2009-10ರ ಸಾಲಿನಲ್ಲಿ ಇದುವರೆಗೆ ತೆರಿಗೆ ಪಾವತಿಸಿದವರಲ್ಲಿ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈಎಸ್ಆರ್ ರೆಡ್ಡಿ ಪುತ್ರ ಜಗನ್ ಮೋಹನ್ ರೆಡ್ಡಿ ಮತ್ತು ಐಪಿಎಲ್ ಆಯುಕ್ತ ಲಲಿತ್ ಮೋದಿ ಅಗ್ರರಾಗಿ ಕಾಣಿಸಿಕೊಂಡಿದ್ದಾರೆ.
2008-09ರ ಇಡೀ ಹಣಕಾಸು ವರ್ಷದಲ್ಲಿ ಕೇವಲ 2.92 ಲಕ್ಷ ರೂಪಾಯಿ ತೆರಿಗೆ ಪಾವತಿಸಿದ್ದ ಜಗನ್, 2009-10ರ ಸಾಲಿನ ಮೊದಲ ಆರು ತಿಂಗಳ ಅವಧಿಯಲ್ಲಿ ಮುಂಗಡ 6.6 ಕೋಟಿ ತೆರಿಗೆ ಪಾವತಿ ಮಾಡಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ 70 ಕೋಟಿ ರೂಪಾಯಿಗಳ ವೈಯಕ್ತಿಕ ಆದಾಯ ನಿರೀಕ್ಷೆಯಲ್ಲಿರುವ ಜಗನ್ ಕನಿಷ್ಠ 22 ಕೋಟಿ ತೆರಿಗೆ ಪಾವತಿಸಲಿದ್ದಾರೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ಗಾದಿಗೆ ಪ್ರಮುಖ ಅಭ್ಯರ್ಥಿಯಾಗಿರುವ ಜಗನ್ ಕಳೆದ ವರ್ಷ ಎಚ್1 ತೆರಿಗೆ ಪಾವತಿದಾರನಾಗಿರಲಿಲ್ಲ. ಆದರೆ ಈ ವರ್ಷ ಅವರು ಈಗಾಗಲೇ 6.6 ಕೋಟಿ ರೂಪಾಯಿಗಳನ್ನು ಪಾವತಿ ಮಾಡಿಯಾಗಿದೆ. ಅಗ್ರ 100 ತೆರಿಗೆ ಪಾವತಿದಾರರಲ್ಲಿ ಕಂಡು ಬಂದಿರುವ ಪ್ರಮುಖ ರಾಜಕಾರಣಿ ಇವರೊಬ್ಬರೇ ಎಂದು ಮೂಲಗಳು ಹೇಳಿವೆ.
ಕ್ರಿಕೆಟ್ ಆಟಗಾರರ ವಿಭಾಗದಲ್ಲಿ ಗಮನ ಹರಿಸುವುದಾದರೆ ಕಳೆದ ವರ್ಷ 8 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದ ಸಚಿನ್ ತೆಂಡೂಲ್ಕರ್ ಈ ವರ್ಷದ ಮೊದಲ ಆರು ತಿಂಗಳಲ್ಲಿ ಕೇವಲ 1.5 ಕೋಟಿ ತೆರಿಗೆಯನ್ನು ಅವರು ಪಾವತಿಸಿದ್ದಾರೆ. ಕಳೆದ ವರ್ಷ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಮಹೇಂದ್ರ ಸಿಂಗ್ ಧೋನಿ 4.6 ಕೋಟಿ ತೆರಿಗೆ ಪಾವತಿಸಿದ್ದರು. ಅವರು ಈ ವರ್ಷದ ಸೆಪ್ಟೆಂಬರ್‌ವರೆಗೆ 2 ಕೋಟಿ ರೂಪಾಯಿ ತೆರಿಗೆ ಕಟ್ಟಿದ್ದಾರೆ. ಪ್ರಸಕ್ತ ಹಣಕಾಸು ವರ್ಷಾಂತ್ಯದೊಳಗೆ ಅವರು ಸಚಿನ್‌ರನ್ನು ಮೀರಿಸುವ ಸಾಧ್ಯತೆಗಳಿವೆ.
ಆದರೆ ಇವರೆಲ್ಲರಿಗಿಂತಲೂ ಹೆಚ್ಚು ಅಚ್ಚರಿ ತಂದಿರುವವರು ಲಲಿತ್ ಮೋದಿ. ಅವರು ಯುವರಾಜ್ ಸಿಂಗ್, ಹರಭಜನ್ ಸಿಂಗ್ ಮತ್ತು ವೀರೇಂದ್ರ ಸೆಹ್ವಾಗ್‌ರನ್ನು ಹಿಂದಿಕ್ಕಿದ್ದು ಈಗಾಗಲೇ 8 ಕೋಟಿ ರೂಪಾಯಿ ತೆರಿಗೆ ಪಾವತಿಸಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಇದುವರೆಗಿನ ತೆರಿಗೆ ಪಾವತಿಯ ಪ್ರಕಾರ ಇದು ಧೋನಿಯವರ ನಾಲ್ಕು ಪಟ್ಟು, ಸಚಿನ್‌ಗಿಂತ ಐದು ಪಟ್ಟು ಹೆಚ್ಚು ತೆರಿಗೆ. ಅವರು 2008-09ರ ಸಾಲಿನಲ್ಲಿ ಕೇವಲ 32 ಲಕ್ಷ ರೂಪಾಯಿ ತೆರಿಗೆ ಪಾವತಿಸಿದ್ದರು ಎನ್ನುವುದು ಕುತೂಹಲಕಾರಿ ಅಂಶ.