ಬರ ಮತ್ತು ನೆರೆಯಿಂದ ತತ್ತರಿಸಿರುವ ಭಾರತವು ಆಹಾರ ವಸ್ತುಗಳ ಕೊರತೆಯನ್ನು ನೀಗಿಸಲು ಥಾಯ್ಲೆಂಡ್ ಮತ್ತು ವಿಯೆಟ್ನಾಂ ದೇಶಗಳಿಂದ ಎರಡು ಮಿಲಿಯನ್ ಅಕ್ಕಿಯನ್ನು ಆಮದು ಮಾಡಿಕೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಸಂಬಂಧ ನವೆಂಬರ್ 12ರಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ನೇತೃತ್ವದಲ್ಲಿ ಸಚಿವರುಗಳ ಸಮಿತಿಯ ಸಭೆ ನಡೆಯಲಿದ್ದು, ಹಲವು ದೇಶಗಳ ಪ್ರಸ್ತಾಪಗಳನ್ನು ಅವರು ಪರಿಶೀಲಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಕಳೆದ 37 ವರ್ಷಗಳಲ್ಲೇ ಅತೀ ಕಡಿಮೆ ಮಳೆಯನ್ನೆದುರಿಸಿದ ಕಾರಣ ಮತ್ತು ನಂತರದ ದಿನಗಳಲ್ಲಿ ನೆರೆಯಿಂದ ಹಾನಿ ಅನುಭವಿಸಿದ್ದರಿಂದ ಭಾರತವು ಅಕ್ಕಿ ಉತ್ಪಾದನೆಯಲ್ಲಿ ಭಾರೀ ಹಿನ್ನಡೆ ಅನುಭವಿಸಿದೆ. ಈ ಹಿನ್ನಲೆಯಲ್ಲಿ ವಿದೇಶಗಳಿಂದ ಭಾರೀ ಪ್ರಮಾಣದಲ್ಲಿ ಅಕ್ಕಿ ಆಮದು ಮಾಡಿಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಿದೆ.
ಪ್ರಸಕ್ತ ವರ್ಷ 15 ಮಿಲಿಯನ್ ಟನ್ ಅಥವಾ ಶೇಕಡಾ 18ರಷ್ಟು ಅಕ್ಕಿ ಉತ್ಪಾದನೆಯಲ್ಲಿ ಕುಸಿತ ಕಾಣಲಿದೆ ಎನ್ನುವುದು ಸರಕಾರದ ಅಂದಾಜು. ಹಾಗಾಗಿ ಸರಕಾರಿ ಸ್ವಾಮ್ಯದ ಸಂಸ್ಥೆಗಳು 30,000 ಟನ್ ಅಕ್ಕಿ ಆಮದು ಟೆಂಡರಿಗೆ ಚಾಲನೆ ನೀಡಿವೆ.
ಹಲವು ರಾಜ್ಯಗಳಲ್ಲಿ ಇನ್ನೂ ಕಟಾವು ನಡೆಯುತ್ತಿರುವುದರಿಂದ ಉತ್ಪಾದನೆ ಕುಸಿತದ ಅಂದಾಜಿನ ಮಿತಿ ಏರಿಕೆಯಾಗುವ ಸಾಧ್ಯತೆಗಳೂ ಇವೆ ಎಂದು ಸರಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಹಾರ ವಸ್ತುಗಳ ಉತ್ಪಾದನೆಗೆ ದೊಡ್ಡ ಹೊಡೆತ ನೀಡಿದ್ದು ಬರಗಾಲ. ಇದೀಗ ನಾವು ಅಂದಾಜು ಮಾಡಿರುವುದು ಕೇವಲ ಮೊದಲ ಹಂತದ ನಷ್ಟ ಮಾತ್ರ. ಫೆಬ್ರವರಿ ಹೊತ್ತಿಗೆ ಸ್ಪಷ್ಟ ಮಾಹಿತಿ ಲಭ್ಯವಾಗಲಿದೆ ಎಂದು ಕೃಷಿ ಆಯುಕ್ತ ಎನ್‌ಬಿ ಸಿಂಗ್ ಹೇಳಿದ್ದಾರೆ.
ಅಕ್ಕಿ ಉತ್ಪಾದನೆಯಲ್ಲಿ 10 ಮಿಲಿಯನ್ ಟನ್ ಕುಸಿತವಾಗಬಹುದು ಎಂದು ಭಾರತ ಆರಂಭದಲ್ಲಿ ಲೆಕ್ಕಾಚಾರ ಹಾಕಿತ್ತು. ಆದರೆ ಅಮೆರಿಕಾದ ಕೃಷಿ ಇಲಾಖೆಯು ಇದನ್ನು ನಿರಾಕರಿಸಿ, ಕಳೆದ ವರ್ಷಕ್ಕಿಂತ 15ರಿಂದ 17 ಮಿಲಿಯನ್ ಟನ್ ಅಕ್ಕಿ ಉತ್ಪಾದನೆ ಕುಸಿತ ಕಾಣಲಿದೆ ಎಂದು ಕಳೆದ ವಾರ ಹೇಳಿತ್ತು. ಈ ಹಿಂದಿನ ವರ್ಷದಲ್ಲಿ ಭಾರತವು 99.2 ಮಿಲಿಯನ್ ಟನ್ ಅಕ್ಕಿ ಉತ್ಪಾದಿಸಿತ್ತು.