ಕ್ಯಾಲಿಫೋರ್ನಿಯಾ, ಮಂಗಳವಾರ, 27 ಅಕ್ಟೋಬರ್ 2009( 11:14 IST )
ಮೂರು ಬಿಲಿಯನ್ ಡಾಲರ್ ಮೊತ್ತಕ್ಕೆ 10 ವರ್ಷಗಳ ಹಿಂದೆ ಖರೀದಿಸಿದ್ದ ಉಚಿತ ವೆಬ್ ಹೋಸ್ಟಿಂಗ್ ಇಂಟರ್ನೆಟ್ ತಾಣ 'ಜಿಯೋಸಿಟೀಸ್'ಗೆ ಯಾಹೂ ಸೋಮವಾರ ಬೀಗ ಜಡಿದಿದೆ.
ವಿಶ್ವದಾದ್ಯಂತದ ಯಾಹೂ ಬಳಕೆದಾರರು ಸೃಷ್ಟಿಸಿದ ವೆಬ್‌ಸೈಟ್‌ಗಳನ್ನು ಸಲಹಿದ ನಾವು ಸಂತೃಪ್ತರಾಗಿದ್ದು, ನೀವು ಕಟ್ಟಿ ಕಟ್ಟಿ ಬೆಳೆಸಿದ ಸಮುದಾಯವು ನಮಗೆ ಹೆಮ್ಮೆ ತಂದಿದೆ ಎಂದು ಕ್ಯಾಲಿಫೋರ್ನಿಯಾ ಮೂಲದ ಇಂಟರ್ನೆಟ್ ದೈತ್ಯ ಸಂಸ್ಥೆ ಜಿಯೋಸಿಟೀಸ್ ವೆಬ್‌ಸೈಟ್‌ನಲ್ಲಿ ತಿಳಿಸಿದೆ.
ನಾವೀಗ ಗ್ರಾಹಕರ ಅನ್ವೇಷಣೆ ಮತ್ತು ಸಂಬಂಧಗಳ ಬೆಳವಣಿಗೆಗೆ ಆನ್‌ಲೈನ್‌ನಲ್ಲಿನ ಇತರ ಹಾದಿಗಳ ಮೂಲಕ ಸಹಕಾರ ನೀಡುವತ್ತ ಗಮನ ಕೇಂದ್ರೀಕರಿಸಲು ನಿರ್ಧರಿಸಿದ್ದೇವೆ. ಅಕ್ಟೋಬರ್ 26, 2009ರಿಂದ ಅನ್ವಯವಾಗುವಂತೆ ನೀವು ಜಿಯೋಸಿಟೀಸ್‌ನ ಉಚಿತ ಹೋಸ್ಟಿಂಗ್ ತಾಣದಲ್ಲಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ. ಆದರೆ ಇಲ್ಲಿ ನೀವು ಈ ಹಿಂದೆ ಸೃಷ್ಟಿಸಿರುವ ತಾಣಗಳನ್ನು ಯಾಹೂ ಸೇರಿದಂತೆ ಇತರ ವೆಬ್ ಹೋಸ್ಟಿಂಗ್ ತಾಣಗಳಿಗೆ ವರ್ಗಾಯಿಸಬಹುದಾಗಿದೆ ಎಂದು ಜಿಯೋಸಿಟೀಸ್ ಹೇಳಿಕೆ ನೀಡಿದೆ.
ಜಿಯೋಸಿಟೀಸ್ ನಿರಾಶ್ರಿತರು ತಮ್ಮ ತಾಣಗಳನ್ನು ನೂತನ ಹೋಸ್ಟಿಂಗ್‌ಗೆ ವರ್ಗಾಯಿಸುವುದಾದಲ್ಲಿ, ಯಾಹೂ 12 ತಿಂಗಳುಗಳ ಅವಧಿಗೆ ಕೇವಲ ಐದು ಡಾಲರ್ ವೆಚ್ಚದಲ್ಲಿ ಅವಕಾಶ ನೀಡಲಿದೆ. ಇದು ಆರಂಭಿಕ ಕೊಡುಗೆಯೆಂದೂ ಯಾಹೂ ತಿಳಿಸಿದೆ.
ಯಾಹೂ ಸಂಸ್ಥೆಯ ಆಕ್ರಮಣಕಾರಿ ವೆಚ್ಚ ಕಡಿತದಿಂದಾಗಿ ಮೂರನೇ ತ್ರೈಮಾಸಿಕ ಆದಾಯದಲ್ಲಿ ಶೇ.12ರ ಹಿನ್ನಡೆ ದಾಖಲಾಗಿದ್ದರೂ, ನಿವ್ವಳ ಲಾಭದಲ್ಲಿ ಮೂರು ಪಟ್ಟು ಹೆಚ್ಚಳ ದಾಖಲಿಸಿತ್ತು. ಈ ವರದಿ ಬಿಡುಗಡೆಯಾದ ವಾರದ ನಂತರ ಜಿಯೋಸಿಟೀಸ್ ಮುಚ್ಚುವ ತೀರ್ಮಾನಕ್ಕೆ ಯಾಹೂ ಬಂದಿದೆ.
1994ರಲ್ಲಿ ಡೇವಿಡ್ ಬೊಹ್ನೆಟ್ ಮತ್ತು ಜಾನ್ ರೇಜ್ನರ್ ಸ್ಥಾಪಿಸಿದ್ದ ಜಿಯೋಸಿಟೀಸ್ ಉಚಿತ ವೆಬ್ ಹೋಸ್ಟಿಂಗ್ ತಾಣವನ್ನು ಯಾಹೂ 1999ರಲ್ಲಿ ಖರೀದಿಸಿತ್ತು. ಇಡೀ ವೆಬ್ ಜಗತ್ತೇ ನಿಬ್ಬೆರಗಾಗುವಂತೆ ಯಾಹೂ ಇದನ್ನು 3.57 ಬಿಲಿಯನ್ ಡಾಲರ್‌ಗೆ ಖರೀದಿಸುವ ಮೂಲಕ ಕ್ರಾಂತಿಯನ್ನೇ ಮಾಡಿತ್ತು. ಆದರೆ ಅದಾದ 10 ವರ್ಷಗಳ ನಂತರ ಇದೀಗ ತಾಣವನ್ನು ಮುಚ್ಚಲಾಗಿದೆ.