ಪ್ರಸಕ್ತ ಹಣಕಾಸು ವರ್ಷದಲ್ಲಿ ಅಂದಾಜಿಸಿರುವ ಶೇ.6.3ರ ಪ್ರಗತಿಗಿಂತ ಹೆಚ್ಚಿನ ಪ್ರಗತಿಯು ಮುಂದಿನ ಆರ್ಥಿಕ ವರ್ಷದಲ್ಲಿ ದಾಖಲಾಗಲಿದ್ದು, ಶೇ.8ನ್ನು ಮುಟ್ಟಬಹುದು ಎಂದು ಕೇಂದ್ರ ಯೋಜನಾ ಆಯೋಗವು ತಿಳಿಸಿದೆ.
ದೇಶದ ಆರ್ಥಿಕ ಪರಿಸ್ಥಿತಿಯನ್ನು ಇತ್ತೀಚೆಗಷ್ಟೇ ಪರಿಶೀಲನೆ ನಡೆಸಿದ್ದ ಆಯೋಗವು 2011-12ರ ಅವಧಿಯಲ್ಲಿ ಶೇ.9ರವರೆಗಿನ ಒಟ್ಟು ದೇಶೀಯ ಉತ್ಪಾದನೆಯನ್ನು ನಿರೀಕ್ಷಿಸುತ್ತಿದೆ. 2014-15ರ ಹಣಕಾಸು ವರ್ಷದಲ್ಲಿ ಇದು ಶೇ.10ಕ್ಕೆ ತಲುಪಬಹುದು ಎಂಬುದು ಅದರ ಅಂದಾಜು.
ಇತ್ತೀಚೆಗಷ್ಟೇ 11ನೇ ಹಣಕಾಸು ಆಯೋಗದ ವರದಿಗೂ ಮೊದಲು ರಾಜ್ಯ ಸರಕಾರಗಳ ಹಣಕಾಸು ಲೆಕ್ಕಾಚಾರ ಸಂದರ್ಭದಲ್ಲಿ ಯೋಜನಾ ಆಯೋಗವು ಈ ಅಂದಾಜನ್ನು ಮಾಡಿತ್ತು.
ಜಾಗತಿಕ ಆರ್ಥಿಕ ಹಿಂಜರಿತದ ಪರಿಣಾಮ ಭಾರತ ದೇಶೀಯ ಉತ್ಪಾದನಾ ಪ್ರಗತಿಯು 2008-09ರ ಸಾಲಿನಲ್ಲಿ ಶೇ.6.7ಕ್ಕೆ ಕುಸಿದಿತ್ತು. ವರ್ಷದ ಹಿಂದೆ ಭಾರತವು ಶೇ.9ರ ಜಿಡಿಪಿ ಪಡೆದಿತ್ತು.
ಪ್ರಸಕ್ತ ಹಣಕಾಸು ವರ್ಷದಲ್ಲಿ (2009-10) ಭಾರತವು ಶೇ.6.3ರ ಪ್ರಗತಿಯನ್ನು ದಾಖಲಿಸಲಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದಲ್ಲಿ ಕುಸಿತ ಎಂದು ಯೋಜನಾ ಆಯೋಗ ಹೇಳಿತ್ತು.
ಈ ಹಣಕಾಸು ವರ್ಷದ ಆರಂಭಿಕ ತ್ರೈಮಾಸಿಕ ಅವಧಿಯಲ್ಲಿ ದೇಶವು ಶೇ.6.1ಕ್ಕೆ ವೃದ್ಧಿಯಾಗಿದ್ದರೂ, ಎರಡನೇ ತ್ರೈಮಾಸಿಕ ಅವಧಿಯ ವರದಿಯಲ್ಲಿ ಮತ್ತಷ್ಟು ಕುಸಿತವಾಗುವ ಸಾಧ್ಯತೆಗಳಿವೆ ಎಂದು ಅಂದಾಜಿಸಲಾಗಿದೆ.