ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಭಾರತದ 3ಜಿ ಚಂದಾದಾರರ ಸಂಖ್ಯೆಯು ಒಂಬತ್ತು ಕೋಟಿಗೆ ಮುಟ್ಟಬಹುದೆಂದು ಹೇಳಿರುವ ಉದ್ಯಮದ ಮುಂಚೂಣಿ ಸಂಸ್ಥೆಯೊಂದು, ಮೌಲ್ಯವರ್ಧಿತ ಸೇವೆಗಳ (ವಿಎಎಸ್) ಮಾರುಕಟ್ಟೆಯಲ್ಲಿ ಕಂಪನಿಗಳು ಅಪಾರ ಆದಾಯ ಹೊಂದಲಿವೆಯೆಂದು ಅಭಿಪ್ರಾಯಪಟ್ಟಿದೆ.
'2013ರೊಳಗೆ ಭಾರತದ 3ಜಿ ಗ್ರಾಹಕರ ಸಂಖ್ಯೆಯು 90 ಮಿಲಿಯನ್ ಮುಟ್ಟುವ ಸಾಧ್ಯತೆಯಿದೆ. ಅಂದಾಜುಗಳ ಪ್ರಕಾರ 2010-11ರ ಅವಧಿಯಲ್ಲಿ ಶೇ.5ರಿಂದ 7ರಷ್ಟು ಮೊಬೈಲ್ ಹ್ಯಾಂಡ್‌ಸೆಟ್‌ಗಳಲ್ಲಿ 3ಜಿ ಸೇವೆ ಲಭ್ಯವಾಗಬಹುದು. ಇದು 3ಜಿ ವಲಯದಲ್ಲಿನ ಎಲ್ಲಾ ಸಂಸ್ಥೆಗಳಿಗೂ ಭಾರೀ ಅವಕಾಶಗಳನ್ನು ನೀಡಲಿದೆ' ಎಂದು 'ನಝರ್ ಟೆಕ್ನಾಲಜೀಸ್' ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನಿತೀಶ್ ಮಿತ್ತರ್ಸೈನ್ ತಿಳಿಸಿದ್ದಾರೆ.
ನಝರ್ ಟೆಕ್ನಾಲಜೀಸ್ ಸಂಸ್ಥೆಯು ಮೊಬೈಲ್‌ಗಳಿಗೆ ಗೇಮ್ಸ್ ಮತ್ತಿತರ ಒಳಾಂಶಗಳನ್ನು ಪೂರೈಸುವ ಸಂಸ್ಥೆಯಾಗಿದ್ದು, 3ಜಿ ಜಾರಿಗೆ ಬಂದ ಮೊದಲ ವರ್ಷದಲ್ಲೇ ಮೊಬೈಲ್ ಗೇಮ್ಸ್‌ಗಳಿಂದ 100 ಕೋಟಿ ರೂಪಾಯಿಗಳ ಆದಾಯ ಗಳಿಸುವ ನಿರೀಕ್ಷೆಯಿಂದಿದೆ.
ಕಾಲರ್ ಟ್ಯೂನ್‌ಗಳು, ಆಡ್ ಟ್ಯೂನ್‌ಗಳು, ಲೈವ್ ಟೀವಿ, ವೀಡಿಯೋ ಸೌಲಭ್ಯ ಮತ್ತು ಗೇಮ್ಸ್ ಮುಂತಾದ ತಂತ್ರಾಂಶಗಳನ್ನು ನಝರ್ ಒದಗಿಸುತ್ತದೆ ಎಂದು ನಿತೀಶ್ ವಿವರಣೆ ನೀಡಿದ್ದಾರೆ.
ಮೊಬೈಲ್‌ಗಳಲ್ಲಿ ಮಲ್ಟಿಮೀಡಿಯಾ ಸೌಲಭ್ಯ ಲಭ್ಯವಾದಲ್ಲಿ ಮೊಬೈಲ್ ಜಾಹಿರಾತುಗಳ ಪ್ರಮಾಣದಲ್ಲಿ ಪ್ರಗತಿ ಕಂಡು ಬರಬಹುದು ಎಂದು ಅವರು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟರು.
ಭಾರತದ ಸುಮಾರು 40 ಕೋಟಿ ಜನರೀಗ ಮೊಬೈಲ್ ಹೊಂದಿದ್ದಾರೆ. ಧ್ವನಿ ಸೌಲಭ್ಯವೆನ್ನುವುದೀಗ ತೀರಾ ಅಗ್ಗವೆನಿಸಿದೆ. ಮೌಲ್ಯವರ್ಧಿತ ತಂತ್ರಾಂಶಗಳೊಂದಿಗೆ 3ಜಿಯು ಪರ್ಯಾಯತೆಯನ್ನು ಸೃಷ್ಟಿಸಲಿದೆ ಎಂದು ಅವರು ತಿಳಿಸಿದರು.
ಭಾರತವು 3ಜಿ ಮೊಬೈಲ್ ಸೇವೆಗಳ ತರಂಗಾಂತರಗಳನ್ನು ರಾಷ್ಟ್ರೀಯ, ಖಾಸಗಿ ಮತ್ತು ವಿದೇಶಿ ಸಂಸ್ಥೆಗಳಿಗೆ ಇದೇ ಹಣಕಾಸು ವರ್ಷದಲ್ಲಿ ಹರಾಜಿನಲ್ಲಿ ಮಾರಾಟ ಮಾಡಲಿದೆ ಎಂದು ದೂರವಾಣಿ ಸಚಿವ ಎ. ರಾಜಾ ನುಡಿದಿದ್ದಾರೆ.
ಪ್ರಸಕ್ತ ರಾಷ್ಟ್ರೀಯ ದೂರವಾಣಿ ಸಂಸ್ಥೆಗಳಾದ ಬಿಎಸ್ಎನ್ಎಲ್ ಮತ್ತು ಎಂಟಿಎನ್ಎಲ್‌ಗಳು 3ಜಿ ಸೇವೆಗಳನ್ನು ದೇಶದ ಆಯ್ದ ವಲಯಗಳಾದ ಮುಂಬೈ, ದೆಹಲಿ ಮತ್ತು ರಾಷ್ಟ್ರೀಯ ರಾಜಧಾನಿ ವಲಯಗಳಲ್ಲಿ ನೀಡುವ ಕುರಿತು ಯೋಜನೆಗಳನ್ನು ರೂಪಿಸುತ್ತಿದೆ.