ಮುಂದಿನ ದಿನಗಳಲ್ಲಿ ಬ್ಯಾಂಕ್ ಖಾತೆ ತೆರೆಯಲು, ಪಾಸ್‌ಪೋರ್ಟ್ ಅಥವಾ ವಾಹನ ಚಾಲನಾ ಪರವಾನಗಿ ಪಡೆದುಕೊಳ್ಳಲು ಸೇರಿದಂತೆ ಇನ್ನಿತರ ಹಲವು ಮುಖ್ಯ ಕಾರ್ಯಗಳಿಗಾಗಿ 16 ಅಂಕಿಗಳ ವಿಶಿಷ್ಟ ಗುರುತಿನ ಸಂಖ್ಯೆಯು ಬಳಕೆಯಾಗುವುದರ ಮೂಲಕ ಅನಿವಾರ್ಯವೆನಿಸಲಿದೆ ಎಂದು ಯುಐಡಿಓಐ ಅಧ್ಯಕ್ಷ ನಂದನ್ ನಿಲೇಕಣಿ ತಿಳಿಸಿದ್ದಾರೆ.
ಕೇಂದ್ರ ಸರಕಾರದ ಮಹತ್ವದ ವಿಶಿಷ್ಟ ಗುರುತಿನ ಸಂಖ್ಯೆ (ಯುಐಡಿ) ಯೋಜನೆಯು ಮುಂದಿನ 12-18 ತಿಂಗಳುಗಳಲ್ಲಿ ದೇಶದ ನಾಗರಿಕರಿಗೆ ಲಭ್ಯವಾಗಲಿದೆ. ಆದರೆ ಯಾವುದೇ ಹಕ್ಕು ಅಥವಾ ನಾಗರಿಕನೆಂದು ಈ ಸಂಖ್ಯೆಯ ಮೂಲಕ ಹೇಳಲಾಗದು ಎಂದು ಭಾರತೀಯ ವಿಶಿಷ್ಟ ಗುರುತಿನ ಸಂಖ್ಯೆ ಯೋಜನೆ ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷ ನಂದನ್ ನಿಲೇಕಣಿ ಸ್ಪಷ್ಟಪಡಿಸಿದ್ದಾರೆ.
ವಿಶಿಷ್ಟ ಗುರುತಿನ ಸಂಖ್ಯೆಯು ಪ್ರಸಕ್ತ ಸಂಪೂರ್ಣ ಇಚ್ಛೆಗೆ ಬಿಟ್ಟದ್ದಾಗಿದೆ ಎಂಬುದನ್ನು ಒತ್ತಿ ಹೇಳಿರುವ ಇನ್ಫೋಸಿಸ್ ಸಹ-ಸಂಸ್ಥಾಪಕ, ಇದು ಭವಿಷ್ಯದಲ್ಲಿ ಪೂರ್ಣವ್ಯಾಪ್ತಿ ಮತ್ತು ಸಾರ್ವತ್ರಿಕವಾಗಲಿದೆ ಎಂದು ನುಡಿದರು.
ನೀವು ಪಾಸ್‌ಪೋರ್ಟ್ ಬೇಕೆಂದು ಅರ್ಜಿ ಸಲ್ಲಿಸಿದ್ದಾಗ ಅವರು, ನಿಮ್ಮ ಯುಐಡಿ ಸಂಖ್ಯೆಯನ್ನು ಕೇಳಲಿದ್ದಾರೆ. ಅದೇ ರೀತಿ ಡ್ರೈವಿಂಗ್ ಲೈಸೆನ್ಸ್, ಟ್ಯಾಕ್ಸ್ ಕಟ್ಟುವಾಗ, ಬ್ಯಾಂಕ್ ಖಾತೆ ತೆರೆಯುವಾಗ ಹೀಗೆ ಎಲ್ಲಾ ಕಡೆಯಲ್ಲೂ ಯುಐಡಿ ಸಂಖ್ಯೆಯನ್ನೇ ಕೇಳೇ ಕೇಳುತ್ತಾರೆ. ಹಾಗಾಗಿ ಇದು ಪ್ರತಿಯೊಬ್ಬರಿಗೂ ಅನಿವಾರ್ಯವಾಗಿರುತ್ತದೆ ಎಂದು ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡುತ್ತಾ ಅವರು ತಿಳಿಸಿದ್ದಾರೆ.
ಅಲ್ಲದೆ ಮುಂಬರುವ ಕೆಲವೇ ವರ್ಷಗಳಲ್ಲಿ ಮೇಲೆ ಹೇಳಿದಂತಹ ದಾಖಲೆಗಳಲ್ಲಿ ಯುಐಡಿ ಸಂಖ್ಯೆಯನ್ನು ನಮೂದಿಸುವ ಪರಿಪಾಠ ಆರಂಭವಾಗಲಿದೆ. ಇದರಿಂದಾಗಿ ವ್ಯವಸ್ಥೆಯಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸುವುದು ಕಠಿಣವಾಗಲಿದೆ. ಆ ಮೂಲಕ ಯುಐಡಿ ಸಂಖ್ಯೆಯು ಸಾರ್ವತ್ರಿಕವಾಗಲಿದೆ. ಎಲ್ಲಾ ಪ್ರಮುಖ ದಾಖಲೆಗಳಲ್ಲೂ ಅದು ಸ್ಥಾನ ಪಡೆದುಕೊಳ್ಳಲಿದೆ ಎಂದು ನಿಲೇಕಣಿ ವಿವರಣೆ ನೀಡಿದ್ದಾರೆ.
ಯುಐಡಿ ಸಂಖ್ಯೆಯು ಕಡ್ಡಾಯವಲ್ಲ. ಆದರೆ ಹೆಚ್ಚಿನ ಅರ್ಜಿಗಳು ಈ ಸಂಖ್ಯೆಯನ್ನು ಪೂರ್ವಭಾವಿಯಾಗಿ ಕೇಳುತ್ತವೆ. ಹಾಗಾಗಿ ಯುಐಡಿಯನ್ನು ಹೊಂದುವುದು ಪ್ರತಿಯೊಬ್ಬರಿಗೂ ಅನಿವಾರ್ಯವಾಗುತ್ತದೆ. ಯುಐಡಿ ಸಂಖ್ಯೆಯನ್ನು ಹೊಂದಿದ ನಂತರ ಜೀವನವು ತೀರಾ ಸರಳವಾಗಿ ಮಾರ್ಪಡಬಹುದು ಎಂದು ಅವರು ಅಭಿಪ್ರಾಯಪಟ್ಟರು.