ಅಹಮದಾಬಾದ್, ಶುಕ್ರವಾರ, 16 ಅಕ್ಟೋಬರ್ 2009( 13:16 IST )
ಬ್ಯಾಂಕ್ ಎಟಿಎಂ ಪ್ರಮಾದದಿಂದಾಗಿ ಬಡಗಿಯೊಬ್ಬ ಇದ್ದಕ್ಕಿದ್ದಂತೆ ಬಹು ಕೋಟ್ಯಧಿಪತಿಯಾದ ಪ್ರಸಂಗವೊಂದು ಬೆಳಕಿಗೆ ಬಂದಿದೆ. ಆದರೆ ಪ್ರಾಮಾಣಿಕತೆ ಮೆರೆದ ಆತ ಬ್ಯಾಂಕಿನವರನ್ನು ಸಂಪರ್ಕಿಸಿ 'ತಪ್ಪ'ನ್ನು ಸರಿಪಡಿಸಿಕೊಂಡಿದ್ದಾನೆ.
32ರ ಹರೆಯದ ಜುಗಲ್ ಕಿಶೋರ್ ಜಂಗಿದ್ ಎಂಬಾತನೇ ಈ ಪ್ರಾಮಾಣಿಕತೆ ಮೆರೆದ ವ್ಯಕ್ತಿ. ದೀಪಾವಳಿ ಹಿನ್ನಲೆಯಲ್ಲಿ ಗುರುವಾರ ಬೆಳಿಗ್ಗೆ ಆತ ತನ್ನ ಕೆಲಸದವರಿಗೆ ಬೇಗ ಸಂಬಳ ಕೊಡಬೇಕೆಂದು ಅಹಮದಾಬಾದ್‌ನ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಎಟಿಎಂಗೆ ಧಾವಿಸಿದ್ದ.
ಎಟಿಎಂ ಖಾತೆಯನ್ನು ತೆರೆದು ನೋಡಿದಾಗ ಆತನಿಗೆ ಅಚ್ಚರಿ ಮೇಲೆ ಅಚ್ಚರಿ. ಎರಡೂವರೆ ಲಕ್ಷ ರೂಪಾಯಿಗಳನ್ನು ಹೊಂದಿದ್ದ ಆತನ ಖಾತೆಗೆ ಬರೋಬ್ಬರಿ 59.30 ಕೋಟಿ ರೂಪಾಯಿ ಜಮಾ ಆಗಿತ್ತು. ಈ ಹೆಚ್ಚುವರಿ ಹಣ ಎಲ್ಲಿಂದ ಬಂತು ಎಂಬುದನ್ನು ಯೋಚಿಸಿದ ಕಿಶೋರ್ ಸುಸ್ತಾಗಿ ಹೋಗಿದ್ದ.
ಬಹುಶಃ ಇದು ಎಟಿಎಂ ದೋಷವಿರಬಹುದೆಂದುಕೊಂಡ ಕಿಶೋರ್ ಮತ್ತೊಂದು ಎಟಿಎಂಗೆ ಹೋಗಿ ಪರಿಶೀಲಿಸಿದಾಗಲೂ ಫಲಿತಾಂಶ ಅದೇ. ಕಕ್ಕಾಬಿಕ್ಕಿಯಾದ ಕಾರ್ಪೆಂಟರ್ ತನ್ನ ನೌಕರರಿಗೆ ಕೊಡಬೇಕಾಗಿರುವ ವೇತನಕ್ಕಾಗಿ 20,000 ರೂಪಾಯಿಗಳನ್ನು ಖಾತೆಯಿಂದ ಪಡೆಯಲೂ ಹಿಂಜರಿದ.
ಬ್ಯಾಂಕುಗಳು ಬೆಳಿಗ್ಗೆ 10.30ರ ನಂತರವೇ ತೆರೆಯುವುದರಿಂದ ಗುಜರಾತ್ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿಗೆ (ಜಿಸಿಸಿಐ) ಮಾಹಿತಿ ನೀಡುವುದೇ ಉತ್ತಮ ಎಂಬ ಸಲಹೆ ಗೆಳೆಯರನ್ನು ಸಂಪರ್ಕಿಸಿದಾಗ ಬಂತು. ಜಿಸಿಸಿಐ ಸದಸ್ಯ ದುರ್ಗೇಶ್ ಬುಚ್ ಎಂಬಾತನ್ನು ಸಂಪರ್ಕಿಸಿದ ಬಳಿಕ ಆತ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದ.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಮುಖ್ಯ ಉಪ ವ್ಯವಸ್ಥಾಪಕ ಎ.ಕೆ. ರಾಯ್ ಚೌಧುರಿಯವರು ಈ ಬಗ್ಗೆ ತ್ವರಿತ ಕ್ರಮಗಳನ್ನು ಕೈಗೊಂಡ ನಂತರ, 'ಇದೊಂದು ತಾಂತ್ರಿಕ ಪ್ರಮಾದ' ಎಂಬುದನ್ನು ಸ್ಪಷ್ಟಪಡಿಸಿದರು.
ಪ್ರಾಮಾಣಿಕತೆ ಮೆರೆದ ಕಿಶೋರ್‌ರನ್ನು ಇದೀಗ ಬ್ಯಾಂಕ್ ಸಾರ್ವಜನಿಕ ಸಮಾರಂಭವೊಂದರಲ್ಲಿ ಸನ್ಮಾಸಿಸಲು ತೀರ್ಮಾನಿಸಿದೆ.