ಹಣದುಬ್ಬರ ದರವನ್ನು ವಾಸ್ತವಕ್ಕೆ ಹೆಚ್ಚು ಹತ್ತಿರವಾದ ನೂತನ ವಿಧಾನದ ಮೂಲಕ ಪ್ರಚುರಪಡಿಸುವ ನಿರ್ಧಾರಕ್ಕೆ ಸರಕಾರ ಬಂದಿದ್ದು, ಅದರ ಪ್ರಕಾರ ಅಕ್ಟೋಬರ್ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಆಹಾರ ವಸ್ತುಗಳ ಹಣದುಬ್ಬರ ದರವು ಶೇ.13.39ಕ್ಕೆ ತಲುಪಿದೆ.
ಅತ್ಯಾವಶ್ಯಕ ವಸ್ತುಗಳು ಮತ್ತು ಇಂಧನಗಳ ದರವನ್ನು ವಾರವನ್ನಾಧರಿಸಿದ ವರದಿಯನ್ನು ಪ್ರಕಟಿಸುವ ನೂತನ ವಿಧಾನಕ್ಕೆ ಇಂದು ಚಾಲನೆ ನೀಡಲಾಗಿದ್ದು, ಕಳೆದೊಂದು ವರ್ಷದ ಅವಧಿಯಲ್ಲಿ ಆಲೂಗಡ್ಡೆ ದರ ದ್ವಿಗುಣಗೊಂಡಿದೆ ಎಂದು ವರದಿ ತಿಳಿಸಿದೆ.
ಕಳೆದ ವರ್ಷದ ಅಕ್ಟೋಬರ್ ತಿಂಗಳ ಇದೇ ಅವಧಿಯಿಂದ ಇಲ್ಲಿಯವರೆಗೆ ಈರುಳ್ಳಿ ಬೆಲೆ ಕೂಡ ಎರಡು ಪಟ್ಟು ಹೆಚ್ಚಳವಾಗಿದೆ. ಬೇಳೆಕಾಳು ದರದಲ್ಲಿ ಶೇ.23.34ರ ಏರಿಕೆಯಾಗಿದೆ. ಆಹಾರೇತರ ವಸ್ತುಗಳು ಸೇರಿದಂತೆ ಪ್ರಮುಖ ವಸ್ತುಗಳ ಸೂಚ್ಯಂಕವು ಶೇ.8.94ರಷ್ಟು ಹೆಚ್ಚಳವಾಗಿದೆ.
ಎಲ್ಲಾ ವಸ್ತುಗಳ ವಾರ್ಷಿಕ ಹಣದುಬ್ಬರ ದರಕ್ಕಿಂತ ಆಯ್ದ ವಸ್ತುಗಳ ಹಣದುಬ್ಬರ ನಿರ್ಧರಿಸುವುದು ಉತ್ತಮ ವಿಧಾನ ಎಂಬುದನ್ನು ಮನಗಂಡ ಸರಕಾರ ಈ ಬದಲಾವಣೆಗೆ ನಿರ್ಧರಿಸಿತ್ತು.
ಈ ಹಿಂದಿನ ವಿಧಾನ ಪ್ರಕಾರ ಅಕ್ಟೋಬರ್ 17ರ ಅಂತ್ಯಗೊಂಡ ವಾರದಲ್ಲಿ ಸಗಟು ದರ ಸೂಚ್ಯಂಕವನ್ನಾಧರಿಸಿದ ಹಣದುಬ್ಬರ ದರವು ಶೇ.1.51ರಲ್ಲಿತ್ತು.
ಅಕ್ಟೋಬರ್ 24ಕ್ಕೆ ಅಂತ್ಯಗೊಂಡ ವಾರದಲ್ಲಿ ಅಕ್ಕಿ (ಶೇ.12.19) ಮತ್ತು ಹಾಲಿನ ದರ (ಶೇ.10.3) ಶೇ.10ರಷ್ಟು ಹೆಚ್ಚಳ ಕಂಡಿದೆ.
ಮತ್ತೊಂದು ಕಡೆ ಆಹಾರೇತರ ವಸ್ತುಗಳಾದ ಫೈಬರ್, ತೈಲ ಬೀಜಗಳು, ಖನಿಜಗಳ ದರದಲ್ಲಿ ಶೇ.0.25ರ ಕುಸಿತವಾಗಿದೆ. ಜತೆಗೆ ಇಂಧನ, ವಿದ್ಯುತ್, ಲೈಟ್ ಮತ್ತು ಕೀಲೆಣ್ಣೆ ಸೂಚ್ಯಂಕದಲ್ಲಿ ಶೇ.6.2ರ ಹಿನ್ನಡೆ ದಾಖಲಾಗಿದೆ.