ಜಮ್ಮು-ಕಾಶ್ಮೀರದಲ್ಲಿ ಪ್ರಿಪೇಡ್ ಮೊಬೈಲ್ ಬಳಕೆಯ ಮೇಲೆ ಕೇಂದ್ರ ಸರಕಾರ ಹೇರಿರುವ ನಿಷೇಧ ತಾತ್ಕಾಲಿಕವಾಗಿದ್ದು, ಶೀಘ್ರದಲ್ಲೇ ತೆರವುಗೊಳಿಸಲಾಗುತ್ತದೆ ಎಂದು ಕೇಂದ್ರ ನೂತನ ಮತ್ತು ಪುನರ್ಬಳಕೆ ಇಂಧನ ಸಚಿವ ಫಾರೂಕ್ ಅಬ್ದುಲ್ಲಾ ತಿಳಿಸಿದ್ದಾರೆ.
ಪ್ರಿಪೇಡ್ ಮೊಬೈಲ್ ಫೋನ್ ಸಂಪರ್ಕಗಳ ಮೇಲೆ ರಾಜ್ಯದಲ್ಲಿ ಹೇರಲಾಗಿರುವ ನಿಷೇಧವು ತಾತ್ಕಾಲಿಕವಾಗಿದೆ. ಈ ನಿಷೇಧವನ್ನು ಕೆಲವೇ ಸಮಯದಲ್ಲಿ ತೆರವು ಮಾಡಲಾಗುತ್ತದೆ ಎಂದು ಎಸ್‌ಕೆ ಕ್ರೀಡಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ತಿಳಿಸಿದರು.
ಮೊಬೈಲ್ ಸಂಪರ್ಕಗಳ ದುರ್ಬಳಕೆಯಾಗುತ್ತಿದೆ ಎಂಬ ಭಾವನೆಯಿಂದ ಕೇಂದ್ರವು ಈ ನಿಷೇಧವನ್ನು ಹೇರಿದೆ. ರಾಜ್ಯ ಸರಕಾರವು ಈ ಸಂಬಂಧ ಕೇಂದ್ರದೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ. ಶೀಘ್ರದಲ್ಲೇ ಪ್ರಿಪೇಡ್ ಮೊಬೈಲ್ ಸಂಪರ್ಕ ವ್ಯವಸ್ಥೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲಾಗುತ್ತದೆ ಎಂದು ಅಬ್ದುಲ್ಲಾ ಹೇಳಿದ್ದಾರೆ.
ಮೊಬೈಲ್ ಸೇವಾದಾರರು ಅಗತ್ಯ ದಾಖಲೆಗಳನ್ನು ಪರಿಶೀಲಿಸದೆ ಅಥವಾ ನಿರ್ಲಕ್ಷ್ಯವಹಿಸಿ ಸಂಪರ್ಕಗಳನ್ನು ನೀಡುತ್ತಿರುವುದರಿಂದ ಭಯೋತ್ಪಾದಕ ಕೃತ್ಯಗಳಿಗೆ ಸಹಕಾರವಾಗುತ್ತಿದೆ. ಈ ಹಿನ್ನಲೆಯಲ್ಲಿ ನಿಷೇಧ ಅನಿವಾರ್ಯ ಎಂದು ಮನಗಂಡಿದ್ದ ಕೇಂದ್ರವು ನವೆಂಬರ್ 1ರಿಂದ ಜಾರಿಗೆ ಬರುವಂತೆ ಜಮ್ಮು-ಕಾಶ್ಮೀರದಲ್ಲಿ ಪ್ರಿಪೇಡ್ ಮೊಬೈಲ್ ಬಳಸದಂತೆ ನಿಷೇಧ ಹೇರಿತ್ತು.
ಪರಿಣಾಮ ಏರ್‌ಟೆಲ್ 19 ಲಕ್ಷ, ಬಿಎಸ್‌ಎನ್ಎಲ್ 12 ಲಕ್ಷ ಹಾಗೂ ಏರ್‌ಸೆಲ್ ಏಳು ಲಕ್ಷ ಚಂದಾದಾರರ ಮೇಲಾಗಿದ್ದು, ಈಗಿರುವ ಪ್ರಿಪೇಡ್ ಸಂಪರ್ಕಗಳನ್ನು ಪೋಸ್ಟ್‌ಪೇಡ್‌ಗೆ ವರ್ಗಾಯಿಸಲಾಗುತ್ತದೆ ಎಂದು ಸರಕಾರ ತಿಳಿಸಿದೆ.
ಪ್ರಸಕ್ತ ರಾಜ್ಯದಲ್ಲಿ 38 ಲಕ್ಷ ಪ್ರಿ-ಪೇಡ್ ಸಂಪರ್ಕಗಳನ್ನು ವಿವಿಧ ಮೊಬೈಲ್ ಸೇವಾದಾರ ಸಂಸ್ಥೆಗಳು ಹೊಂದಿವೆ. ಅಗತ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿದ ನಂತರ ಅವರ ಸಂಪರ್ಕಗಳನ್ನು ಬದಲಾಯಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.