ಅಕ್ಟೋಬರ್ 22ರಂದು ಅಧಿಕೃತವಾಗಿ ಮೈಕ್ರೋಸಾಫ್ಟ್ ತನ್ನ ನೂತನ ಆಪರೇಟಿಂಗ್ ಸಿಸ್ಟಂ ಬಿಡುಗಡೆ ಮಾಡಿದ ನಂತರ ಭಾರತದಲ್ಲಿ ಕನಿಷ್ಠ 50,000 ನಕಲು ಮಾಡಲಾದ 'ವಿಂಡೋಸ್ 7' ಡಿವಿಡಿಗಳು ಮಾರಾಟವಾಗಿವೆ ಎಂದು ಹೇಳಲಾಗಿದ್ದು, 50 ಲಕ್ಷ ರೂಪಾಯಿಗಳ ವ್ಯವಹಾರ ನಡೆಸಲಾಗಿದೆ.
ಮೂಲ ವಿಂಡೋಸ್ 7ನ್ನು ಬೇರೆ ಡಿವಿಡಿಗಳಿಗೆ ನಕಲು ಮಾಡಿ ಮಾರಾಟ ಮಾಡಲಾಗುತ್ತಿದ್ದು, ಗ್ರಾಹಕರು ಇದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಅದಕ್ಕಿರುವ ಕಾರಣ ತೀರಾ ಅಗ್ಗದಲ್ಲಿದು ಸಿಗುತ್ತಿರುವುದು.
ಮೂಲಗಳ ಪ್ರಕಾರ ಪ್ರತೀ ವಿಂಡೋಸ್ 7 ಡಿವಿಡಿ 40 ರೂಪಾಯಿಗಳಿಂದ 250ರ ರೂಪಾಯಿಯೊಳಗೆ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಭಾರತದ ಅನೇಕ ಕಡೆ ಇಂತಹ ಡಿವಿಡಿಗಳು ಈಗ ಲಭ್ಯ.
ಉತ್ತರ ಪ್ರದೇಶದ ಹಜ್ರತ್‌ಗಂಜ್ ಮಾರುಕಟ್ಟೆಯಲ್ಲಿ ವಿಂಡೋಸ್ 7 ನಕಲಿ ಡಿವಿಡಿಗಳನ್ನು ರಾಜಾರೋಷವಾಗಿ ಮಾರಾಟ ಮಾಡಲಾಗುತ್ತಿದೆ. ಮಧ್ಯಪ್ರದೇಶ, ಬಿಹಾರ, ಉತ್ತರಾಂಚಲ ಮತ್ತು ನೇಪಾಳ, ಬಾಂಗ್ಲಾದೇಶಗಳಿಂದಲೂ ಬೇಡಿಕೆಯಿರುವುದು ಮತ್ತಷ್ಟು ಅಚ್ಚರಿ ತಂದಿದೆ.
ಮೈಕ್ರೋಸಾಫ್ಟ್ ಬಿಡುಗಡೆ ಮಾಡಿರುವ ವಿಂಡೋಸ್ 7 ಅಧಿಕೃತ ಆವೃತ್ತಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ 7,500ಯಿಂದ 15,000 ರೂಪಾಯಿಗಳನ್ನು (150ರಿಂದ 300 ಡಾಲರ್) ವಿಧಿಸಲಾಗುತ್ತದೆ.
ಆದರೆ ಭಾರತದಲ್ಲಿನ ನಕಲಿ ಹಾವಳಿಯನ್ನು ತಪ್ಪಿಸಲು ಮೈಕ್ರೋಸಾಫ್ಟ್ ಶೇ.20ರಷ್ಟು ಬೆಲೆ ಇಳಿಕೆ ಮಾಡಿತ್ತು. ಅದರ ಪ್ರಕಾರ ದೇಶದಲ್ಲೀಗ 6,000 ರೂಪಾಯಿಗಳಿಂದ 11,000 ರೂಪಾಯಿಯೊಳಗೆ ವಿಂಡೋಸ್ 7 ಲಭ್ಯವಿದೆ.
ಮೈಕ್ರೋಸಾಫ್ಟ್ ಕಡಿತ ಪ್ರಕಟಿಸಿದ್ದರೂ ಖರೀದಿದಾರರು ನಕಲಿ ಆವೃತ್ತಿಯನ್ನೇ ಅವಲಂಬಿಸಿದ್ದಾರೆ. 250 ರೂಪಾಯಿಗಳಿಗೆ ಸಿಗುವಾಗ 10,000 ರೂಪಾಯಿ ನೀಡಲು ಯಾರು ತಾನೇ ಸಿದ್ಧರಿದ್ದಾರೆ ಎಂದು ಎಂಸಿಎ ವಿದ್ಯಾರ್ಥಿ ಪ್ರಮೋದ್ ಯಾದವ್ ಪ್ರಶ್ನಿಸುತ್ತಾರೆ.
ನಾವು ಖಾಯಂ ಗಿರಾಕಿಗಳಾಗಿರುವುದರಿಂದ ಕೇವಲ ಡಿವಿಡಿ ಹಣವನ್ನಷ್ಟೇ ನೀಡುತ್ತೇವೆ. ಡಿವಿಡಿಗೆ ಹೆಚ್ಚೆಂದರೆ 20ರಿಂದ 40 ರೂಪಾಯಿ ಎಂದು ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ನಿರ್ವಹಣಾ ಸಂಸ್ಥೆಯನ್ನು ನಡೆಸುತ್ತಿರುವ ಮೋಹಿತ್ ಸಿಂಗ್ ಹೇಳುತ್ತಾರೆ.
ವಿಂಡೋಸ್ 7 ನಕಲಿ ಮಾಡಿ ಮಾರಾಟ ಮಾಡುತ್ತಿದ್ದರೂ, ತಾವು ಮಾಡುತ್ತಿರುವುದು ಕಾನೂನು ಬಾಹಿರ ಎಂಬುದನ್ನು ಅವರು ಒಪ್ಪಿಕೊಳ್ಳುತ್ತಿಲ್ಲ.
ನಾಜಾ ಮಾರುಕಟ್ಟೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಅಂಗಡಿಗಳಿವೆ. ನಿಮಗೇನು ಬೇಕು ಅವೆಲ್ಲವೂ ಇಲ್ಲಿ ಲಭ್ಯ. ಎಲ್ಲವೂ ಇಂಟರ್ನೆಟ್‌ನಲ್ಲಿ ಲಭ್ಯವಿರುವುದರಿಂದ ನಾವು ಮಾಡುತ್ತಿರುವುದು ಅಕ್ರಮವಲ್ಲ ಎಂದು ಹೆಸರು ಹೇಳಲಿಚ್ಛಿಸದ ಅಂಗಡಿವಾಲಾರೊಬ್ಬರು ತಿಳಿಸಿದ್ದಾರೆ.