ಸರ್ಚ್ ಇಂಜಿನ್ ದೈತ್ಯ ಗೂಗಲ್‌ನ 'ಜೀಮೇಲ್' ಇದೀಗ ಭಾರತದಲ್ಲಿ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಇ-ಮೇಲ್ ಸೇವಾದಾರ ಎಂಬ ಖ್ಯಾತಿಗೊಳಗಾಗಿದೆ. ಜಿಮೇಲ್ ಇದೀಗ 1.8 ಕೋಟಿ ಗ್ರಾಹಕರನ್ನು ಹೊಂದಿದೆ ಎಂದು 'ವಿಜಿಸೆನ್ಸ್' ನಡೆಸಿರುವ ಸಮೀಕ್ಷೆಯಲ್ಲಿ ತಿಳಿಸಿದೆ.
ಕಳೆದ ತಿಂಗಳವರೆಗೂ ಮೊದಲ ಸ್ಥಾನದಲ್ಲಿ ಯಾಹೂ ಮೇಲ್ ಸ್ಥಾನ ಪಡೆದಿತ್ತು. ಆದರೆ ಇದೀಗ ಯಾಹೂ ಮೇಲ್ ಸೇವಾದಾರ ಸಂಸ್ಥೆಯನ್ನು ಜಿಮೇಲ್ ಹಿಂದಿಕ್ಕಿದೆ.
ಸೆಪ್ಟೆಂಬರ್ ತಿಂಗಳಿನ ಅಂಕಿ ಅಂಶಗಳ ಪ್ರಕಾರ ಜಿಮೇಲ್ ಶೇ.3ರಷ್ಟು ಹೆಚ್ಚುವರಿ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದರೊಂದಿಗೆ ಭಾರತದಲ್ಲಿ ಅತೀ ಜನಪ್ರಿಯ ಇ-ಮೇಲ್ ಸೇವಾದಾರ ಸಂಸ್ಥೆಯೆಂಬ ಗರಿ ಜಿಮೇಲ್ ಮುಡಿಗೇರಿದೆ.
ಯಾಹೂ ಮೇಲ್ ಪ್ರಸಕ್ತ 1.68 ಕೋಟಿ ಬಳಕೆದಾರರನ್ನು ಹೊಂದಿದೆ. ಕಳೆದ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಿದರೆ ಯಾಹೂ ಮೇಲ್ ಶೇ.8ರ ಕುಸಿತ ಕಂಡಿದೆ.
ಮೂರನೇ ಸ್ಥಾನದಲ್ಲಿರುವ ರೀಡಿಫ್ ಮೇಲ್ 62.5 ಲಕ್ಷ ಗ್ರಾಹಕರನ್ನು ಹೊಂದಿದ್ದರೆ, ಎಂಎಸ್ಎನ್ ಮೇಲ್ 41.1 ಲಕ್ಷ ಬಳಕೆದಾರರನ್ನು ಹೊಂದಿದೆ ಎಂದು ಸಮೀಕ್ಷೆಯಲ್ಲಿ ವಿವರಿಸಲಾಗಿದೆ. ಐದನೇ ಸ್ಥಾನದಲ್ಲಿರುವ ಇನ್.ಕಾಮ್ ಮೇಲ್ 8.37 ಲಕ್ಷ ಗ್ರಾಹಕರನ್ನು ಹೊಂದಿದೆ.
ರೀಡಿಫ್ ಮೇಲ್ ಶೇ.7ರಷ್ಟು ಗ್ರಾಹಕರನ್ನು ಕಳೆದುಕೊಂಡಿರುವುದನ್ನು ಕೂಡ ಈ ವಿಜಿಸೆನ್ಸ್ ಬಹಿರಂಗಪಡಿಸಿದೆ. ರೀಡಿಫ್ ಇತ್ತೀಚೆಗಷ್ಟೇ ತನ್ನ ನೂತನ ಮೇಲ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.
ಯಾಹೂ ಸಂಸ್ಥೆಯು ಭಾರತದ ಬಹುತೇಕ ಮುಂಚೂಣಿಯ ಪತ್ರಿಕೆಗಳಲ್ಲಿ ಪೂರ್ಣ ಪುಟದ ಜಾಹಿರಾತು ಕೂಡ ನೀಡಿತ್ತು. ಜಿಮೇಲ್‌ಗೆ ವಲಸೆ ಹೋಗುತ್ತಿರುವ ತನ್ನ ಬಳಕೆದಾರರನ್ನು ಸೆಳೆಯಲು ಯಾಹೂ ಮೇಲ್ ಯತ್ನಿಸುತ್ತಿದೆ ಎಂದು ಉದ್ಯಮ ವಲಯ ಇದಕ್ಕೆ ಪ್ರತಿಕ್ರಿಯಿಸಿದೆ.