಚ್ಚು ಸಂತೃಪ್ತರು ಎಂದು ಡ್ಯೂರೆಕ್ಸ್ ತಿಳಿಸಿದೆ.
ತನ್ನ ಶೃಂಗಾರ ಜೀವನವನ್ನು ಸಂಪೂರ್ಣವಾಗಿ ಆನಂದಿಸಲು ಸಾಕಷ್ಟು ಸಲಹೆ ಮತ್ತು ಮಾಹಿತಿಗಳು ಲಭ್ಯವಿದೆ ಎಂದು ಶೇ.80ರಷ್ಟು ಮೆಕ್ಸಿಕನ್ ಪ್ರಜೆಗಳು ಒಪ್ಪಿಕೊಂಡಿದ್ದಾರೆ.
ಭಾರತದ ಶೇ.82ರಷ್ಟು ಪುರುಷ ಮತ್ತು ಮಹಿಳೆಯರು ತಾವು ಸೆಕ್ಸ್‌ನ್ನು ಸಂಪೂರ್ಣವಾಗಿ ಅನುಭವಿಸಲು ಸಾಕಷ್ಟು ಮಾಹಿತಿಯನ್ನು ಹೊಂದಿದ್ದೇವೆ ಮತ್ತು ತಮ್ಮ ಲೈಂಗಿಕ ಉತ್ಕರ್ಷವು ತೃಪ್ತಿ ತಂದಿದೆ ಎಂದು ಹೇಳಿಕೊಂಡಿದ್ದಾರೆ.
ಅದೇ ವೇಳೆ ಶೇ.52ರಷ್ಟು ಭಾರತೀಯರು ತಮಗೆ ಸೆಕ್ಸ್ ಬಗ್ಗೆ ಸಾಕಷ್ಟು ಸಲಹೆ ಮತ್ತು ಮಾಹಿತಿಗಳು ಲಭ್ಯವಿದೆ ಎಂದು ತಿಳಿಸಿದ್ದಾರೆಂದು ಸಮೀಕ್ಷೆ ವಿವರಿಸಿದೆ.
ಆಸಕ್ತಿದಾಯಕ ವಿಚಾರವೆಂದರೆ ತಾವು ತಮ್ಮ ಸೆಕ್ಸ್ ಜೀವನವನ್ನು ಭರಪೂರವಾಗಿ ಅನುಭವಿಸಲು ಸಾಕಷ್ಟು ಮಾಹಿತಿಯನ್ನು ಹೊಂದಿದ್ದೇವೆ ಎಂದು ತಿಳಿಸಿರುವ ಜನರ ಅಗ್ರ ಸ್ಥಾನ ಪಡೆದಿರುವ 12 ದೇಶಗಳಲ್ಲಿ ಭಾರತ ಸ್ಥಾನ ಪಡೆಯದೇ ಇರುವುದು.
ತಾವು ಹೊಂದಿರುವ ಸೆಕ್ಸ್ ಮಾಹಿತಿ ಕುರಿತು ಸಂತೃಪ್ತಿ ವ್ಯಕ್ತಪಡಿಸಿರುವ ದೇಶಗಳು ಹೀಗಿವೆ. ಮೆಕ್ಸಿಕೋ - ಶೇ.80, ಸ್ಪೇನ್ - ಶೇ.76, ಬ್ರೆಜಿಲ್ - ಶೇ.74, ದಕ್ಷಿಣ ಆಫ್ರಿಕಾ - ಶೇ.66, ಕೆನಡಾ - ಶೇ.65, ನೆದರ್ಲೆಂಡ್ - ಶೇ.65, ಅಮೆರಿಕಾ - ಶೇ.62, ಫ್ರಾನ್ಸ್ - ಶೇ.62.
ಭಾರತದಲ್ಲಿನ ಶೇ.59ರಷ್ಟು ಮಂದಿ ತಮ್ಮ ಗೆಳೆಯರ ಹಾಗೂ ಶೇ.58ರಷ್ಟು ಮಂದಿ ನಿಯತಕಾಲಿಕಗಳ ಸಹಾಯದಿಂದ ಸೆಕ್ಸ್ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ.
ಭಾರತದ ಶೇ.48ರಷ್ಟು ಮಹಿಳೆಯರು ತಮ್ಮ ಸೆಕ್ಸ್ ಜೀವನದಲ್ಲಿ ಭಾವನೆಗಳಿಗೆ ಹೆಚ್ಚಿನ ಮಹತ್ವ ಕೊಡುವುದನ್ನು ಇಚ್ಛಿಸುತ್ತಾರೆ. ಈ ವಿಚಾರದಲ್ಲಿ ಪುರುಷರು ಕೂಡ ತೀರಾ ಹಿಂದೇನೂ ಬಿದ್ದಿಲ್ಲ. ಅವರ ಪ್ರಕಾರ ಶೇ.42ರಷ್ಟು ಮಂದಿ ಇದನ್ನೇ ಒತ್ತಿ ಹೇಳುತ್ತಾರೆ.
16ರಿಂದ 24ರ ಹರೆಯದ ಶೇ.46ರಷ್ಟು ಯುವಕರಿಗೆ ಇನ್ನಷ್ಟು ಸೆಕ್ಸ್ ಮಾಹಿತಿ ಬೇಕೆಂದು ಅನ್ನಿಸುತ್ತಿದೆಯಂತೆ. ಇದು 35ರಿಂದ 44ರ ಹರೆಯದವರಲ್ಲೂ ಇಷ್ಟೇ ಪ್ರಮಾಣದಲ್ಲಿ ಕಂಡು ಬಂದಿದೆ ಎಂದು ಡ್ಯೂರೆಕ್ಸ್ ತನ್ನ ಸಮೀಕ್ಷೆಯಲ್ಲಿ ತಿಳಿಸಿದೆ.