ಲಾಸ್ ಎಂಜಲೀಸ್, ಶುಕ್ರವಾರ, 16 ಅಕ್ಟೋಬರ್ 2009( 16:44 IST )
ಅಮೆರಿಕಾದ ಆರು ವರ್ಷದ ಬಾಲಕನೊಬ್ಬ ಗುರುವಾರ ದೇಶ-ವಿದೇಶಗಳ ಮಾಧ್ಯಮ ಹಾಗೂ ಪೊಲೀಸರನ್ನು 'ಕುಣಿಸಿದ' ಪ್ರಸಂಗ ವರದಿಯಾಗಿದೆ.
ಬಲೂನ್ ಒಂದರಲ್ಲಿ ಈ ಬಾಲಕ ಆಕಾಶಕ್ಕೆ ಹಾರಿದ್ದಾನೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಿಗೆ ಮಾಧ್ಯಮಗಳು ಹೆಲಿಕಾಫ್ಟರುಗಳೊಂದಿಗೆ ನೇರ ಪ್ರಸಾರ ಆರಂಭಿಸಿದ್ದವು. ಅಮೆರಿಕಾ ಪೊಲೀಸ್ ಇಲಾಖೆ, ಅಗ್ನಿಶಾಮಕ ದಳಗಳು ಕೂಡ ತಮ್ಮ ಹೆಲಿಕಾಫ್ಟರ್ ಹಾಗೂ ಇತರ ವಾಹನಗಳೊಂದಿಗೆ ರಕ್ಷಣಾ ಕ್ರಮಕ್ಕೆ ಮುಂದಾಗಿದ್ದವು. ಈ ಪ್ರಹಸನ ಅಂತ್ಯಗೊಂಡದ್ದು ಬಾಲಕ ಮನೆಯೊಳಗೆ ಪತ್ತೆಯಾದ ನಂತರ!
ಘಟನೆ ನಡೆದದ್ದು ಹೀಗೆ.. ಆರರ ಹರೆಯದ ಫಾಲ್ಕನ್ ಹೀನ್ ಎಂಬ ಬಾಲಕ ಗುರುವಾರ ಬೆಳಿಗ್ಗೆ 11 ಗಂಟೆಗೆ ಕಾಣೆಯಾಗಿದ್ದ. ಹೊರಗಡೆಯಿದ್ದ ಬಲೂನ್‌ಗೆ ಕಟ್ಟಲ್ಪಟ್ಟಿದ್ದ ಪೆಟ್ಟಿಗೆಯೊಳಗೆ ಹೀನ್ ಕೂತಿದ್ದಾಗ ಬಲೂನ್ ಆಕಾಶಕ್ಕೆ ಹಾರಿತು ಎಂದು ಅಲ್ಲೇ ಆಟವಾಡುತ್ತಿದ್ದ ಆತನ ಸಹೋದರ ಪೋಷಕರಿಗೆ ವಿವರಣೆ ನೀಡಿದ್ದ.
ಆತಂಕಗೊಂಡ ತಂದೆ ರಿಚರ್ಡ್ ಮತ್ತು ತಾಯಿ ಮಿಯಾಮಿ ಹೀನ್ ಪೊಲೀಸರ ಮೊರೆ ಹೋಗಿದ್ದರು. ಅಷ್ಟರಲ್ಲಿ ಸುದ್ದಿಗಳಿಗಾಗಿ ಜಾತಕಪಕ್ಷಿಗಳಂತೆ ಕಾಯುತ್ತಿದ್ದ ಮಾಧ್ಯಮಗಳು ಕೂಡ ದಾಂಗುಢಿಯಿಟ್ಟಿದ್ದವು.
ಸುದ್ದಿ ದೇಶ-ವಿದೇಶಗಳಿಗೆ ಹಬ್ಬುತ್ತಿದ್ದಂತೆ ಮಾಧ್ಯಮಗಳು ಇತರ ಸುದ್ದಿಗಳನ್ನು ಬದಿಗೊತ್ತಿ 'ಬಲೂನ್ ಬಾಲಕ'ನ ಸುದ್ದಿಯನ್ನೇ ನೇರ ಪ್ರಸಾರದ ಮೂಲಕ ಬಿತ್ತರಿಸತೊಡಗಿದವು.
ಭೂಮಿಯಿಂದ 70-80 ಮೈಲಿ ಎತ್ತರದವರೆಗೆ ಸಾಗಿದ್ದ ಬೆಳ್ಳಿ ಬಣ್ಣದಿಂದ ಕಂಗೊಳಿಸುತ್ತಿದ್ದ ಬೃಹತ್ ಬಲೂನು ಭಾರೀ ವೇಗದಿಂದ ಮುಂದಕ್ಕೆ ಚಲಿಸುತ್ತಿತ್ತು. ಇದರ ಚಿತ್ರೀಕರಣಕ್ಕೆ ಮಾಧ್ಯಮಗಳ ಹೆಲಿಕಾಫ್ಟರುಗಳು ಪೈಪೋಟಿ ನಡೆಸಿದ್ದರೆ, ಪೊಲೀಸ್ ಮತ್ತು ಮಿಲಿಟರಿ ಹೆಲಿಕಾಫ್ಟರುಗಳು ರಕ್ಷಣೆಗಾಗಿ ಮುಂದಾಗಿದ್ದವು.
ಕೊನೆಗೂ ಅದನ್ನು ಎರಡು ಗಂಟೆಗಳ ನಂತರ ಕೊಲೆರಾಡೋದ ಮರಳುಗಾಡಿನಲ್ಲಿ ಕೆಳಗಿಳಿಸಲಾಯಿತು. ಬಲೂನ್‌ನೊಳಗೆ ನೋಡಿದಾಗ ಖಾಲಿ-ಖಾಲಿ.
ಅಷ್ಟರಲ್ಲಿ ಹೆತ್ತವರು ಮತ್ತೊಂದು ಸುದ್ದಿಯೊಂದಿಗೆ ಸ್ಥಳಕ್ಕೆ ಬಂದರು. ಮಗು ಮನೆಯ ಅಟ್ಟದಲ್ಲಿ ಅಡಗಿಕೊಂಡಿತ್ತು ಎನ್ನುವುದರೊಂದಿಗೆ ಪ್ರಹಸನ ಸುಖಾಂತ್ಯವಾಯಿತು.
ಆದರೆ ಆದ ಖರ್ಚು? ಇಡೀ ದೇಶವೇ ಘಟನೆಯತ್ತ ಗಮನ ಹರಿಸಿದ ಕಾರಣ ಇತರ ಹಲವು ಕಾರ್ಯಗಳು ಸ್ಥಗಿತಗೊಂಡಿದ್ದವು. ಮಾಧ್ಯಮಗಳು ಮತ್ತು ಸರಕಾರಿ ಇಲಾಖೆಗಳು ಕೂಡ ಇದೇ ಕಾರ್ಯದಲ್ಲಿ ಮುಳುಗಿದ್ದವು.
ತಾನು ವಿಜ್ಞಾನಿ ಎಂದು ಹೇಳಿಕೊಂಡಿರುವ ಬಾಲಕನ ತಂದೆ ರಿಚರ್ಡ್ ಬಿರುಗಾಳಿಯಲ್ಲಿ ಹಾರಾಡುವ ಹವ್ಯಾಸವನ್ನು ಹೊಂದಿದವರು ಎಂದು ಹೇಳಲಾಗಿದೆ. ಅದಕ್ಕಾಗಿ ಅವರು ಮನೆಯಲ್ಲಿಯೇ ತಯಾರಿಸಿದ್ದ ಬೃಹತ್ ಬಲೂನ್ ಆಗಿತ್ತದು. ಅವರು ಪ್ರಚಾರಕ್ಕಾಗಿ ಈ ರೀತಿ ಮಾಡಿದ್ದಾರೆ ಎಂಬ ಆರೋಪಗಳನ್ನು ಇದೇ ಸಂದರ್ಭದಲ್ಲಿ ತಳ್ಳಿ ಹಾಕಿದ್ದಾರೆ.