ಸರಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ದೇಶದಲ್ಲೇ ಮೊತ್ತ ಮೊದಲ ಬಾರಿಗೆ ಪ್ರಿಪೇಡ್ ಬ್ರಾಡ್‌ಬ್ಯಾಂಡ್ ಸೇವೆಯನ್ನು ಆರಂಭಿಸಿದೆ. ಯಾವುದೇ ಮಾಸಿಕ ಶುಲ್ಕವಿಲ್ಲದ ಈ ವ್ಯವಸ್ಥೆಯಲ್ಲಿ, ವೆಚ್ಚ ಕಡಿವಾಣ ಸಾಧ್ಯ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಶುಕ್ರವಾರ ಬಿಎಸ್ಎನ್ಎಲ್ ತನ್ನ ಪ್ರಿಪೇಡ್ ಬ್ರಾಡ್‌ಬ್ಯಾಂಡ್ ಸೇವೆಗೆ ಚಾಲನೆ ನೀಡಿದ್ದು ಕರ್ನಾಟಕದಲ್ಲಿ. ಮುಂದಿನ ದಿನಗಳಲ್ಲಿ ಇದು ದೆಹಲಿ ಮತ್ತು ಮುಂಬೈ ಹೊರತುಪಡಿಸಿ ದೇಶದೆಲ್ಲೆಡೆ ಲಭ್ಯವಾಗಲಿದೆ ಎಂದು ಬಿಎಸ್ಎನ್ಎಲ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಕುಲದೀಪ್ ಗೋಯಲ್ ತಿಳಿಸಿದ್ದಾರೆ.
ಇಲ್ಲಿ ಯಾವುದೇ ಮಾಸಿಕ ಸ್ಥಿರ ದರಗಳನ್ನು ವಿಧಿಸಲಾಗುವುದಿಲ್ಲ. ಪೋಸ್ಟ್‌ಪೇಡ್ ಗ್ರಾಹಕರು ಕೂಡ ಈ ಸೇವೆಯನ್ನು ಪಡೆದುಕೊಳ್ಳಬಹುದು. ಪ್ರಿಪೇಡ್ ಬ್ರಾಡ್‌ಬ್ಯಾಂಡ್ ಬಳಕೆದಾರರಿಗೆ ಯೂಸರ್ ನೇಮ್ ಮತ್ತು ಪಾಸ್‌ವರ್ಡ್ ಹೊಂದಿರುವ ಒಂದು ಖಾತೆಯನ್ನು ನೀಡಲಾಗುತ್ತದೆ. 15 ದಿನಗಳ ಸಮಯ ಮಿತಿ ಹೊಂದಿರುವ ರೀಚಾರ್ಜ್ ಕೂಪನ್‌ನಲ್ಲಿ 50 ಎಂಬಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
ಪ್ರಿಪೇಡ್ ಸೇವೆಯಲ್ಲಿ ಅಪರಿಮಿತ ಡೌನ್‌ಲೋಡ್ ವ್ಯವಸ್ಥೆಯನ್ನು 256 ಕೆಪಿಬಿಎಸ್‌ನಿಂದ 2ಎಂಪಿಬಿಎಸ್‌ವರೆಗಿನ ನಾಲ್ಕು ಶ್ರೇಣಿಗಳ ವೋಚರ್‌ಗಳು ಲಭ್ಯವಿದ್ದು, ನಿಗದಿತ ಸಮಯದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಸೀಮಿತ ಡೌನ್‌ಲೋಡ್ ಸೌಲಭ್ಯವು 2ಎಂಪಿಬಿಎಸ್ ವೇಗದಲ್ಲಿ 9 ವೋಚರ್‌ಗಳಲ್ಲಿ ಲಭ್ಯವಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಪ್ರಿಪೇಡ್ ಬ್ರಾಡ್‌ಬ್ಯಾಂಡ್ ಸೇವೆಯಿಂದಾಗಿ ಇಂಟರ್ನೆಟ್ ಬಳಕೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬಹುದು. ಡೌನ್‌ಲೋಡ್ ಮಿತಿಯನ್ನು ಕೂಡ ಹೆಚ್ಚದಂತೆ ತಡೆಯಲು ಇದರಿಂದ ಸಾಧ್ಯವಿದೆ. ಪ್ರಿಪೇಡ್ ಬಳಕೆದಾರರಾಗಿರುವ ವಿದ್ಯಾರ್ಥಿಗಳು ಅಥವಾ ವೃತ್ತಿಪರರ ಗುಂಪೊಂದು ಒಂದೇ ಡಿಎಸ್ಎಲ್ ಸಂಪರ್ಕವನ್ನು ಹಂಚಿಕೊಳ್ಳುವ ಆಯ್ಕೆಯೂ ಇಲ್ಲಿದೆ ಎಂದು ಬಿಎಸ್ಎನ್ಎಲ್ ತಿಳಿಸಿದೆ.
ಮೊಬೈಲ್ ಸೇವೆಯಲ್ಲಿ ನೋಡುವುದಾದರೆ ಶೇ.80ರಷ್ಟು ಗ್ರಾಹಕರು ಪ್ರಿಪೇಡ್‌ನವರು. ಹಾಗಾಗಿ ಬ್ರಾಡ್‌ಬ್ಯಾಂಡ್ ಸೇವೆಯಲ್ಲೂ ಇದೇ ರೀತಿಯ ಬದಲಾವಣೆ ನಿರೀಕ್ಷೆ ಬಿಎಸ್ಎನ್ಎಲ್‌ನದ್ದು. ಅಲ್ಲದೆ ಖರೀದಿ ಮತ್ತು ಸ್ಥಳಾಂತರ ಕೂಡ ತೀರಾ ಸುಲಭವಾಗಿರುವ ಕಾರಣ ಜನಪ್ರಿಯವಾಗಬಹುದು ಎಂದು ಸಂಸ್ಥೆ ಹೇಳುತ್ತಿದೆ.
ಪ್ರಸಕ್ತ ಬೆಂಗಳೂರು ಸೇರಿದಂತೆ ಕರ್ನಾಟಕದ ಬಹುತೇಕ ಕಡೆ ಪ್ರಿಪೇಡ್ ಸೇವೆ ಲಭ್ಯವಿದ್ದು, ಆಸಕ್ತರು ಬೆಂಗಳೂರು ಟೆಲಿಕಾಮ್ ಮತ್ತು ಬಿಎಸ್ಎನ್ಎಲ್ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಸಂಸ್ಥೆ ತಿಳಿಸಿದೆ.